‘ಆಪರೇಷನ್ ಸಿಂಧೂರ’ ಪೋಸ್ಟ್‌: ಜೈಲಿನಲ್ಲಿದ್ದ ವಿದ್ಯಾರ್ಥಿನಿ ಬಿಡುಗಡೆ ಮಾಡಿದ ಹೈಕೋರ್ಟ್‌; ಕಾಲೇಜು-ಪೊಲೀಸರ ವಿರುದ್ಧ ಕಿಡಿ!

Date:

Advertisements

ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಟೀಕಿಸಿ, ತರ್ಕವುಳ್ಳ ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ವಿದ್ಯಾರ್ಥಿನಿಯೊಬ್ಬರನ್ನು ಬಂಧಿಸಿ, ಜೈಲಿನಲ್ಲಿಡಲಾಗಿತ್ತು. ಇದೀಗ, ಆಕೆಯನ್ನು ಬಾಂಬೆ ಹೈಕೋರ್ಟ್‌ ಬಿಡುಗಡೆ ಮಾಡಿದೆ. ಪೊಲೀಸರು ಮತ್ತು ಕಾಲೇಜು ಆಕೆಯ ಭವಿಷ್ಯವನ್ನು ಹಾಳುಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಮಹಾರಾಷ್ಟ್ರದ ಪುಣೆಯಲ್ಲಿರುವ ‘ಸಿಂಘಡ್ ಅಕಾಡೆಮಿ ಆಫ್ ಎಂಜಿನಿಯರಿಂಗ್’ ಕಾಲೇಜಿನಲ್ಲಿ ಬಿಟೆಕ್ (ಐಟಿ) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಖದೀಜಾ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಟೀಕಿಸಿದ್ದರು. ಅಲ್ಲದೆ, ಬೇರೆ ಯಾರೋ ಬರೆದಿದ್ದ ‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಕೊನೆಗೊಳ್ಳುವ ಉದ್ದದ ಪೋಸ್ಟ್‌ವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ (ರೀ-ಶೇರ್) ಹಂಚಿಕೊಂಡಿದ್ದರು. ಒಂದೆರಡು ಗಂಟೆಗಳಲ್ಲೇ ಆ ಪೋಸ್ಟ್‌ಅನ್ನು ಡಿಲೀಟ್‌ ಮಾಡಿದ್ದರು. ಆದಾಗ್ಯೂ, ಆ ಪೋಸ್ಟ್‌ ಹಂಚಿಕೊಂಡಿದ್ದಕ್ಕಾಗಿ ಆಕೆಯ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಕೂಡಲೇ, ಆಕೆಯನ್ನು ಕಾಲೇಜಿನಿಂದಲೂ ಹೊರಹಾಕಿ ರಸ್ವಿಕೇಷನ್ ಆದೇಶ ಹೊರಡಿಸಲಾಗಿತ್ತು.

ಪೊಲೀಸರು ಮತ್ತು ಕಾಲೇಜಿನ ನಡೆಯನ್ನು ಬಾಂಬೆ ಹೈಕೋರ್ಟ್‌ ತೀವ್ರವಾಗಿ ಟೀಕಿಸಿದೆ. ವಿದ್ಯಾರ್ಥಿನಿಗೆ ತಾನು ಮಾಡಿಕೊಂಡ ಅಚಾತುರ್ಯದ ಬಗ್ಗೆ ವಿವರಿಸಲು ಅವಕಾಶವನ್ನೂ ಕೊಡದೆ ರಸ್ವಿಕೇಷನ್ ಆದೇಶ ಹೊರಡಿಸಿರುವುದು ‘ಆತುರದ ನಿರ್ಧಾರ’ ಎಂದು ಕೋರ್ಟ್‌ ಹೇಳಿದೆ.  ಕಾಲೇಜು ಹೊರಡಿಸಿದ್ದ ‘ರಸ್ವಿಕೇಷನ್ ಆದೇಶ’ವನ್ನು ರದ್ದುಗೊಳಿಸಿದ್ದು, ಪ್ರಸ್ತುತ ನಡೆಯುತ್ತಿರುವ ವಿಶ್ವವಿದ್ಯಾಲಯದ ಪರೀಕ್ಷೆಗಳಲ್ಲಿ ಹಾಜರಾಗಲು ಅವಕಾಶ ಮಾಡಿಕೊಟ್ಟಿದೆ. ಜಾಮೀನನ್ನೂ ಮಂಜೂರು ಮಾಡಿದೆ.

