ಪಶ್ಚಿಮ ಬಂಗಾಳದಲ್ಲಿಂದು ಮೊದಲ ಹಂತದ ಮತದಾನ ನಡೆದಿದೆ. ಈ ಮತದಾನ ನಡೆಯುತ್ತಿರುವಾಗಲೇ ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಯ ಪ್ರಚಾರವನ್ನು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಮಹಿಳೆಯರಿಗಾಗಿ ಹತ್ತು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಇಂದು ಮೊದಲ ಹಂತದ ಮತದಾನ ನಡೆಯುತ್ತಿರುವಾಗಲೇ ಪ್ರಧಾನಿ ಮೋದಿ ಅವರು ಕೃಷ್ಣನಗರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಮಹಿಳೆಯರಿಗಾಗಿ ಹತ್ತು ಹೊಸ ಗ್ಯಾರಂಟಿಗಳನ್ನು ಘೋಷಿಸಿರುವುದು ಎಷ್ಟು ಸರಿ? ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗ ಯಾಕೆ ಕ್ರಮಕೈಗೊಳ್ಳುವುದಿಲ್ಲ ಎಂದು ನೆಟ್ಟಿಗರು ಕೇಳಿದ್ದಾರೆ.
ಇದನ್ನು ಓದಿದ್ದೀರಾ? ಮೋದಿಯ ಮತ್ತೊಂದು ಸುಳ್ಳು: ಬಂಗಾಳದ ಬಡವರ ಮೂಗಿಗೆ ಮೂರು ಸಾವಿರ ಕೋಟಿಯ ತುಪ್ಪ
ಮಹಿಳೆಯರಿಗೆ ವಾರ್ಷಿಕ 36,000 ರೂ. ನೇರ ನಗದು ವರ್ಗಾವಣೆ, ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರತಿ ಮಹಿಳೆಗೆ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೇರಿದಂತೆ ಹತ್ತು ಗ್ಯಾರಂಟಿಗಳನ್ನು ಪ್ರಧಾನಿ ಘೋಷಿಸಿದ್ದಾರೆ.
ಮೊದಲ ಹಂತದ ಮತದಾನ ನಡೆಯುತ್ತಿರುವಾಗ, ಎರಡನೇ ಹಂತದ ಮತದಾನ ನಡೆಯುವ ಕ್ಷೇತ್ರದಲ್ಲಿ ಘೋಷಣೆಗಳನ್ನು ಮಾಡುವುದು ಕಾನೂನಾತ್ಮಕವಾಗಿ ಅಡ್ಡಿಯಿಲ್ಲ ಎಂದು ಚುನಾವಣಾ ಆಯೋಗ ಈ ಹಿಂದೆಯೂ ಹೇಳಿಕೊಂಡಿದೆ. ಆದರೆ ಇಂದಿನ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ, ಒಂದು ಕ್ಷೇತ್ರದಲ್ಲಿ ನೀಡುವ ಭರವಸೆ ಅಥವಾ ಭಾಷಣವು ಮತದಾನ ನಡೆಯುತ್ತಿರುವ ಕ್ಷೇತ್ರದ ಮತದಾರರ ಮೇಲೂ ಪ್ರಭಾವ ಬೀರುತ್ತದೆ. ಇದನ್ನೇ ನೆಟ್ಟಿಗರು “ಪರೋಕ್ಷ ಪ್ರಭಾವವಲ್ಲವೇ” ಎಂದು ಪ್ರಶ್ನಿಸುತ್ತಿದ್ದಾರೆ.





