ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಸಮುದಾಯದ ವೃದ್ಧನ ಮೇಲೆ ಪುಂಡರ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ. ವೃದ್ಧ ತನ್ನ ಬ್ಯಾಗ್ನಲ್ಲಿ ದನದ ಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ದುಷ್ಕರ್ಮಿಗಳು ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದುಷ್ಕರ್ಮಿ ಪುಂಡ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ವಿಡಿಯೋದಲ್ಲಿ, ವೃದ್ಧನನ್ನು 12 ಮಂದಿ ದುಷ್ಕರ್ಮಿಗಳು ಸುತ್ತುವರೆದು ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
“ನಾವು ವೀಡಿಯೊದಲ್ಲಿರುವ ಆರೋಪಿಗಳನ್ನು ಗುರುತಿಸಿದ್ದೇವೆ. ಆರೋಪಿಗಳ ಬಂಧನಕ್ಕೆ ಶೋಧ ನಡೆಯುತ್ತಿದೆ” ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ.
ರೈಲ್ವೇ ಪೊಲೀಸರ ಪ್ರಕಾರ, ಜಲಗಾಂವ್ ಜಿಲ್ಲೆಯ ನಿವಾಸಿ, ಸಂತ್ರಸ್ತ ವೃದ್ಧ ಹಾಜಿ ಅಶ್ರಫ್ ಮುನ್ಯಾರ್ ಅವರು ತನ್ನ ಮಗಳ ಮನೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ತಮ್ಮ ಬ್ಯಾಗ್ನಲ್ಲಿ ಮೇಕೆ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಅವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ್ದರಿಂದ ಅವರು ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಭಾವಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ವೃದ್ಧ, ‘ಇದು ಮೇಕೆ ಮಾಂಸವೇ ಹೊರತು ದನದ ಮಾಂಸವಲ್ಲ’ ಎಂದು ಹೇಳಿದರೂ, ದಾಳಿಕೋರರ ಗುಂಪು ವೃದ್ಧನ ಮಾತನ್ನು ಕೇಳದೆ ಹಲ್ಲೆ ನಡೆಸಿದೆ.
ಇಂತಹ ಕೃತ್ಯಗಳ ವಿರುದ್ಧಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರ ಸರ್ಕಾರವನ್ನು ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪಘರ್ಹಿ ಒತ್ತಾಯಿಸಿದ್ದಾರೆ.