ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿರುದ್ಧದ ಹೋರಾಟ, ಕಾರ್ಯಾಚರಣೆಯ ವಿಚಾರದಲ್ಲಿ ಪ್ರಮುಖ ವಿಪಕ್ಷ ಕಾಂಗ್ರೆಸ್ ಆದಿಯಾಗಿ ದೇಶದ ಎಲ್ಲ ಪಕ್ಷಗಳು ಭಾರತ ಸರ್ಕಾರದ ಜೊತೆಗೆ ನಿಂತಿದ್ದವು. ಭಯೋತ್ಪಾದಕರ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದವು. ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ಕ್ಕೆ ಸಂಪೂರ್ಣ ಬೆಂಬಲ ನೀಡಿದವು. ಆದರೂ, ಕಾರ್ಯಾಚರಣೆ ನಂತರದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ವಿವಾದವೊಂದು ಹುಟ್ಟಿಕೊಂಡಿದೆ. ಕಾಂಗ್ರೆಸ್ ಮತ್ತು ತರೂರು ನಡುವೆಯೇ ತಿಕ್ಕಾಟ ನಡೆಯುತ್ತಿದೆ. ಅದನ್ನು ತನ್ನ ರಾಜಕೀಯಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಭಯೋತ್ಪಾದನೆ ವಿರುದ್ಧದ ಭಾರತದ ನಿಲುವನ್ನು ಜಾಗತಿಕ ಶಕ್ತಿಗಳಿಗೆ ತಿಳಿಸುವ ಸರ್ವಪಕ್ಷ ನಿಯೋಗಕ್ಕೆ ತರೂರ್ ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಭಾರತ-ಪಾಕ್ ಸಂಘರ್ಷ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಸೂಚಿಸಿತ್ತು. ಸರ್ಕಾರದ ನಿರ್ಧಾರಗಳ ಜೊತೆ ನಿಲ್ಲುವುದಾಗಿ ಘೋಷಿಸಿತ್ತು. ಅಂತೆಯೇ, ಶಶಿ ತರೂರ್ ಕೂಡ ಆಪರೇಷನ್ ಸಿಂಧೂರಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದರು. ಅಲ್ಲದೆ, ಮೇ 7ರಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ‘ಕ್ಯಾಲಿಬ್ರೇಟೆಡ್’ ಮತ್ತು ‘ಪರಿಣಾಮಕಾರಿ’ ಎಂದು ಬಣ್ಣಿಸಿದರು, ಕೊಂಡಾಡಿದ್ದರು.
“ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾರಚರಣೆಯು ಭಾರತದ ಸ್ವರಕ್ಷಣೆಯ ಭಾಗವಾಗಿದೆ. ಪಾಕಿಸ್ತಾನಕ್ಕೆ ಭಯೋತ್ಪಾದನೆಯ ಕಾರಣಕ್ಕಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬ ಸಂದೇಶವನ್ನು ಸಾರಿದೆ. ಕಾರ್ಯಾಚರಣೆಯ ಹೆಸರು ‘ಸಿಂಧೂರ’ ಎಂದಿರುವುದು ಭಾವನಾತ್ಮಕವಾಗಿ ಪ್ರಭಾವಶಾಲಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತರೂರ್ ಅವರ ಈ ಹೇಳಿಕೆಗೆ ದೇಶದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಆದಾಗ್ಯೂ, ಅವರ ಹೇಳಿಕೆ, ನಡೆ-ನುಡಿ, ಧೋರಣೆಗಳ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿತು. ಕಾರ್ಯಾಚರಣೆಯನ್ನು ಕಾಂಗ್ರೆಸ್ ಬೆಂಬಲಿಸಿದ್ದರೂ, ತರೂರ್ ಅವರ ಧೋರಣೆ ಮತ್ತು ಮಾತುಗಳು ‘ಲಕ್ಷ್ಮಣ ರೇಖೆ ಮೀರಿವೆ’ ಎಂದು ಪಕ್ಷದ ಹಿರಿಯ ನಾಯಕರು ಟೀಕಿಸಿದರು.
ಈ ವರದಿ ಓದಿದ್ದೀರಾ?: ಸಿಂಧು ನದಿ ನೀರು ಹರಿಸಲೇಬೇಕು – ಇಲ್ಲದಿದ್ದರೆ ಭಾರತಕ್ಕೇ ಗಂಭೀರ ಸಮಸ್ಯೆ!
ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಮೇ 15ರಂದು, “ತರೂರ್ ಅವರ ಹೇಳಿಕೆಗಳು ಪಕ್ಷದ ಅಧಿಕೃತ ಅಭಿಪ್ರಾಯವನ್ನು ಪ್ರತಿನಿಧಿಸುವುದಿಲ್ಲ. ತರೂರ್ ಅವರು ವ್ಯಕ್ತಪಡಿಸಿದ್ದು ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ಅಭಿಪ್ರಾಯವಲ್ಲ” ಎಂದು ಹೇಳಿದರು. ಅಲ್ಲದೆ, ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯೂಸಿ) ಸಭೆಯಲ್ಲಿ ತರೂರ್ ‘ಲಕ್ಷ್ಮಣ ರೇಖೆ ಮೀರಿದ್ದಾರೆ’ ಎಂದು ಆರೋಪಿಸಲಾಗಿದೆ ಎಂಬುದಾಗಿ ವರದಿಯಾಗಿದೆ.
