ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ ಕಾರಣಕ್ಕೆ ಬುಡಕಟ್ಟು ಮಹಿಳೆಯೊಬ್ಬರು ಆ ಮಗುವನ್ನು 800 ರೂಪಾಯಿಗೆ ಮಾರಾಟ ಮಾಡಿರುವ ಅಮಾನವೀಯ ಘಟನೆ ಒಡಿಶಾದಲ್ಲಿ ನಡೆದಿದೆ.
ಮಗುವನ್ನು ಮಾರಾಟ ಮಾಡಿದ ಮಹಿಳೆ ಬುಡಕಟ್ಟು ಪಂಗಡಕ್ಕೆ ಸೇರಿದ್ದು, ಆಕೆಯ ಹೆಸರು ಕರಮಿ ಮುರ್ಮು ಎಂದು ಪೊಲೀಸರು ತಿಳಿಸಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಎಂಬಲ್ಲಿ ಘಟನೆ ನಡೆದಿದೆ.
ಕರಮಿ ಮುರ್ಮುಗೆ ಮೊದಲೇ ಒಂದು ಹೆಣ್ಣು ಮಗು ಜನಿಸಿತ್ತು. ಎರಡನೇ ಮಗು ಗಂಡಾಗಬಹುದು ಎಂದು ಆಕೆ ಅಪೇಕ್ಷಿಸಿದ್ದರು. ಆದರೆ, ಎರಡನೇ ಮಗು ಹೆಣ್ಣಾಗಿದ್ದರಿಂದ ಆಕೆ ತೀರಾ ಬೇಸರ ಮಾಡಿಕೊಂಡಿದ್ದರು. ತೀರಾ ಬಡವಿಯಾದ ತಾನು ಆ ಮಗುವನ್ನು ಬೆಳೆಸುವುದು ಹೇಗೆ ಎಂದು ತಮ್ಮ ನೆರೆಯ ಮಹಿಳೆ ಮಹಿ ಮುರ್ಮು ಎನ್ನುವವರ ಜೊತೆ ಆಕೆ ಹೇಳಿಕೊಂಡಿದ್ದರಂತೆ.
ಆಗ ಮಹಿ ಮುರ್ಮು ಮಗುವನ್ನು ಮಾರಾಟ ಮಾಡಲು ನೆರವಾಗುವುದಾಗಿ ಆಶ್ವಾಸನೆ ನೀಡಿದ್ದಾರೆ. ಇಬ್ಬರೂ ಸೇರಿ ಬಿಪ್ರಾಚರಣ್‌ಪುರ್ ಗ್ರಾಮದ ಫುಲಮಣಿ ಮತ್ತು ಅಖಿಲ್ ಮರಾಂಡಿ ಎನ್ನುವ ದಂಪತಿಗೆ ಎಂಟು ತಿಂಗಳ ಮಗುವನ್ನು 800 ರೂಪಾಯಿಗೆ ಮಾರಿದ್ದಾರೆ.
ಮಗುವನ್ನು ಎತ್ತಿಕೊಂಡು ಸಂತೆಗೆ ಹೋಗಿದ್ದ ಕರಮಿ ಮುರ್ಮು ಬರಿಗೈಯಲ್ಲಿ ವಾಪಸ್ಸಾಗಿದ್ದನ್ನು ಕಂಡ ಅಕ್ಕಪಕ್ಕದವರು ಅದರ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ಆಕೆ ಮಗು ಸತ್ತು ಹೋಯಿತೆಂದು ಉತ್ತರಿಸಿದ್ದಾರೆ. ಆಗಲೇ ಹಲವರಿಗೆ ಅನುಮಾನ ಉಂಟಾಗಿದೆ.
ಕರಮಿ ಮುರ್ಮು ಅವರ ಗಂಡ ಮುಸು ಮರ್ಮು ತಮಿಳುನಾಡಿನಲ್ಲಿದ್ದು, ದಿನಗೂಲಿ ಕೆಲಸ ಮಾಡುತ್ತಾರೆ. ಒಮ್ಮೆ ರಜೆ ಪಡೆದು ಮನೆಗೆ ಬಂದ ಆತ ತನ್ನ ಎರಡನೇ ಮಗಳ ಬಗ್ಗೆ ವಿಚಾರಿಸಿದ್ದಾರೆ. ಆ ಮಗು ಸತ್ತುಹೋಯಿತು ಎಂದು ಹೆಂಡತಿ ಉತ್ತರಿಸಿದ್ದಾಳೆ. ಆದರೆ, ನೆರೆಹೊರೆಯವರು ಆತನಿಗೆ ಸತ್ಯಸಂಗತಿ ತಿಳಿಸಿದ್ದಾರೆ.
ಆಗ ಆತ ಹತ್ತಿರದ ಖುಂಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಕ್ಷಣವೇ ಗ್ರಾಮಕ್ಕೆ ಧಾವಿಸಿದ ಪೊಲೀಸರು ಕರಮಿ ಮುರ್ಮು ಅವರನ್ನು ತನಿಖೆ ಮಾಡಿದಾಗ ಮಗು ಮಾರಿದ ಸಂಗತಿ ಖಚಿತವಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮಗುವನ್ನು ವಾಪಸ್ ಪಡೆದು ಶಿಶು ಪೋಷಣಾ ಕೇಂದ್ರಕ್ಕೆ ಕಳಿಸಿದ್ದಾರೆ.
ಮಗುವಿನ ತಾಯಿಯೂ ಸೇರಿದಂತೆ ಪಾಲ್ಗೊಂಡವರ ವಿರುದ್ಧ ಐಪಿಸಿ 370 (ಮಾನವ ಕಳ್ಳಸಾಗಣೆ) ಅಡಿ ಪ್ರಕರಣ ದಾಖಲಾಗಿದೆ.