ಪ್ರಧಾನ ಮಂತ್ರಿ ವಿಪತ್ತು ನಿರ್ವಹಣಾ ನಿಧಿಯ ಬದಲಾಗಿ 2020ರ ಮಾರ್ಚ್ 27ರಂದು ಕೊರೋನ ವಿರುದ್ಧದ ಹೋರಾಟಕ್ಕೆ ಮತ್ತು ಈ ಸಾಂಕ್ರಾಮಿಕದಿಂದ ತೊಂದರೆಗೀಡಾಗಿರುವವರಿಗೆ ಸಹಾಯ ಮಾಡಲೆಂದು ಪಿಎಂ ಕೇರ್ಸ್ ಫಂಡ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತು. ಆದರೆ, ಪಿಎಂ-ಕೇರ್ಸ್ ನಿಧಿಗೆ ಬಂದ ಹಣವನ್ನು ಯಾವ ರೀತಿ ಬಳಕೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿ ಸಲ್ಲಿಸಲಾದ ಯಾವುದೇ ಆರ್‌ಟಿಐ ಅರ್ಜಿಗಳಿಗೆ ಕೇಂದ್ರ ಸರ್ಕಾರ ಉತ್ತರಿಸುತ್ತಿಲ್ಲ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.
ಕಾರ್ಪೋರೇಟ್ ದೈತ್ಯಗಳು, ಸಾರ್ವಜನಿಕ ಸಂಸ್ಥೆಗಳು, ಇತರೆ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿಯನ್ನು ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆಯಾಗಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಪಿಎಂ ಕೇರ್ಸ್‌ನ ಅಧ್ಯಕ್ಷರಾದ ಕಾರಣ ಸಾಮಾನ್ಯ ಜನರು ಕೂಡಾ ಈ ನಿಧಿಗೆ ತಮ್ಮಿಂದಾದಷ್ಟು ಸಣ್ಣ ದೇಣಿಗೆ ನೀಡಿದ್ದಾರೆ. ಆದರೆ, ಈ ಹಣ ಯಾವ ರೀತಿ ಬಳಕೆಯಾಗಿದೆ ಅಂತ ಯಾರಿಗೂ ಗೊತ್ತಿಲ್ಲ.
“ನಮ್ಮ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಲಾಗುವುದು ಎಂದು ನಾವು ನಂಬಿದ್ದೆವು. ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿದವರಾಗಿ ಮತ್ತು ಈ ದೇಶದ ನಾಗರಿಕರಾಗಿ ನಾವು ಈ ನಿಧಿಯ ಬಳಕೆ ಹೇಗೆ, ಎಲ್ಲಿ ಮಾಡಲಾಗಿದೆ ಎಂದು ತಿಳಿಯುವುದು ನಮ್ಮ ಹಕ್ಕು. ಆದರೆ, ಪಿಎಂ ಕೇರ್ಸ್ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಅಪೂರ್ಣವಾಗಿದೆ” ಅಂತ ಆರ್‌ಟಿಐ ಕಾರ್ಯಕರ್ತರು ಹೇಳುತ್ತಾರೆ.
Bigger Scam Than Electoral Bonds ?
PM CARES Fund
Did you know that the PM CARES Fund received Rs 535.44 Crore as Foreign Donations during the last three years.
It received a total of Rs 12,691.82 Crore during the period.
As on March 31, 2022, a balance of Rs 5,456.65 Crore… pic.twitter.com/vuoAfiQsdY
— তন্ময় l T͞anmoy l (@tanmoyofc) April 5, 2024
ಈವರೆಗೆ ಸುಮಾರು 3,100 ಕೋಟಿ ರೂಪಾಯಿ ದೇಣಿಗೆಯನ್ನು ಮೂರು ಉದ್ದೇಶಗಳಿಗಾಗಿ ಹಂಚಿಕೆ ಮಾಡಲಾಗಿದೆ ಎಂದು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ.
1. ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಡಿ ಬರುವ ಸರ್ಕಾರಿ ಆಸ್ಪತ್ರೆಗಳಿಗೆ ಸುಮಾರು 50 ಸಾವಿರ ‘ಮೇಡ್ ಇನ್ ಇಂಡಿಯಾ’ ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲು 2,000 ಕೋಟಿ ರೂಪಾಯಿ ನಿಧಿಯನ್ನು ಬಳಸಲಾಗಿದೆ.
2. ಕೊರೋನದಿಂದ ಪ್ರಭಾವಿತರಾಗಿರುವ ವಲಸಿಗರಿಗೆ ಸಹಾಯ ಮಾಡಲು 1000 ಕೋಟಿ ರೂಪಾಯಿ ಬಳಸಲಾಗಿದೆ.
3. ಲಸಿಕೆ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ಬಳಕೆ.
ಈ ಮಾಹಿತಿಯ ಆಧಾರದಲ್ಲಿ ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.
1. ವಲಸೆ ಕಾರ್ಮಿಕರಿಗಾಗಿ ಪಿಎಂ ಕೇರ್ಸ್ ನಿಧಿ ಬಳಕೆಗಾಗಿ ಪಾಲಿಸಲಾದ ಮಾರ್ಗಸೂಚಿ ಬಗ್ಗೆ ವಿವರ ನೀಡಿ.
2. ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಎಷ್ಟು ಪಿಎಂ ಕೇರ್ಸ್ ಫಂಡ್ ಹಂಚಿಕೆ ಮಾಡಲಾಗಿದೆ?
3. ಇದಕ್ಕೆ ಸಂಬಂಧಿಸಿ ಸಚಿವಾಲಯದ ಬಳಿ ಇರುವ ಒಪ್ಪಂದ ಅಥವಾ ಇತರೆ ಪತ್ರ ವ್ಯವಹಾರಗಳ ಮಾಹಿತಿಯನ್ನು ನೀಡಿ.
ಇದಕ್ಕೆ ಉತ್ತರ ನೀಡುವ ಬದಲಾಗಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪಿಎಂ ಕೇರ್ಸ್ ಫಂಡ್‌ನ ಮುಖ್ಯ ಕಚೇರಿಯಾದ ಪ್ರಧಾನ ಮಂತ್ರಿ ಕಚೇರಿಗೆ ಈ ಆರ್‌ಟಿಐ ಅರ್ಜಿಯನ್ನು ರವಾನಿಸಿತ್ತು. ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡಿದ ಪಿಎಂಒ ಮಾಹಿತಿ ನೀಡಲು ನಿರಾಕರಿಸಿದೆ. “ಆರ್‌ಟಿಐ ಕಾಯ್ದೆ ಸೆಕ್ಷನ್ 2(ಎಚ್) ನಲ್ಲಿ ಹೇಳಲಾಗಿರುವ ‘ಸಾರ್ವಜನಿಕ ಪ್ರಾಧಿಕಾರ’ದ ವ್ಯಾಖ್ಯಾನದಡಿ ಪಿಎಂ ಕೇರ್ಸ್ ಫಂಡ್ ಬರುವುದಿಲ್ಲ” ಎಂದು ಹೇಳಿದೆ.
ಅಂದರೆ “ಪಿಎಂ ಕೇರ್ಸ್ ಫಂಡ್ ಸರ್ಕಾರಿ ನಿಧಿ ಅಲ್ಲ. ಇದನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರದಡಿ ಸ್ಥಾಪನೆ ಮಾಡಲಾಗಿಲ್ಲ. ಹೀಗಾಗಿ ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಮೋದಿ ವೈಫಲ್ಯ-1 | ಕೊರೋನಗೆ ದೇಶ ತತ್ತರ; 20 ಲಕ್ಷ ಕೋಟಿ ಏನಾಯ್ತು? ಪಿಎಂ-ಕೇರ್ಸ್ ಎಲ್ಲೋಯ್ತು?
