ನವೆಂಬರ್‌ನಲ್ಲಿ ಸುಮಾರು 500 ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ್ದ ಓಲಾ ಎಲೆಕ್ಟ್ರಿಕ್ ಈಗ ಮತ್ತೆ ಒಂದು ಸಾವಿರ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಗುತ್ತಿಗೆ ಕೆಲಸಗಾರರನ್ನು ಕೂಡಾ ಉದ್ಯೋಗದಿಂದ ತೆಗೆದುಹಾಕಲು ಓಲಾ ಎಲೆಕ್ಟ್ರಿಕ್ ಸಜ್ಜಾಗಿದೆ ಎಂದು ಬ್ಲ್ಯೂಬರ್ಗ್ ವರದಿ ಮಾಡಿದೆ.
ಲಾಭ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಕಳೆದ ನವೆಂಬರ್‌ನಲ್ಲಿ 500 ಉದ್ಯೋಗಗಳನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಡಿಸೆಂಬರ್ 31ರ ಲೆಕ್ಕಾಚಾರದಂತೆ ಸಂಸ್ಥೆಯಲ್ಲಿ 3,824 ಉದ್ಯೋಗಿಗಳು ಉಳಿದಿದ್ದಾರೆ. 2023ರಲ್ಲಿ ಸಂಸ್ಥೆಯಲ್ಲಿದ್ದ ಉದ್ಯೋಗಿಗಳ ಸಂಖ್ಯೆಗೆ ಹೋಲಿಸಿದರೆ, 2024ರಲ್ಲಿ ಓಲಾ ಎಲೆಕ್ಟ್ರಿಕ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಶೇಕಡ 1.8ರಷ್ಟು ಕಡಿಮೆಯಾಗಿದೆ.
ಇದನ್ನು ಓದಿದ್ದೀರಾ? ಕೆಟ್ಟು ನಿಲ್ಲುತ್ತಿವೆ ‘ಓಲಾ ಇವಿ’; ಓಲಾ ಸಿಇಒ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವೀಟ್ ವಾರ್
ಕೋವಿಡ್ ಸಾಂಕ್ರಾಮಿಕದ ನಂತರದಿಂದ ನಷ್ಟ, ಲಾಭ ಹೆಚ್ಚಿಸುವ ಉದ್ದೇಶ, ಸಂಸ್ಥೆಯ ಪುನರ್ ರಚನೆ ನೆಪದಲ್ಲಿ ಹಲವು ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಾ ಬಂದಿದೆ. ಇಂದಿಗೂ ಉತ್ತಮ ಲಾಭ ಪಡೆಯುತ್ತಿರುವ ಸಂಸ್ಥೆಗಳು ಕೂಡಾ ಉದ್ಯೋಗ, ವೇತನ ಕಡಿತಗೊಳಿಸಿ, ಇರುವ ಉದ್ಯೋಗಿಗಳ ಮೇಲೆ ಎಲ್ಲಾ ಕೆಲಸದ ಹೊರೆಯನ್ನು ಹಾಕುತ್ತಿದೆ. ಹೆಚ್ಚಿನ ಅವಧಿ ದುಡಿಸುತ್ತಿದೆ.
ಇವೆಲ್ಲವುದರ ನಡುವೆ ಓಲಾ ಎಲೆಕ್ಟ್ರಿಕ್ ಸ್ಥಿತಿ ವಿಭಿನ್ನವಾಗಿದೆ. ಇವಿ ಬಳಕೆಗೆ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಂಸ್ಥೆಯು ಹೆಚ್ಚು ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದೆ. ಆದರೆ ಇನ್ನೂ ಕೂಡಾ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಕುನಾಲ್ ಕಮ್ರಾ ಜೊತೆ ಟ್ವೀಟ್ ವಾರ್ | ಓಲಾ ಷೇರು ಕುಸಿತ; ಭವಿಶ್ ದುರಹಂಕಾರದ ಫಲವೆಂದ ನೆಟ್ಟಿಗರು
ಉದ್ಯೋಗ ಕಡಿತದ ಬಗ್ಗೆ ವರದಿಯಾಗುತ್ತಿದ್ದಂತೆ ಓಲಾ ಸಂಸ್ಥೆಯು ಷೇರುಪೇಟೆಯಲ್ಲಿ ಭಾರೀ ಕುಸಿತ ಕಂಡಿದೆ. ಓಲಾ ಷೇರು ಮೌಲ್ಯ ಸುಮಾರು ಶೇಕಡ 5ರಷ್ಟು ಇಳಿದು 54.05 ರೂಪಾಯಿಗೆ ತಲುಪಿದೆ. ಆಗಸ್ಟ್ 9ರಂದು ಷೇರು ಮಾರುಕಟ್ಟೆಯಲ್ಲಿ ಲೀಸ್ಟ್ ಆದಾಗಿನಿಂದ ಸಂಸ್ಥೆಯು ಮಾರುಕಟ್ಟೆ ಮೌಲ್ಯವು ಸುಮಾರು ಶೇಕಡ 30ರಷ್ಟು ಕುಸಿದಿದೆ. ಹಾಗೆಯೇ ಸಂಸ್ಥೆಯ ಪ್ರಸ್ತುತ ಷೇರು ಬೆಲೆಯು 52 ವಾರಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.
