ಒಬಿಸಿ (ಇತರ ಹಿಂದುಳಿದ ವರ್ಗಗಳು) ‘ಕೆನೆಪದರ’ (Creamy Layer) ಮೀಸಲಾತಿ ನಿಯಮಗಳಿಗೆ ಸಂಬಂಧಿಸಿದಂತೆ ತಾನು ಕಳೆದ ಮಾರ್ಚ್ನಲ್ಲಿ ನೀಡಿದ್ದ ತೀರ್ಪು, 2025ರ ನಾಗರಿಕ ಸೇವಾ ಪರೀಕ್ಷೆಗೆ (ಸಿಎಸ್ಇ 2025) ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕೇಂದ್ರದ ಈ ಅರ್ಜಿಯ ವಿಚಾರಣೆಗಾಗಿ ವಿಶೇಷ ನ್ಯಾಯಪೀಠವನ್ನು ರಚಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
“ಕೆನೆಪದರ ನಿಯಮವನ್ನು ಬದಲಾಯಿಸಿ ಸುಪ್ರೀಂ ಕೋರ್ಟ್ ಮಾರ್ಚ್ 11ರಂದು ನೀಡಿದ ತೀರ್ಪು, ಸಿಎಸ್ಇ-2025ರ ಅಂತಿಮ ಫಲಿತಾಂಶ ಪ್ರಕಟವಾದ ಐದು ದಿನಗಳ ನಂತರ ಹೊರಬಂದಿದೆ. 2025ರ ನಾಗರಿಕ ಸೇವಾ ಪರೀಕ್ಷೆಯ ಪ್ರಕ್ರಿಯೆಯು ತೀರ್ಪು ಪ್ರಕಟವಾಗುವ ಮುನ್ನವೇ ಬಹುತೇಕ ಪೂರ್ಣಗೊಂಡಿದ್ದು, ಸದ್ಯ ಸೇವಾ ಹಂಚಿಕೆಯ ಅಂತಿಮ ಹಂತದಲ್ಲಿದೆ. ಈ ಹಂತದಲ್ಲಿ ಹೊಸ ತೀರ್ಪನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಿದರೆ, ಒಂದೇ ಪರೀಕ್ಷೆ ಬರೆದು ಆಯ್ಕೆಯಾಗಿರುವ ಅಭ್ಯರ್ಥಿಗಳ ನಡುವೆ ಭಾರೀ ತಾರತಮ್ಯ ಉಂಟಾಗಲಿದ್ದು, ಇದು ಗೊಂದಲಕ್ಕೆ ಕಾರಣವಾಗಲಿದೆ” ಎಂದು ಕೇಂದ್ರ ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಕಳೆದ ಮಾರ್ಚ್ನಲ್ಲಿ ಮಹತ್ವದ ತೀರ್ಪೊಂದನ್ನು ನೀಡಿತ್ತು. “ಕೇವಲ ಪೋಷಕರ ಆದಾಯವನ್ನು ಮಾತ್ರ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಯೊಬ್ಬರನ್ನು ‘ಒಬಿಸಿ ಕೆನೆಪದರ’ದ ವ್ಯಾಪ್ತಿಗೆ ಸೇರಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಅಲ್ಲದೆ, ಮೀಸಲಾತಿ ಸೌಲಭ್ಯವನ್ನು ನಿರ್ಧರಿಸುವಾಗ ಖಾಸಗಿ ಮತ್ತು ಸಾರ್ವಜನಿಕ ವಲಯದ (PSU) ನೌಕರರು ಹಾಗೂ ಅವರ ಮಕ್ಕಳನ್ನು, ಸರ್ಕಾರಿ ನೌಕರರಿಗಿಂತ ಭಿನ್ನವಾಗಿ ಪರಿಗಣಿಸುವುದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ದೆಹಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್ಗಳು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು.
ಒಬಿಸಿ ಕೆನೆಪದರವನ್ನು ಗುರುತಿಸಲು 1993ರ ಸೆಪ್ಟೆಂಬರ್ 8ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಕಚೇರಿ ಜ್ಞಾಪಕ ಪತ್ರ (OM) ಹಾಗೂ 2004ರ ಅಕ್ಟೋಬರ್ 14ರಂದು ನೀಡಿದ್ದ ಸ್ಪಷ್ಟೀಕರಣ ಪತ್ರವನ್ನು ಒಟ್ಟಾಗಿ ಪರಿಶೀಲಿಸಿದಾಗ, ಕೇವಲ ವೇತನದ ಆದಾಯವು ಕೆನೆಪದರವನ್ನು ನಿರ್ಧರಿಸುವ ಏಕೈಕ ಮಾನದಂಡವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಅಭ್ಯರ್ಥಿಯ ಪೋಷಕರು ಹೊಂದಿರುವ ಹುದ್ದೆಯ ಸ್ಥಾನಮಾನ ಮತ್ತು ವರ್ಗವೂ ಮೀಸಲಾತಿ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 2004ರ ಸ್ಪಷ್ಟೀಕರಣ ಪತ್ರಕ್ಕೆ ಅತಿಯಾದ ಪ್ರಾಮುಖ್ಯತೆ ನೀಡಿ, ಕೇವಲ ಆದಾಯವನ್ನು ಮಾತ್ರ ಪರಿಗಣಿಸಿದರೆ ಇಂದ್ರಾ ಸಾಹ್ನಿ ಪ್ರಕರಣದಲ್ಲಿ ರೂಪಿಸಲಾಗಿದ್ದ ಮೂಲ ನೀತಿಯ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ಆದಾಯದ ಜೊತೆಗೆ ಹುದ್ದೆಗಳ ಸ್ಥಾನಮಾನಗಳ (Status parameters) ಆಧಾರದ ಮೇಲೂ ಕೆನೆಪದರವನ್ನು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿತ್ತು. ಇದೀಗ ಈ ಆದೇಶವನ್ನು ಸಿಎಸ್ಇ 2025ರ ಬ್ಯಾಚ್ಗೆ ಅನ್ವಯಿಸಬಾರದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.




