ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್ ಖಾಲಿದ್ ರೀತಿಯಲ್ಲೇ ಸೌರವ್ ದಾಸ್, ಆಶುತೋಷ್ ರಾಂಕಾರನ್ನು ಕಠಿಣ ಪ್ರಕರಣಗಳಲ್ಲಿ ಸಿಲುಕಿಸಿ ವಿಚಾರಣೆಯಿಲ್ಲದೆ ಜೈಲಿನಲ್ಲಿಡುವ ಸಂಚೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಲೋಪದೋಷಗಳನ್ನು, ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಅಡಿಯಾಲಾಗಿದೆ ಎಂಬ ಅನುಮಾನ ಬಂದಾಗ ಅದನ್ನು ನಿರ್ಭೀತಿಯಿಂದ ಪ್ರಶ್ನಿಸುವ ಸ್ವಾತಂತ್ರ್ಯವಿರುತ್ತದೆ. ನಮ್ಮ ದೇಶವೂ ಪ್ರಜಾಪ್ರಭುತ್ವ ದೇಶ. ಆದರೆ ಕಳೆದ 12 ವರ್ಷಗಳಿಂದ ಈ ಪ್ರಜಾಪ್ರಭುತ್ವ ಮರೆಯಾಗುತ್ತಿದೆ. ಗಂಭೀರವಾದ ಶಿಕ್ಷೆಗೆ ಒಳಗಾಗಲು ಸಜ್ಜಾಗಿಯೇ ಪ್ರಧಾನಿ ಮೋದಿ ಸರ್ಕಾರವನ್ನು ಪ್ರಶ್ನಿಸಬೇಕಾದ ಪರಿಸ್ಥಿತಿಯಿದೆ. ಕಾನೂನುಗಳನ್ನು ರೂಪಿಸಿ, ಅದರ ದುರುಪಯೋಗ ಮಾಡಿ ಹೋರಾಟಗಾರರನ್ನು ಹತ್ತಿಕ್ಕುವ ಯತ್ನಗಳು ನಡೆಯುತ್ತಲೇ ಇದೆ. ಕಾನೂನು ಪ್ರಕ್ರಿಯೆಯಲ್ಲೇ ಉಸಿರುಗಟ್ಟಿಸುವ ಯತ್ನಗಳು ವ್ಯಾಪಕವಾಗಿ ನಡೆಯುತ್ತಿವೆ.
ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಮೂಲಕ ಮುಖ್ಯ ಚುನವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅಕ್ರಮ ಎಸಗಿರುವ, ಕೇಂದ್ರ ಸರ್ಕಾರದ ಬಾಲಂಗೋಚಿಯಾಗಿ ವರ್ತಿಸಿರುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ಇದನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಇಂಡಿಯಾ ಒಕ್ಕೂಟ ಸೇರಿದಂತೆ ದೇಶಾದ್ಯಂತ ಹಲವು ವಿದ್ಯಾರ್ಥಿ, ಯುವಜನ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲಿದೆ. ಆದರೆ ಬೃಹತ್ ಪ್ರತಿಭಟನೆಗಳನ್ನು ಆಯೋಜಿಸಿದ ಬೆನ್ನಲ್ಲೇ ದೆಹಲಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಅವರ ವಿರುದ್ಧ ವಿವಿಧ ಕಠಿಣ ಪ್ರಕರಣಗಳನ್ನು ದಾಖಲಿಸಿ ಕಾವಲಿಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಸದ್ಯ ಕೇವಲ ಸ್ಥಳೀಯ ಕಾನೂನು-ಸುವ್ಯವಸ್ಥೆಯ ವಿಷಯವಾಗಿ ಉಳಿದಿಲ್ಲ.
ಇದನ್ನೂ ಓದಿ: ‘ನಾನೇ ಬುರುಡೆ ಒಡೆದಿದ್ದು’ ಎಂದಾತನಿಗೆ ಜಾಮೀನು; ಪುರಾವೆ ಇಲ್ಲದಿದ್ದರೂ ವರ್ಷಗಳಿಂದ ಜೈಲಿನಲ್ಲಿದ್ದಾರೆ ಹೋರಾಟಗಾರರು
ಅಕ್ರಮವನ್ನು ಪ್ರಶ್ನಿಸಿದ ಕಾರಣಕ್ಕೆ ಸದ್ಯ ಸಿಜೆಪಿ ನಾಯಕರಾದ ಸೌರವ್ ದಾಸ್, ಆಶುತೋಷ್ ರಾಂಕಾ ಅವರು ಜಾಮೀನು ಸಿಗದೆ ಜೈಲಿನಲ್ಲಿರುವುದನ್ನು ನೋಡಿದಾಗ ನಮ್ಮ ನೆನಪಿಗೆ ಬರುವುದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಯುವ ಮುಖಂಡ, ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್. 2020ರ ಸಿಎಎ ವಿರೋಧಿ ಹೋರಾಟದ ವೇಳೆ ಖಾಲಿದ್ ಅವರನ್ನು ಬಂಧಿಸಲಾಗಿತ್ತು. ದೆಹಲಿ ಗಲಭೆಯ ಗೂಢಾಲೋಚನೆಯ ಆರೋಪ ಹೊರಿಸಿ ದೆಹಲಿ ಪೊಲೀಸರ ವಿಶೇಷ ಘಟಕವು ‘ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ) ಅಡಿಯಲ್ಲಿ ಬಂಧಿಸಿತ್ತು. ಯುಎಪಿಎನಂತಹ ಕಾನೂನುಗಳಲ್ಲಿ ಆರೋಪ ಸಾಬೀತಾಗುವ ಅಗತ್ಯವಿಲ್ಲದೆ, ಕೇವಲ ಶಂಕಿತ ಆರೋಪಗಳ ಆಧಾರದಲ್ಲೇ ನ್ಯಾಯಾಲಯಗಳಿಂದ ಜಾಮೀನು ಪಡೆಯುವುದು ಅತ್ಯಂತ ದುರ್ಲಭವಾಗುತ್ತದೆ. ಸದ್ಯ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಅತ್ತ ವಿಚಾರಣೆ ಇಲ್ಲದೆ, ಇತ್ತ ಜಾಮೀನೂ ಸಿಗದೆ ಐದು ವರ್ಷಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲೇ ಇದ್ದಾರೆ.
