ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

Date:

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ, ಪ್ರಶ್ನಾತೀತ ಕೋಟೆಯೊಳಗೆ ಕೂರಿಸಿದರೆ ಪ್ರಜಾಪ್ರಭುತ್ವದ ಕಾವಲು ಕಾಯುವವರು ಯಾರು? ಈ ದೇಶದ ಪ್ರಧಾನಿ, ರಾಷ್ಟ್ರಪತಿಗೂ ಸಿಗದ ಕಾನೂನು ರಕ್ಷಣೆಯೊಂದನ್ನು ಮೋಶಾ ಸರ್ಕಾರ ಮುಖ್ಯ ಚುನಾವಣಾ ಆಯುಕ್ತರಿಗೆ ಮಾತ್ರ ನೀಡಿದ್ದೇಕೆ? ಕಾನೂನು ತಿದ್ದುಪಡಿ ಮಾಡಿ ಇಂತಹ ಅಭೂತಪೂರ್ವ ರಕ್ಷಣೆಯನ್ನು CECಗೆ ನೀಡಿರುವುದರ ಹಿಂದೆ ಯಾರ ಹಿತಾಸಕ್ತಿ ಅಡಗಿದೆ? ಮತದಾನದ ಹಕ್ಕಿನ ಕತ್ತು ಹಿಸುಕುತ್ತಿರುವ ಈ ʼರಕ್ಷಾ ಕವಚʼವನ್ನು ಗ್ಯಾನೇಶ್ ಗೆ ತೊಡಿಸಿರುವುದು ಪ್ರಜಾಪ್ರಭುತ್ವದ ರಕ್ಷಣೆಗೋ, ಮೋಶಾ ಸರ್ಕಾರದ ‘ಸಂರಕ್ಷಣೆ’ಗೋ?

- Advertisement -

ಪ್ರಜಾಪ್ರಭುತ್ವದ ಅತಿ ದೊಡ್ಡ ಆಧಾರಸ್ತಂಭಗಳೆಂದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು. ಅಂತಹ ಚುನಾವಣೆಯನ್ನು ನಡೆಸುವ ಹೊಣೆ ಹೊತ್ತಿರುವ ವ್ಯಕ್ತಿ, ಯಾವುದೇ ಸರ್ಕಾರದ ಕಪಿಮುಷ್ಠಿಗೆ ಸಿಲುಕಕೂಡದು, ಜನಸಾಮಾನ್ಯರ ಮತದಾನದ ಹಕ್ಕಿಗೆ ಕುತ್ತು ತರುವ ನಿರ್ಧಾರಗಳನ್ನು ಕೈಗೊಂಡಾಗ ಕಾನೂನಿನ ಕಠಿಣ ಪರಿವೀಕ್ಷಣೆಗೆ ಒಳಪಡಬೇಕು ಎನ್ನುತ್ತದೆ ಕಾನೂನು. ಆದರೆ, ಮೋಶಾ ಸರ್ಕಾರ 2023ರ ಡಿಸೆಂಬರ್‌ನಲ್ಲಿ ಜಾರಿಗೆ ತಂದ ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಕಾಯಿದೆ’ಯು ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದೆ. ಮಾರ್ಚ್ 2023ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಪ್ರಕಾರ, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI) ಇರಬೇಕಿತ್ತು. ಆದರೆ ಕಾರ್ಯಾಂಗದ ಮೇಲಿನ ತನ್ನ ಹಿಡಿತವನ್ನು ಬಿಟ್ಟುಕೊಡಲು ಇಚ್ಛಿಸದ ಕೇಂದ್ರ ಬಿಜೆಪಿ ಸರ್ಕಾರ, ಹೊಸ ಕಾಯಿದೆಯ ಮೂಲಕ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟು, ಅವರ ಜಾಗದಲ್ಲಿ ಪ್ರಧಾನಿಯಿಂದ ನಾಮನಿರ್ದೇಶನಗೊಳ್ಳುವ ಒಬ್ಬ ಕೇಂದ್ರ ಸಂಪುಟ ಸಚಿವರನ್ನು ಸೇರಿಸಿಕೊಂಡಿತು. ಮೂವರ ಸಮಿತಿಯಲ್ಲಿ ಇಬ್ಬರು ಸರ್ಕಾರದವರೇ ಇರುವುದರಿಂದ ಆಡಳಿತ ಪಕ್ಷದ ಏಕಪಕ್ಷೀಯ ಮತ್ತು ಮನಸ್ಸಿಗೆ ಬಂದ ನಿರ್ಧಾರಗಳಿಗೆ ನೇರ ದಾರಿ ಮಾಡಿಕೊಡಲಾಯಿತು.
ಸ್ವತಃ ಸರ್ವೋಚ್ಚ ನ್ಯಾಯಾಲಯವೇ “ಈ ಮಟ್ಟದ ವಿನಾಯಿತಿ ದೇಶದ ನ್ಯಾಯಾಧೀಶರಿಗೂ ಇಲ್ಲ” ಎಂದು ಮೌಖಿಕವಾಗಿ ಅಚ್ಚರಿ ವ್ಯಕ್ತಪಡಿಸಿತ್ತು. ಹಿರಿಯ ವಕೀಲರು ಕೂಡ “ಪ್ರಧಾನ ಮಂತ್ರಿಗಳಿಗೂ ಕೂಡ ಇಂತಹ ರಕ್ಷಣೆ ಇಲ್ಲ” ಎಂದು ನ್ಯಾಯಾಲಯದ ಗಮನಕ್ಕೆ ತಂದಿರುವುದು ಈ ಕಾಯಿದೆಯ ದುರುದ್ದೇಶಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಉತ್ತರ ಕನ್ನಡದಲ್ಲಿ ಮೃತ್ಯುಕೂಪವಾಗಿರುವ NH-66: RSS ವರ್ತಕರ ಆಟ...

