ಪೋಷಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಮಾಡುವ ಯಾವುದಾದರೂ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಪರಿಗಣಿಸುತ್ತಿದೆಯೇ ಎನ್ನುವ ಪ್ರಶ್ನೆ ಶುಕ್ರವಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿತು.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆ ಸಾವಿತ್ರಿ ಠಾಕೂರ್, “ಪೋಷಣ್ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಕೇಂದ್ರ ಸರಕಾರದ ಮುಂದಿಲ್ಲ” ಎಂದು ಹೇಳಿದರು.
“ಅಂಗನವಾಡಿ ಕಾರ್ಯಕರ್ತೆಯರು ಗೌರವ ಕಾರ್ಯಕರ್ತೆಯರಾಗಿದ್ದು, ಅವರು ತಮ್ಮ ಸ್ಥಳೀಯ ಸಮುದಾಯಗಳಲ್ಲಿನ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿಗಾಗಿ ಸ್ವಯಂಸೇವಕಿಯರಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
“ಅಂಗನವಾಡಿ ಕಾರ್ಯಕರ್ತೆಯರ ಸ್ವಯಂಸೇವೆಗಾಗಿ ಅವರಿಗೆ ಗೌರವ ಧನ ನೀಡಲಾಗುತ್ತಿದ್ದು, ಈ ಗೌರವ ಧನವನ್ನು ಕೊನೆಯದಾಗಿ ಅಕ್ಟೋಬರ್ 1, 2018ರಂದು ಪರಿಷ್ಕರಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ನೀಡಲಾಗುತ್ತಿದ್ದು, 2018ರ ಅಕ್ಟೋಬರ್ 1ರಂದು ಪರಿಷ್ಕರಿಸಲಾಗಿತ್ತು. ಪ್ರಸ್ತುತ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ₹4,500 ಮತ್ತು ಮಿನಿ ಅಂಗನವಾಡಿ ಕಾರ್ಯತಕರ್ತೆಯರಿಗೆ ₹3,500 ಮತ್ತು ಸಹಾಯಕಿಯರಿಗೆ 2,250 ವೇತನವಿದೆ. ಜೊತೆಗೆ ಕಾರ್ಯಕ್ಷಮತೆ ಆಧಾರಿಸಿ ಕಾರ್ಯಕರ್ತೆಯರಿಗೆ ₹500 ಮತ್ತು ಸಹಾಯಕಿಯರಿಗೆ ₹250 ಪ್ರೋತ್ಸಾಹಧನ ನೀಡಲಾಗುತ್ತಿದೆ” ಎಂದು ವಿವರಿಸಿದ್ದಾರೆ.
ಏನಿದು ಪೋಷಣ್ ಯೋಜನೆ
ಪೋಷಣ್ ಯೋಜನೆ ಎಂದರೆ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಮತ್ತು ಅವರ ಪೌಷ್ಟಿಕಾಂಶದ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಒಂದು ಯೋಜನೆ. ಇದನ್ನು ಪೋಷಣ್ ಅಭಿಯಾನ ಅಥವಾ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಎಂದೂ ಕರೆಯುತ್ತಾರೆ.
ಈ ಯೋಜನೆಯು ಮುಖ್ಯವಾಗಿ ಹದಿಹರೆಯದ ಹುಡುಗಿಯರು, ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು 0-6 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೇಂದ್ರೀಕರಿಸುತ್ತದೆ. ಈ ಯೋಜನೆಯಡಿ, ಬಿಸಿ ಊಟದ ವ್ಯವಸ್ಥೆ, ಪೌಷ್ಟಿಕಾಂಶದ ಆಹಾರದ ಪೂರೈಕೆ ಮತ್ತು ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಎಂದರೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಅಡಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಯಕರ್ತೆಯರು. 6 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.