ಇದೇ ರೀತಿ ಆರ್‌ಟಿಐ ಕಾರ್ಯಕರ್ತ ನೀರಜ್ ಶರ್ಮಾ ಅವರು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಬಳಿ ಪಿಎಂ ಕೇರ್ ಫಂಡ್ ಡೋಮೆನ್ (pmcares.gov.in) ಆರಂಭಕ್ಕೆ ನೀಡಲಾದ ಎಲ್ಲಾ ಸೂಚನೆ, ದಾಖಲೆಗಳನ್ನು ನೀಡಲು ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಕೂಡಾ ಅದೇ ಉತ್ತರವನ್ನು ನೀಡಲಾಗಿದೆ.
“ಪಿಎಂ ಕೇರ್ಸ್ ಫಂಡ್ ಆರ್‌ಟಿಐ ಕಾಯಿದೆ, 2005 ರ ಸೆಕ್ಷನ್ 2(ಎಚ್) ರ ಅಡಿಯಲ್ಲಿ ಸಾರ್ವಜನಿಕ ಪ್ರಾಧಿಕಾರವಲ್ಲ. ಆದಾಗ್ಯೂ, ಪಿಎಂ ಕೇರ್ಸ್ ಫಂಡ್‌ಗೆ ಸಂಬಂಧಿಸಿದ ಮಾಹಿತಿಯನ್ನು pmcares.gov.in ವೆಬ್‌ಸೈಟ್‌ನಲ್ಲಿ ನೋಡಬಹುದು” ಎಂದು ತಿಳಿಸಲಾಗಿದೆ.
ಆಗಸ್ಟ್ 2007ರಲ್ಲಿ ಮುಖ್ಯ ಮಾಹಿತಿ ಆಯುಕ್ತರು (ಸಿಐಸಿ) ವಜಾಹತ್ ಹಬೀಬುಲ್ಲಾ ಹೇಳಿರುವಂತೆ ಸಾರ್ವಜನಿಕ ಪ್ರಾಧಿಕಾರದ ಬಳಿ ಜನರು ಬಯಸುವ ಮಾಹಿತಿಯಿದ್ದರೆ ಅದನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಬೇಕು ಎಂದು ಹೇಳಿದ್ದಾರೆ. ಅಂದರೆ ಸಿಐಸಿ ವಜಾಹತ್ ಹಬೀಬುಲ್ಲಾ ಆದೇಶದ ಪ್ರಕಾರ ಪಿಎಂಒ, ಎನ್‌ಐಸಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮೂರು ಕೂಡಾ ಸಾರ್ವಜನಿಕ ಪ್ರಾಧಿಕಾರವಾಗಿದ್ದು ಇವೆಲ್ಲವೂ ಕೂಡಾ ಆರ್‌ಟಿಐ ಅಡಿಯಲ್ಲಿ ಮಾಹಿತಿಯನ್ನು ನೀಡಬೇಕು. ಆದರೆ ಪಿಎಂ ಕೇರ್ಸ್ ಫಂಡ್ ಬಗ್ಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಲಾಗಿದೆ.
ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಹಾಗೂ ಚುನಾವಣಾ ದೇಣಿಗೆಯಲ್ಲಿ ಪಾರದರ್ಶಕತೆ ಎನ್ನುವ ಅಭಿಯಾನದ ನೇತೃತ್ವವನ್ನೂ ವಹಿಸಿರುವ ಲೋಕೇಶ್ ಬತ್ರಾ ಅವರು ಪಿಎಂ ಕೇರ್ಸ್ ಫಂಡ್ ಬಗ್ಗೆ ಮಾಹಿತಿ ನೀಡುವಂತೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದು, ಅದಕ್ಕೂ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲ.