Advertisements

ವಿದ್ಯಾರ್ಥಿನಿ ಹಂಚಿಕೊಂಡು, ಡಿಲೀಟ್‌ ಮಾಡಿದ್ದ ಪೋಸ್ಟ್‌ಅನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡಿದ್ದ ಹಿಂದುತ್ವವಾದಿ ಸಂಘಟನೆಗಳು ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಬಲಪಂಥೀಯವಾದಿಗಳು ಆಕೆಯ ಪೋಸ್ಟ್‌ ಮತ್ತು ಫೋಟೋವನ್ನು ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡು ದ್ವೇಷ ವ್ಯಕ್ತಪಡಿಸಿದ್ದವು. ಬಳಿಕ, ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಪೊಲೀಸರು ಆಕೆಯನ್ನು ಬಂಧಿಸಿದ ಬಳಿಕ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸಹ ವಿದ್ಯಾರ್ಥಿನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದವು.

ವಿದ್ಯಾರ್ಥಿನಿ ಜೀವನ ಹಾಳು ಮಾಡಲಾಗುತ್ತಿದೆ ಎಂದ ಹೈಕೋರ್ಟ್‌

ವಿದ್ಯಾರ್ಥಿನಿ ವಿರುದ್ಧ ಬಿಎನ್‌ಎಸ್‌ ಸೆಕ್ಷನ್ 152(1)(b) (ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳು), ಸೆಕ್ಷನ್ 196 (ಗುಂಪುಗಳ ನಡುವೆ ದ್ವೇಷವನ್ನು ಪ್ರಚೋಜಿಸುವುದು), ಸೆಕ್ಷನ್ 197 (ರಾಷ್ಟ್ರೀಯ ಏಕೀಕರಣದ ವಿರುದ್ಧ ಪೂರ್ವಾಗ್ರಹ ಪೀಡಿತ ಕೃತ್ಯಗಳು), ಸೆಕ್ಷನ್ 299 (ಸಾರ್ವಜನಿಕ ಕಿಡಿಗೇಡಿತನ), ಸೆಕ್ಷನ್ 352 (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣವನ್ನು ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಗೌರಿ ವಿ ಗೋಡ್ಸೆ ಮತ್ತು ಸೋಮಶೇಖರ್ ಸುಂದರೇಶನ್ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ವಿದ್ಯಾರ್ಥಿನಿ ವಿಚಾರದಲ್ಲಿ ಕಾಲೇಜಿನ ಉದ್ದೇಶ ಮತ್ತು ಅದರ ಕ್ರಮಗಳ ನ್ಯಾಯಸಮ್ಮತತೆಯ ಕುರಿತು ಪ್ರಶ್ನಿಸಿದೆ.

“ವಿದ್ಯಾರ್ಥಿನಿಯ ವಿವರಣೆಯನ್ನು ಕಾಲೇಜು ತೆಗೆದುಕೊಂಡಿದೆಯೇ? ವಿಚಾರಣೆಯಿಲ್ಲದೆ ಆಕೆಯನ್ನು ರಸ್ಟಿಕೇಷನ್ ಮಾಡಿದ್ದರೆ, ಇದು ಯಾವ ರೀತಿಯ ನ್ಯಾಯ?” ಎಂದು ಎಂದು ಪೀಠವು ಟೀಕಿಸಿದೆ.