ಉತ್ತರ ಕನ್ನಡದ ಭಟ್ಕಳದಿಂದ ಕಾರವಾರದ ತನಕದ ಸುಮಾರು 160 ಕಿಮೀ ಚತುಷ್ಪಥ ಕಾಮಗಾರಿ ಬರೋಬ್ಬರಿ 12 ವರ್ಷದಿಂದ ತೆವಳುತ್ತಿದೆ. 65 ಮೀಟರ್ ಅಗಲದ ಹೈವೇ 45 ಮೀ.ಗೆ ಕುಗ್ಗಿದೆ. ಸಂಚಾರ ಇಕ್ಕಟ್ಟಾಗಿ 27...

ಬಿಡಿಗಾಸು ಬರ ಪರಿಹಾರ! ಹಿಂಗಾರು ಬಿತ್ತನೆಗೆ ಸಾಲದ ಮೊರೆ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿಯ ರೈತರು ಇದೀಗ ಹಿಂಗಾರು ಬಿತ್ತನೆಯ ಸಿದ್ಧತೆಯಲ್ಲಿದ್ದಾರೆ. ಆದರೆ ಕೈಯಲ್ಲಿ ಹಣವಿಲ್ಲದ ಕಾರಣ ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು...

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ಅಲ್ಲದೆ, ಈ ಕಾಯಿದೆಯ ಸೆಕ್ಷನ್ 16ರ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ (CEC) ದೇಶದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕವಾದ ಕಾನೂನು ರಕ್ಷಣೆಯನ್ನು (Legal Immunity) ನೀಡಲಾಗಿದೆ. ಸಂವಿಧಾನದ ಪ್ರಕಾರ, ರಾಷ್ಟ್ರಪತಿ ಅಥವಾ ರಾಜ್ಯಪಾಲರು ಅಧಿಕಾರದಲ್ಲಿರುವ ಅವಧಿಯಲ್ಲಿ ಮಾತ್ರ ಅವರ ಅಧಿಕೃತ ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ. ಆದರೆ ಅವರು ಹುದ್ದೆಯಿಂದ ಕೆಳಗಿಳಿದ ನಂತರ ಅಥವಾ ವ್ಯಕ್ತಿಗತ ಕೃತ್ಯಗಳಿಗೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸಿವಿಲ್ ಮೊಕದ್ದಮೆಗಳ ವಿಚಾರದಲ್ಲೂ 2 ತಿಂಗಳ ಮುಂಗಡ ನೋಟಿಸ್ ನೀಡಿ ಕ್ರಮ ಜರುಗಿಸಬಹುದು. ದೇಶದ ಪ್ರಧಾನ ಮಂತ್ರಿಯಾದರೂ ಸಹ ಯಾವುದೇ ಕಾನೂನು ಅಥವಾ ಅಪರಾಧ ಕೃತ್ಯಗಳಿಂದ ಸಂಪೂರ್ಣ ವಿನಾಯಿತಿ ಪಡೆದಿಲ್ಲ. ಪ್ರಧಾನಿಯಾದರೂ ಸಾಮಾನ್ಯ ಪ್ರಜೆಯಂತೆ ಕಾನೂನಿನ ವಿಚಾರಣೆ ಮತ್ತು ಕೋರ್ಟ್ ಕಟಕಟೆಗೆ ಒಳಪಡುತ್ತಾರೆ. ಆದರೆ 2023ರ ಕಾಯಿದೆಯ ಸೆಕ್ಷನ್ 16ರ ಅಡಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿರುವ ರಕ್ಷಣೆಯು ಅವರು ಅಧಿಕಾರದಲ್ಲಿದ್ದಾಗ ಮಾತ್ರವಲ್ಲ, ಹುದ್ದೆಯಿಂದ ನಿವೃತ್ತರಾದ ಮೇಲೂ (ಜೀವಮಾನ ಪೂರ್ತಿ) ಅನ್ವಯಿಸುತ್ತದೆ. ಅಧಿಕಾರಾವಧಿಯಲ್ಲಿ ಅವರು ಕೈಗೊಳ್ಳುವ ಯಾವುದೇ ಅಧಿಕೃತ ನಿರ್ಧಾರಗಳ ವಿರುದ್ಧ ಯಾರೂ ಕೂಡ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ಹೂಡುವಂತಿಲ್ಲ ಎಂಬ ಕರಾಳ ನಿಯಮವನ್ನು ಇದರಡಿಯಲ್ಲಿ ತರಲಾಗಿದೆ. ಸರ್ಕಾರ ತಾನೇ ನೇಮಿಸಿಕೊಂಡಿರುವ ಹಾಲಿ ಸಿಇಸಿ ಗ್ಯಾನೇಶ್ ಕುಮಾರ್ ಅಧಿಕಾರದಲ್ಲಿರುವಾಗಲೇ ನಡೆಯುವ ದೇಶದ ಬೃಹತ್ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಕಾಯಿದೆಯ ಮೂಲಕ ಮೋಶಾ ಸರ್ಕಾರ ತನ್ನ ಗುಪ್ತ ಕಾರ್ಯಸೂಚಿಗಳಿಗೆ ರಹದಾರಿ ನಿರ್ಮಿಸಿಕೊಂಡಿರುವುದು ಎದ್ದು ಕಾಣುತ್ತಿದೆ.

ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಈ ಕರಾಳ ಕಾನೂನು ತಿದ್ದುಪಡಿಯ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಈಗ ಸ್ಪಷ್ಟವಾಗುತ್ತಿವೆ. ಸಿಇಸಿ ಗ್ಯಾನೇಶ್ ಕುಮಾರ್ ಅವರ ಅಧಿಕಾರಾವಧಿ 2029ರ ಜನವರಿ ತನಕ ಮುಂದುವರಿಯಲಿದೆ. ಈ ನಿರ್ಣಾಯಕ ಅವಧಿಯಲ್ಲಿ ದೇಶದ ಸುಮಾರು 20ಕ್ಕೂ ಹೆಚ್ಚು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿವೆ. ಜೊತೆಗೆ ಮುಂದಿನ ʼಲೋಕʼ ಮಹಾಸಂಗ್ರಾಮದ ದಿಕ್ಸೂಚಿಯೂ ಇದೇ ಅವಧಿಯಲ್ಲಿ ನಿರ್ಧಾರವಾಗಲಿದೆ. ಇಂತಹ ಬೃಹತ್ ಮತ್ತು ಸಂವೇದನಾಶೀಲ ಚುನಾವಣಾ ಪರ್ವದ ಮುನ್ನವೇ, ಆಯೋಗದ ನಿರ್ಧಾರಗಳನ್ನು ಯಾರೂ ಪ್ರಶ್ನಿಸಬಾರದು, ನ್ಯಾಯಾಲಯದ ಅಂಗಳದಲ್ಲಿಯೂ ಆಯುಕ್ತರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಬಾರದು ಎಂಬ ಮುನ್ನೆಚ್ಚರಿಕೆಯೊಂದಿಗೆ ಈ ರಕ್ಷಾ ಕವಚವನ್ನು ಹೆಣೆಯಲಾಗಿದೆ. ಈ ಮೂಲಕ ಮೋದಿ ಚುನಾವಣೆಗಳನ್ನು ‘ಆಬಾಧಿತವಾಗಿ ಗೆಲ್ಲುವ’ ತಮ್ಮ ದಾರಿಯನ್ನು ಸುಗಮಗೊಳಿಸಿಕೊಂಡಿರುವುದು ಜಗಜ್ಜಾಹೀರಾಗಿದೆ.