ಇದನ್ನು ಓದಿದ್ದೀರಾ? ಪಿಎಂ ಕೇರ್ಸ್ ಫಲಾನುಭವಿಗಳು ನಾಗಪುರದಲ್ಲಿದ್ದಾರೆ: ಡಾ.ಜಿ.ರಾಮಕೃಷ್ಣ
ಇದಕ್ಕಾಗಿ ಮೇ 28ರಲ್ಲಿ ನೇರವಾಗಿ ಪ್ರಶ್ನೆಯೊಂದನ್ನು ಕೇಳಿ ಲೋಕೇಶ್ ಬತ್ರಾ ಆರ್‌ಟಿಐ ಅರ್ಜಿ ಸಲ್ಲಿಸಿದರು. “ಪಿಎಂ ಕೇರ್ಸ್ ಫಂಡ್ ಸ್ವತಂತ್ರ ಪ್ರಾಧಿಕಾರವೇ ಅಥವಾ ಪ್ರಧಾನಿ ಕಚೇರಿ ಇದರ ದಾಖಲೆಗಳನ್ನು ನಿರ್ವಹಣೆ ಮಾಡುತ್ತದೆಯೇ” ಎಂದು ಪ್ರಶ್ನಿಸಿದರು. ಆದರೆ 30 ದಿನವಾದರೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅದಕ್ಕಾಗಿ ಕಳೆದ ವರ್ಷ ಜುಲೈನಲ್ಲಿ ಮತ್ತೆ ಅದೇ ಆರ್‌ಟಿಐ ಅರ್ಜಿಯನ್ನು ಅವರು ಸಲ್ಲಿಸಿದರು. ಆದರೂ ಪ್ರಧಾನಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಂದ್ರ ಸರ್ಕಾರವೇಕೆ ಉತ್ತರ ನೀಡಲ್ಲ?
ಪ್ರಧಾನಿ ಕಚೇರಿ ಬಳಿ ಪಿಎಂ ಕೇರ್ಸ್ ಫಂಡ್ ಸಂಬಂಧಿತ ದಾಖಲೆಗಳು ಇದೆಯೇ ಎಂಬುವುದಕ್ಕೆ ಪಿಎಂಒ ಯಾಕೆ ಉತ್ತರ ನೀಡುತ್ತಿಲ್ಲ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಹಾಗೆಯೇ ಪಿಎಂ ಕೇರ್ಸ್‌ನ ಪ್ರಧಾನ ಕಚೇರಿ ಪಿಎಂಒ ಆಗಿರುವಾಗ ಪಿಎಂಒ ಉದ್ಯೋಗಿಗಳು ಇದರ ದಾಖಲೆಗಳನ್ನು ನಿರ್ವಹಣೆ ಮಾಡುತ್ತಾರಾ ಅಥವಾ ಇದಕ್ಕಾಗಿ ಪ್ರತ್ಯೇಕ ಉದ್ಯೋಗಿಗಳು ಇದ್ದಾರಾ ಎಂಬ ಮಾಹಿತಿ ನೀಡಲು ಕೇಂದ್ರ ಸರ್ಕಾರ ಯಾಕೆ ಹಿಂಜರಿಯುತ್ತಿದೆ.
ಪ್ರಧಾನಿ ಕಚೇರಿ ಬಳಿ ಪಿಎಂ ಕೇರ್ಸ್ ಫಂಡ್‌ನ ದಾಖಲೆಗಳು ಇದ್ದರೆ ಆರ್‌ಟಿಐ ಕಾಯ್ದೆಯಡಿಯಲ್ಲಿ ಮಾಹಿತಿಯನ್ನು ನೀಡಲೇಬೇಕು. ಆದರೆ ಪ್ರಧಾನಿ ಕಚೇರಿಯು ಯಾವುದೇ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಿರುವಾಗ ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪಿಎಂ ಕೇರ್ಸ್‌ಗೆ ದೇಣಿಗೆಯಾಗಿ ನೀಡಿದ ಬಳಿಕ ಅದನ್ನು ಹೇಗೆ ಬಳಸಲಾಗಿದೆ ಎಂಬ ಮಾಹಿತಿ ತಿಳಿಯುವ ಹಕ್ಕು ಜನರಿಗೆ ಇಲ್ಲವೇ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ ಎಂದು ಕ್ವಿಂಟ್ ವರದಿ ಉಲ್ಲೇಖಿಸಿದೆ.
ಮೂಲ: ದಿ ಕ್ವಿಂಟ್