“ವಿದ್ಯಾರ್ಥಿನಿಗೆ ಯಾವುದೇ ಶೋ-ಕಾಸ್‌ ನೋಟಿಸ್‌ ನೀಡದೆ, ಯಾವುದೇ ವಿಚಾರಣೆ ನಡೆಸದೆ, ಪ್ರತಿಕ್ರಿಯೆ-ವಿವರಣೆ ಪಡೆಯದೆ, ಇನ್‌ಸ್ಟಾಗ್ರಾಮ್‌ನ ಪೋಸ್ಟ್‌  ದುರುದ್ದೇಶಪೂರಿತ ಅಥವಾ ಅಜಾಗರೂಕತೆಯಿಂದ ಕೂಡಿದೆಯೇ ಎಂಬುದನ್ನು ಪರಿಶೀಲಿಸದೆ 24 ಗಂಟೆಗಳೊಳಗೆ ಆಕೆಯನ್ನು ಕಾಲೇಜು ರಸ್ವಿಕೇಷನ್ ಮಾಡಿದೆ. ಇಂತಹ ಆತುರದ ಕ್ರಮವು ನೈಸರ್ಗಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸುತ್ತದೆ. ವಿದ್ಯಾರ್ಥಿಯ ಪಶ್ಚಾತ್ತಾಪ ಮತ್ತು ಆಕೆ ಆ ಪೋಸ್ಟ್ ಅನ್ನು ಅಳಿಸುವುದನ್ನು ಕಾಲೇಜು ನಿರ್ಲಕ್ಷಿಸಿದೆ” ಎಂದು ಪೀಠವು ಗಮನಿಸಿದೆ.

ವಿದ್ಯಾರ್ಥಿನಿ ಪರ ವಾದ ಮಂಡಿಸಿದ ವಕೀಲೆ ಫರ್ಹಾನಾ ಶಾ, “ಇನ್‌ಸ್ಟಾಗ್ರಾಮ್ ಪೋಸ್ಟ್‌ಅನ್ನು ಖದೀಜಾ ಬರೆದಿಲ್ಲ. ಬೇರೆ ಯಾರೋ ಬರೆದಿದ್ದನ್ನು ಮರುಹಂಚಿಕೆ (ರೀ-ಶೇರ್) ಮಾಡಿದ್ದಾರೆ. ಬಳಿಕ, ಎರಡೇ ಗಂಟೆಗಳಲ್ಲಿ ಪೋಸ್ಟ್‌ಅನ್ನು ಅಳಿಸಿದ್ದಾರೆ. ಆಕೆಗೆ ರಾಷ್ಟ್ರೀಯ ಭಾವನೆಗಳಿಗೆ ನೋವುಂಟು ಮಾಡುವ ಅಥವಾ ರಾಷ್ಟ್ರೀಯ ಸಮಗ್ರತೆಗೆ ಬೆದರಿಕೆ ಹಾಕುವ ಉದ್ದೇಶ ಇರಲಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

“ತಮ್ಮ ಕಕ್ಷಿದಾರರು ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ಅವರು ಯಾವುದೇ ಕ್ರಿಮಿನಲ್ ಹಿನ್ನಲೆಯನ್ನು ಹೊಂದಿಲ್ಲ. ಪೊಲೀಸರು ಮತ್ತು ಕಾಲೇಜು ಏಕಪಕ್ಷೀಯವಾಗಿ ಮತ್ತು ನ್ಯಾಯಸಮ್ಮತತೆಗೆ ವಿರುದ್ಧವಾಗಿ ವರ್ತಿಸಿವೆ” ಎಂದು ಫರ್ಹಾನಾ ವಾದಿಸಿದ್ದಾರೆ.