ದೇಶಾದ್ಯಂತ SIR ಅಭಿಯಾನದ ಹೆಸರಿನಲ್ಲಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಮತ್ತು ಏಕಪಕ್ಷೀಯವಾಗಿ ಕತ್ತರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಹೆಚ್ಚಾಗುತ್ತಿವೆ. ಜನ ಬೀದಿಗಿಳಿದು ತಮ್ಮ ಮತದಾನದ ಹಕ್ಕನ್ನು ಕಸಿದುಕೊಳ್ಳದಂತೆ ಅಂಗಲಾಚುತ್ತಿದ್ದಾರೆ. ಇದೇ ನೆಲದಲ್ಲಿ ತಲೆಮಾರುಗಳಿಂದ ಜೀವಿಸುತ್ತಿರುವ ಲಕ್ಷಾಂತರ ಮಂದಿಗೆ ತಾವೂ ಈ ದೇಶದವರೇ ಎಂದು ಸಾಬೀತುಪಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಆದರೆ, ಇಷ್ಟೊಂದು ಅರಾಜಕತೆ ಸೃಷ್ಟಿಯಾಗಲು ಕಾರಣಕರ್ತರಾದವರು ಮಾತ್ರ ಪ್ರಶ್ನಿಸಲು ಬಂದವರನ್ನೇ ಹತ್ತಿಕ್ಕಲು ಪೊಲೀಸರನ್ನು ಛೂ ಬಿಡುತ್ತಿದ್ದಾರೆ. ಪ್ರಜಾಪ್ರಭುತ್ವದ ಅತಿ ದೊಡ್ಡ ಅಸ್ತ್ರವಾಗಿರುವ ಮತದಾನದ ಹಕ್ಕನ್ನು ಜನರಿಂದ ಕಿತ್ತುಕೊಳ್ಳುವ ಈ ಹುನ್ನಾರದ ಹಿಂದೆ ಕೇಂದ್ರ ಬಿಜೆಪಿ ಸರ್ಕಾರದ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂಬುದನ್ನು ತಮ್ಮದೇ ವ್ಯರ್ಥ ಪ್ರಯತ್ನದ ಮೂಲಕ ಬಿಚ್ಚಿಡುತ್ತಿದ್ದಾರೆ.

ಇದನ್ನು ಓದಿ: ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಆಯೋಗದ ಈ ತಪಾಸಣೆರಹಿತ ಮತ್ತು ಶಂಕಿತ ಧೋರಣೆಯ ವಿರುದ್ಧ ವಿರೋಧ ಪಕ್ಷಗಳು ಧ್ವನಿ ಎತ್ತಿದಾಗ, ಆಡಳಿತ ವ್ಯವಸ್ಥೆ ಅವರನ್ನು ದಮನ ಮಾಡುವ ಸರ್ವಾಧಿಕಾರಿ ಹಾದಿಯನ್ನು ಹಿಡಿದಿದೆ. ಮತಗಳ್ಳತನ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯ ವಿರುದ್ಧ ಪ್ರಶ್ನೆ ಮಾಡುವ ವಿಪಕ್ಷಗಳ ನಾಯಕರನ್ನು ದೆಹಲಿಯ ರಾಜಬೀದಿಗಳಲ್ಲಿ ಪೊಲೀಸರ ಮೂಲಕ ಎಳೆದಾಡುವುದು, ಬಸ್‌ಗಳಲ್ಲಿ ಬಲವಂತವಾಗಿ ತೂರಿಸಿ ಕರೆದೊಯ್ಯುವುದು, ಜನತೆಯ ಸಂವಿಧಾನದತ್ತ ಹಕ್ಕಿಗಾಗಿ ರಾತ್ರಿಯಿಡೀ ಧರಣಿ ನಡೆಸಬೇಕಾದಂತಹ ಅಮಾನವೀಯ ವಾತಾವರಣ ಸೃಷ್ಟಿಸುವುದು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಪತನಕ್ಕೆ ತಳ್ಳುತ್ತಿರುವ ಪ್ರಯತ್ನವಾಗಿದೆ. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ಸರ್ಕಾರದ ಕೈಗೊಂಬೆಯಾದಾಗ, ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಬೀದಿಗಿಳಿದು ಹೋರಾಡಬೇಕಾದ ಈ ದುಸ್ಥಿತಿಯು ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆ. ಆದರೆ ಮೋಶಾ ಜೋಡಿಯ ಹುನ್ನಾರ ಫಲಿಸಲಾರವು ಎಂಬ ಆಶಾವಾದವನ್ನು ಇತ್ತೀಚಿನ ಪ್ರತಿಭಟನಾ ವಿದ್ಯಮಾನಗಳು ಹುಟ್ಟಿಸಿವೆ. ಈ ದೇಶದ ಯುವಜನ ಎಚ್ಚೆತ್ತಿದ್ದಾರೆ. ಮೋದಿ ಸರ್ಕಾರದ ದುಷ್ಟ ಹುನ್ನಾರಗಳನ್ನು ಆಗಗೊಡುವುದಿಲ್ಲ ಎಂಬ ಭರವಸೆ ಹುಟ್ಟಿಸಿದ್ದಾರೆ. ಕಳೆದ 13 ವರ್ಷಗಳಿಂದ ದೇಶದ ಜನಮಾನಸದಲ್ಲಿ ತುಂಬಿದ್ದ ಭೀತಿಯ ವಾತಾವರಣ ಕರಗತೊಡಗಿದೆ.