ಇಂದು ಸಿಜೆಪಿ ನಾಯಕರ ಮೇಲೆಯೂ ಅದೇ ಮಾದರಿಯಲ್ಲಿ ಕಠಿಣ ಸಾಕ್ಷ್ಯಾಧಾರ ರಹಿತ ಗಂಭೀರ ಪ್ರಕರಣಗಳನ್ನು ಹೂಡಲಾಗುತ್ತಿದ್ದು, ವಿಚಾರಣೆ ಪೂರ್ಣಗೊಳ್ಳದೆ ವರ್ಷಗಟ್ಟಲೆ ಜೈಲಿನಲ್ಲೇ ಕೊಳೆಯುವಂತೆ ಮಾಡುವ ರಾಜಕೀಯ ತಂತ್ರದ ಪುನರಾವರ್ತನೆ ಎದ್ದು ಕಾಣುತ್ತಿದೆ. ಅಷ್ಟಕ್ಕೂ ಇಮಾಮ್, ಖಾಲಿದ್ ಮಾತ್ರವಲ್ಲ ಈ ಹಿಂದೆಯೂ ಮೋದಿ ಆಡಳಿತದಲ್ಲಿ ಹಲವು ನಾಯಕರನ್ನು ದೀರ್ಘಕಾಲ ಜೈಲಿಗಟ್ಟಲಾಗಿದೆ. ಸಾಮಾಜಿಕ ಕಾರ್ಯಕರ್ತರು ಮಾತ್ರವಲ್ಲದೆ, ಇಡೀ ಪ್ರಮುಖ ವಿರೋಧ ಪಕ್ಷದ ಪ್ರಭಾವಿ ನಾಯಕರನ್ನೂ ಕೇಂದ್ರ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಮೂಲಕ ದೀರ್ಘಕಾಲದ ಪ್ರಕರಣಗಳಲ್ಲಿ ಸಿಲುಕಿಸಿ ಬಂಧಿಸಲಾಗಿದೆ.
ಮೋದಿ ಸರ್ಕಾರದಡಿ ಪ್ರಕರಣಗಳಲ್ಲಿ ಸಿಲುಕಿಸಿಲಾದ ವಿಪಕ್ಷ ನಾಯಕರು
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಯಾವುದೇ ಭೌತಿಕ ಹಣ ಸಿಗದಿದ್ದರೂ, ಸಿಬಿಐ ಮತ್ತು ಇಡಿ ಸಂಸ್ಥೆಗಳು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿದ್ದವು. ಸಿಸೋಡಿಯಾ ಅವರು ಯಾವುದೇ ಶಿಕ್ಷೆ ವಿಧಿಸಲ್ಪಡದೆ 17 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು. ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಅವರನ್ನು ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮುಂಚಿತವಾಗಿ ಜಮೀನು ಅಕ್ರಮದ ಆರೋಪದಡಿ ಇಡಿ ಬಂಧಿಸಿತು.
ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸಿಜೆಪಿ ನಾಯಕರಿಗೆ ಹೈ ಸೆಕ್ಯುರಿಟಿ; ಇತರ ಕೈದಿಗಳಿಂದ ಪ್ರತ್ಯೇಕ ವಾಸ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಹೂಡಲಾದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ಗರಿಷ್ಠ ಶಿಕ್ಷೆ ವಿಧಿಸಿತು, ಪರಿಣಾಮವಾಗಿ ಅವರ ಸಂಸತ್ ಸದಸ್ಯತ್ವವನ್ನೇ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ನಂತರ ಸುಪ್ರೀಂ ಕೋರ್ಟ್ ತಡೆ ನೀಡಿತು. ತೆಲಂಗಾಣ ನಾಯಕಿ ಕೆ. ಕವಿತಾ ಅವರನ್ನು ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಿ ಹಲವು ತಿಂಗಳುಗಳ ಕಾಲ ಜಾಮೀನು ನಿರಾಕರಿಸಲಾಗಿತ್ತು. ಹಾಗೆಯೇ ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರನ್ನು ವರ್ಷಕ್ಕೂ ಹೆಚ್ಚು ಕಾಲ ಆರೋಗ್ಯ ಸ್ಥಿತಿ ಕ್ಷೀಣಿಸಿದರೂ ಜೈಲಿನಲ್ಲಿಡಲಾಗಿತ್ತು.