ವಾದವನ್ನು ಆಲಿಸಿದ ನ್ಯಾಯಮೂರ್ತಿ ಸುಂದರೇಶನ್, “ವಿದ್ಯಾರ್ಥಿನಿ ಈಗಾಗಲೇ ಸಾಕಷ್ಟು ಪರಿಣಾಮಗಳನ್ನು ಅನುಭವಿಸಿದ್ದಾರೆ. ನಿಮಗೆ ಇನ್ನೇನು ಬೇಕು? ಅವರನ್ನು ವಂಚಿಸಲಾಗಿದೆ, ಬಂಧಿಸಲಾಗಿದೆ ಹಾಗೂ ಜೈಲಿಗೆ ಹಾಕಲಾಗಿದೆ. ಅವರು ಪೋಸ್ಟ್ ಅನ್ನು ಅಳಿಸಿಹಾಕಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ. ಇದು ಸುಧಾರಣೆಯಲ್ಲವೇ” ಎಂದು ಕಾಲೇಜು ಮತ್ತು ಪೊಲೀಸರು ಪ್ರಶ್ನಿಸಿದ್ದಾರೆ.

ಈ ಲೇಖನ ಓದಿದ್ದೀರಾ?:‘ಆಪರೇ‍ಷನ್ ಸಿಂಧೂರ’ದಲ್ಲಿವೆ ಹಲವು ವೈಫಲ್ಯಗಳು: ಇಲ್ಲಿದೆ ಪೂರ್ಣ ಮಾಹಿತಿ

“ಏಕಪಕ್ಷೀಯವಾಗಿ ಈ ರೀತಿ ಕ್ರಮಗಳನ್ನು ಕೈಗೊಳ್ಳುವುದು ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡುತ್ತದೆ. ನೀವು ಅವರನ್ನು ವ್ಯವಸ್ಥೆಯಿಂದ ಹೊರಗೆ ತಳ್ಳಿದರೆ, ನೀವು ಅಶಾಂತಿ, ಅಸಮಾಧಾನ, ಅಸಮಾನತೆಯನ್ನು ಪ್ರಚೋದಿಸುವವರಾಗುತ್ತೀರಿ. ಯುವ ಧ್ವನಿಗಳನ್ನು ಅಪರಾಧೀಕರಿಸಬಾರದು” ಎಂದು ಪೀಠವು ಹೇಳಿದೆ.

“ವಿದ್ಯಾರ್ಥಿನಿಯನ್ನು ತಕ್ಷಣ ಬಿಡುಗಡೆ ಮಾಡಲು ನಾವು ನಿರ್ದೇಶಿಸುತ್ತೇವೆ. ಕಾಲೇಜಿನ ರಸ್ಟಿಕೇಷನ್ ಆದೇಶವನ್ನು ರದ್ದುಪಡಿಸಿದ್ದೇವೆ. ಆಕೆಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ಕಾಲೇಜಿಗೆ ಆದೇಶಿಸುತ್ತಿದ್ದೇವೆ” ಎಂದು ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

“ಪರೀಕ್ಷೆಯ ಸಮಯದಲ್ಲಿ ಯಾವುದೇ ಪೊಲೀಸ್ ವಿಚಾರಣೆ ಅಥವಾ ಸಮನ್ಸ್ ಜಾರಿ ಮಾಡಬಾರದು” ಎಂದು ಪೊಲೀಸರಿಗೆ ಸೂಚಿಸಿದ ನ್ಯಾಯಾಲಯವು, “ವಿದ್ಯಾರ್ಥಿನಿಯು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ, ಮಹಾರಾಷ್ಟ್ರವನ್ನು ತೊರೆಯುವಂತಿಲ್ಲ. ಪರೀಕ್ಷಾ ನಂತರದಲ್ಲಿ ವಿಚಾರಣೆಗೆ ಪೊಲೀಸರಿಗೆ ಸಹಕಾರ ನೀಡಬೇಕು” ಎಂದು ನಿರ್ದೇಶಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X