ನ್ಯಾಯಾಂಗದ ಕಣ್ಣಿಗೆ ಮಣ್ಣೆರಚಿ, ಸಂವಿಧಾನದ ಮೂಲಭೂತ ತತ್ವಗಳನ್ನು ತುಳಿದು ಜಾರಿಗೆ ತಂದಿರುವ ಈ ಕರಾಳ ಕಾನೂನು ರಕ್ಷಾ ಕವಚವು ಅಧಿಕಾರಶಾಹಿಯ ಅಹಂಕಾರ ಮತ್ತು ಸರ್ವಾಧಿಕಾರಿ ಧೋರಣೆ ದೇಶದ ಮತದಾರರ ಹಕ್ಕುಗಳು ಅಡಮಾನವಾಗುತ್ತಿರುವ ಈ ದುಸ್ಥಿತಿ ಯಾವ ಕಾರಣಕ್ಕೂ ಮುಂದುವರೆಯಬಾರದು. ಅಂತ್ಯಗೊಳ್ಳಲೇಬೇಕು. ಪ್ರಜಾಪ್ರಭುತ್ವ ಉಳಿಯಬೇಕೆಂದರೆ, ಸಾಂವಿಧಾನಿಕ ಸಂಸ್ಥೆಗಳನ್ನು ಆಳುವವರ ಕಪಿಮುಷ್ಠಿಯಲ್ಲಿಡುವ ಇಂತಹ ಕಾಯಿದೆಯನ್ನು ಸುಪ್ರೀಂ ಕೋರ್ಟ್ ಕೂಡಲೇ ರದ್ದುಗೊಳಿಸಬೇಕು ಮತ್ತು ದೇಶದ ಮತದಾರರ ಅಸ್ತಿತ್ವವನ್ನು ರಕ್ಷಿಸಲು ಜನತೆ ಒಗ್ಗಟ್ಟಾಗಿ ಧ್ವನಿ ಎತ್ತಬೇಕು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅನರ್ಹತೆ ನೋಟಿಸ್: ಲೋಕಸಭಾ ಸ್ಪೀಕರ್ ಬಳಿ ಮತ್ತೆ 15 ದಿನ ಕಾಲಾವಕಾಶ ಕೋರಿದ ಟಿಎಂಸಿ ಬಂಡಾಯ ಸಂಸದರು

ಪಕ್ಷಾಂತರ ನಿರೋಧಕ ಕಾಯ್ದೆಯಡಿ ಎದುರಿಸುತ್ತಿರುವ ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಲೋಕಸಭೆ ಸಚಿವಾಲಯ...

OBC ವಿದ್ಯಾವಂತ ನಿರುದ್ಯೋಗಿಗಳ ಕುರಿತು ಅಧ್ಯಯನ; ಪ್ರವೀಣ ಪತ್ತಾರಗೆ ಕವಿವಿ ಪಿಎಚ್‌ಡಿ

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಮಾಜಶಾಸ್ತ್ರ ವಿಭಾಗದ ಸಂಶೋಧಕರಾದ ಪ್ರವೀಣ ಪತ್ತಾರ ಅವರು...

ಬೀದರ್‌ | ಬೆಂಬಲ ಬೆಲೆಯಲ್ಲಿ ಹೆಸರುಕಾಳು, ಸೋಯಾಬೀನ್ ಖರೀದಿಗೆ ನೋಂದಣಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ...

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...