ಇವೆಲ್ಲುವುದಕ್ಕೂ ಮುಖ್ಯವಾಗಿ ಸಾಮಾಜಿಕ ಕಾರ್ಯಕರ್ತರಾದ ಸ್ಟಾನ್ ಸ್ವಾಮಿ, ಸುಧಾ ಭಾರದ್ವಾಜ್, ಪ್ರೊ. ಹನಿ ಬಾಬು, ವರವರ ರಾವ್ ಮುಂತಾದ ಮಾನವ ಹಕ್ಕು ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಯಾವುದೇ ತಕ್ಷಣದ ವಿಚಾರಣೆಯಿಲ್ಲದೆ ದೀರ್ಘಕಾಲ ಬಂಧನದಲ್ಲಿಡಲಾಗಿತ್ತು. ಈ ಪೈಕಿ ಸ್ಟಾನ್ ಸ್ವಾಮಿ ಅವರು ಸರಿಯಾದ ಚಿಕಿತ್ಸೆ ಸಿಗದೆ ಜೈಲಿನಲ್ಲೇ ನಿಧನರಾದರು.
2014ರಿಂದೀಚೆಗೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿದ ಮತ್ತು ವಿಚಾರಣೆಗೊಳಪಡಿಸಿದ ಶೇಕಡಾ 95% ಕ್ಕೂ ಹೆಚ್ಚು ರಾಜಕೀಯ ನಾಯಕರು ವಿರೋಧ ಪಕ್ಷಗಳಿಗೆ ಸೇರಿದವರಾಗಿದ್ದಾರೆ. ಇನ್ನು ಗಮನಾರ್ಹ ವಿಷಯವೆಂದರೆ, ಆರೋಪಕ್ಕೊಳಗಾದ ವಿಪಕ್ಷ ನಾಯಕರು ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡ ತಕ್ಷಣ ಅವರ ವಿರುದ್ಧದ ಇಡಿ ಮತ್ತು ಸಿಬಿಐ ಪ್ರಕರಣಗಳು ತಣ್ಣಗಾಗುವುದು ಅಥವಾ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಇದು ವಾಷಿಂಗ್ ಮಷಿನ್ ರಾಜಕಾರಣ.
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಕೇವಲ ಮತದಾನದಲ್ಲಷ್ಟೇ ಅಲ್ಲ; ಬದಲಾಗಿ ಅಧಿಕಾರದಲ್ಲಿರುವ ಕಾರ್ಯಾಂಗವನ್ನು, ಅವರ ನಿರ್ಧಾರಗಳನ್ನು ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ತಡೆರಹಿತವಾಗಿ ಪ್ರಶ್ನಿಸುವ ಸ್ವಾತಂತ್ರ್ಯದಲ್ಲಿ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು ಮತ್ತು ಸಿಇಸಿ ಅವರ ನಿರ್ಧಾರಗಳ ಮೇಲೆ ಪ್ರಶ್ನೆ ಎತ್ತಿದ ಸಿಜೆಪಿ ನಾಯಕರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಕಠಿಣವಾಗಿ ಬಳಸಿ ಬಂಧಿಸುತ್ತಿರುವುದು, ಪ್ರಜಾಸತ್ತಾತ್ಮಕ ಹೋರಾಟಗಳ ಮೇಲೆ ತೀವ್ರ ಸ್ವರೂಪದ ನೆರಳು ಚೆಲ್ಲಿದೆ.
ಮುಖ್ಯವಾಗಿ ಕಾನೂನು ಎಂಬುದು ಸಮಾಜದಲ್ಲಿ ನ್ಯಾಯ ಸ್ಥಾಪಿಸಲು ಇರುವ ಉಪಕರಣವಾಗಬೇಕೇ ಹೊರತು, ಸರ್ಕಾರದ ನೀತಿಗಳನ್ನು ಮತ್ತು ಲೋಪಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸುವ ಧ್ವನಿಗಳನ್ನು ಅಡಗಿಸುವ ಅಸ್ತ್ರವಾಗಬಾರದು. ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ಸ್ಥಿತಿ ನಿರ್ಮಾಣವಾದರೆ ಪ್ರಜಾಪ್ರಭುತ್ವ ಎಲ್ಲಿ? ನ್ಯಾಯಾಂಗವು ಇಂತಹ ಪ್ರಕರಣಗಳ ಗಂಭೀರತೆಯನ್ನು ಮನಗಂಡು, ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಅತ್ಯಗತ್ಯ.





