ಎರಡು ದಿನಗಳ ಹಿಂದೆ ಜನಿಸಿದ್ದ ಹೆಣ್ಣು ಮಗುವನ್ನು ನರ್ಸ್‌ವೊಬ್ಬರು ರೈಲ್ವೇ ಹಳಿಯ ಮೇಲೆ ಎಸೆದುಹೋಗಿರುವ ಅಮಾನುಷ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿ ನರ್ಸ್‌ಅನ್ನು ಪೊಲೀಸರು ಬಂದಿದ್ದಾರೆ.
ಭೋಪಾಲ್‌ನ ಬಾಗ್ ಉಮ್ರಾವ್ ದುಲ್ಹಾದ ಬಳಿ ಇರುವ ರೈಲ್ವೇ ಹಳಿಯ ಸಮೀಪದಲ್ಲಿ ಮಗು ಅಳುತ್ತಿರುವ ಸದ್ದು ಕೇಳಿಸಿದೆ. ಸ್ಥಳೀಯರು ಹೋಗಿ ಪರಿಶೀಲಿಸಿದಾಗ ಮಗು ಪತ್ತೆಯಾಗಿದೆ. ಮಗುವಿನ ಹೊಕ್ಕುಳಬಳ್ಳಿಯನ್ನೂ ಕೂಡ ಇನ್ನೂ ಕತ್ತರಿಸಲಾಗಿರಲಿಲ್ಲ. ಮಗುವನ್ನು ಆಸ್ಪತ್ರೆಗೆ ರವಾನಿಸಲಾದರೂ, ಮಗು ಸಾವನ್ನಪ್ಪಿದೆ.
ಸಿಸಿಟಿವಿ ವಿಡಿಯೋ ಕ್ಲಿಪ್‌ನಲ್ಲಿ ಆರೋಪಿ ನರ್ಸ್ ಆಸ್ಮಾನ್ ಖಾನ್ ಅವರು ಹಳದಿ ಮತ್ತು ನೀಲಿ ಬಣ್ಣದ ಬ್ಯಾಗ್ಅನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ. ಆ ಬ್ಯಾಗ್‌ನಲ್ಲಿ ಮಗುವನ್ನು ಇಟ್ಟು, ರೈಲ್ವೇ ಹಳಿಯ ಮೇಲೆ ಎಸೆದು ಹೋಗಿದ್ದಾರೆ. ಆಕೆ ತನ್ನ ಸ್ಕೋಟರ್‌ನಿಂದ ಬ್ಯಾಗ್‌ಅನ್ನು ತೆಗೆದುಕೊಂಡು ಹೋಗುತ್ತಿರುವುದು ಮತ್ತು ಬರಿಗೈಯಲ್ಲಿ ವಾಪಸ್ ಹೋಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ತನಿಖೆಯ ಪ್ರಕಾರ, 17 ವರ್ಷದ ಅಪ್ರಾಪ್ತ ಬಾಲಕಿಗೆ ಮಗು ಜನಿಸಿತ್ತು. ಆ ಮಗುವನ್ನು ಪೋಷಿಸಲು ಬಾಲಕಿಯ ಕುಟುಂಬದವರು ನಿರಾಕರಿಸಿದ್ದ ಕಾರಣ, ನರ್ಸ್ ಮಗುವನ್ನು ಎಸೆದೆ ಹೋಗಿದ್ದಾರೆ ಎಂದು ಹೇಳಲಾಗಿದೆ. ನರ್ಸ್ ಮತ್ತು ಬಾಲಕಿಯ ಪೋಷಕರು ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 93 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.