“ರಾಜಕೀಯ ನಾಯಕರೊಬ್ಬರು ನನಗೆ ಪ್ರಧಾನಿ ಹುದ್ದೆಯ ಆಫರ್ ನೀಡಿದ್ದರು. ಪ್ರಧಾನಿ ಹುದ್ದೆಯ ರೇಸ್‌ಗೆ ನಾನು ಪ್ರವೇಶ ಮಾಡಿದರೆ ಬೆಂಬಲಿಸುವುದಾಗಿ ಹೇಳಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ನಿರಾಕರಿಸಿದೆ. ನಾನು ಪ್ರಧಾನಿಯಾಗುವಂತಹ ಬಯಕೆಯನ್ನು ಹೊಂದಿಲ್ಲ” ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು, “ನನಗೆ ಒಂದು ಘಟನೆ ನೆನಪಿದೆ. ಆದರೆ ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಆ ವ್ಯಕ್ತಿ, ‘ನೀವು ಪ್ರಧಾನಿಯಾಗಲು ಬಯಸಿದರೆ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ಹೇಳಿದರು” ಎಂದು ತಿಳಿಸಿದ್ದಾರೆ.
ಪ್ರಧಾನಿಯಾಗುವುದು ತನ್ನ ಜೀವನದ ಗುರಿಯಲ್ಲ ಎಂದು ಒತ್ತಿ ಹೇಳಿದ ಗಡ್ಕರಿ, “ನಾನು ಆ ವ್ಯಕ್ತಿಯನ್ನು ನೀವು ನನ್ನನ್ನು ಏಕೆ ಬೆಂಬಲಿಸುತ್ತೀರಿ? ನಾನು ನಿಮ್ಮ ಬೆಂಬಲ ಏಕೆ ಪಡೆಯಬೇಕು ಎಂದು ಪ್ರಶ್ನಿಸಿದೆ. ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ, ನಾನು ನನ್ನ ನಂಬಿಕೆಗಳಿಗೆ ಮತ್ತು ನನ್ನ ಸಂಘಟನೆಗೆ ನಿಷ್ಠನಾಗಿದ್ದೇನೆ. ನಾನು ಯಾವುದೇ ಹುದ್ದೆಗೆ ರಾಜಿ ಮಾಡಿಕೊಳ್ಳುವುದಿಲ್ಲ. ಏಕೆಂದರೆ ನನಗೆ ನನ್ನ ನಂಬಿಕೆಗಳು ಅತೀ ಮುಖ್ಯ ಎಂದು ತಿಳಿಸಿದೆ” ಎಂದು ಗಡ್ಕರಿ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ನಿತಿನ್ ಗಡ್ಕರಿ ಭೇಟಿ ಮಾಡಿದ ಬೊಮ್ಮಾಯಿ; ಇಳಕಲ್-ಕಾರವಾರ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಮನವಿ
2024 ಮತ್ತು 2019ರ ಲೋಕಸಭಾ ಚುನಾವಣೆಗಳೆರಡರಲ್ಲೂ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿ ಹೆಸರು ಕೇಳಿಬಂದಿತ್ತು. ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯ ಹೊರತಾಗಿ ದೇಶದಲ್ಲಿ ಪ್ರಧಾನಿಯಾಗಲು ಸೂಕ್ತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮೂರನೇ ಸ್ಥಾನದಲ್ಲಿ ನಿತಿನ್ ಗಡ್ಕರಿ ಇದ್ದಾರೆ.
2019ರಲ್ಲಿ ಈ ಚರ್ಚೆಗಳು ಕಾಣಿಸಿಕೊಂಡಾಗ, ಗಡ್ಕರಿ “ಭಾರತವು ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಕೈಯಲ್ಲಿದೆ” ಎಂದು ಹೇಳಿ ನುಣುಚಿಕೊಂಡಿದ್ದರು. “ನಾವೆಲ್ಲರೂ ಅವರ (ಪ್ರಧಾನಿ ಮೋದಿ) ಹಿಂದೆ ಇದ್ದೇವೆ. ಅವರ ದೂರದೃಷ್ಟಿಯನ್ನು ಸಾಧಿಸಲು ಕಾರ್ಯನಿರ್ವಹಿಸುವ ಕಾರ್ಯಕರ್ತರಲ್ಲಿ ನಾನೂ ಕೂಡಾ ಒಬ್ಬ. ನಾನು ಪ್ರಧಾನಿಯಾಗುವ ಪ್ರಶ್ನೆ ಎಲ್ಲಿಂದ ಬರುತ್ತದೆ? ನಾನು ಪ್ರಧಾನಿಯಾಗುವ ಸ್ಪರ್ಧೆಯಲ್ಲಿ ಇಲ್ಲ. ನಾನು ಆ ಕನಸು ಕಾಣುತ್ತಿಲ್ಲ” ಎಂದು 2019ರ ಮಾರ್ಚ್‌ನಲ್ಲಿ ಹೇಳಿದ್ದರು.
#WATCH | Nagpur, Maharashtra | Union Minister Nitin Gadkari says, "I do not want to name anyone but a person said to me, if you are going to become a Prime Minister, we will support you. I said, why you should support me, and why I should take your support. To become a Prime… pic.twitter.com/yo6QDpqq5b
— ANI (@ANI) September 15, 2024