ಆದರೆ, ತಮ್ಮ ವಿರುದ್ಧದ ಆರೋಪವನ್ನು ತರೂರ್ ತಳ್ಳಿಹಾಕಿದ್ದಾರೆ. ಸಿಡಬ್ಲ್ಯೂಸಿ ಸಭೆಯಲ್ಲಿ ಸ್ವತಃ ಭಾಗಿಯಾಗಿದ್ದ ತರೂರ್, ‘ಸಭೆಯಲ್ಲಿ ಇಂತಹ ಯಾವುದೇ ಚರ್ಚೆ ನಡೆದಿಲ್ಲ. ಅಂತಹ ಚರ್ಚೆಯಲ್ಲಿ ನಾನು ಭಾಗವಾಗಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
“ನನ್ನ ಹೇಳಿಕೆಗಳು ವೈಯಕ್ತಿಕವಾದವು. ಭಾರತೀಯನಾಗಿ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಉದ್ದೇಶದಿಂದ ನಾನು ಮಾತನಾಡಿದ್ದೇನೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುವ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ತರೂರ್ ನಡುವೆ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲೇ, ಕೇಂದ್ರ ಸರ್ಕಾರವು ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಪ್ರತಿಪಾದಿಸಲು ರಚಿಸಲಾಗಿರುವ ನಿಯೋಗಕ್ಕೆ ತರೂರ್ ಅವರನ್ನೇ ಆಯ್ಕೆ ಮಾಡಿದೆ.
ತರೂರ್ ಅವರನ್ನು ಒಳಗೊಂಡಂತೆ ಏಳು ಸರ್ವಪಕ್ಷಗಳ ನಿಯೋಗಗಳನ್ನು ಭಾರತದ ಪ್ರಮುಖ ಪಾಲುದಾರ ರಾಷ್ಟ್ರಗಳಿಗೆ ಕಳುಹಿಸುವುದಾಗಿ ಸರ್ಕಾರ ಘೋಷಿಸಿದೆ. ಅಮೆರಿಕಗೆ ತೆರಳುತ್ತಿರುವ ನಿಯೋಗಕ್ಕೆ ತರೂರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಆದರೆ, ಸರ್ವಪಕ್ಷಗಳ ನಿಯೋಗಕ್ಕೆ ಆಯ್ಕೆಗಾಗಿ ಕಾಂಗ್ರೆಸ್ ಕಳುಹಿಸಿದ್ದ ಪಟ್ಟಿಯಲ್ಲಿ ತರೂರ್ ಅವರ ಹೆಸರೇ ಇರಲಿಲ್ಲ. ಆದಾಗ್ಯೂ, ಕೇಂದ್ರ ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ತರೂರ್ ಅವರನ್ನು ನಿಯೋಗಕ್ಕೆ ಆಯ್ಕೆ ಮಾಡಿಕೊಂಡಿದೆ. ಇದು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದ್ದು, “ಸರ್ಕಾರವು ತಾನು ಬಯಸಿದವರನ್ನು ಆಯ್ಕೆ ಮಾಡಿದೆ. ಆದರೆ ಪಕ್ಷದೊಂದಿಗೆ ಸಮಾಲೋಚನೆ ನಡೆಸಿಲ್ಲ. ಸರ್ವಪಕ್ಷ ನಿಯೋಗಕ್ಕಾಗಿ ಕಾಂಗ್ರೆಸ್‌ನಿಂದ ಗೌರವ್ ಗೊಗೊಯ್, ಸೈಯದ್ ನಸೀರ್ ಹುಸೇನ್, ರಾಜಾ ಬ್ರಾರ್ ಹಾಗೂ ಆನಂದ್ ಶರ್ಮಾ ಅವರ ಹೆಸರನ್ನು ಸೂಚಿಸಲಾಗಿತ್ತು. ಅದರಲ್ಲಿ, ತರೂರ್ ಹೆಸರು ಇರಲಿಲ್ಲ. ಆದರೂ, ತರೂರ್ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಇದು ಸರ್ಕಾರದ ರಾಜಕೀಯ ಆಟ” ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಈ ವರದಿ ಓದಿದ್ದೀರಾ?: ‘ತಿರಂಗಾ ಯಾತ್ರೆ’ ಯಾರಿಗಾಗಿ? ದೇಶಕ್ಕೋ-ಮೋದಿಗೋ?
ಅವರ ಟೀಕೆಗೆ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪ್ರತಿಕ್ರಿಯಿಸಿದ್ದು, “ಕಾಂಗ್ರೆಸ್‌ನಲ್ಲಿ ಆಂತರಿಕ ಸ್ಥಿರತೆಯ ಕೊರತೆ ಇದೆ. ಜೈರಾಮ್ ರಮೇಶ್ ಅವರು ತಮ್ಮದೇ ಪಕ್ಷದ ಸಹೋದ್ಯೋಗಿ ಶಶಿ ತರೂರ್ ಅವರನ್ನು ವಿರೋಧಿಸುತ್ತಿದ್ದಾರೆ. ತರೂರ್ ಅವರ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ಅನುಭವ ಮತ್ತು ವಾಗ್ಚಾತುರ್ಯವನ್ನು ಗಮನಿಸಿ ಸರ್ಕಾರವು ಅವರನ್ನು ಆಯ್ಕೆ ಮಾಡಿದೆ” ಎಂದು ಹೇಳಿದ್ದಾರೆ.
ಇನ್ನು, ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ತರೂರ್, “ನಾನು ಪಕ್ಷದ ವಕ್ತಾರನೂ ಅಲ್ಲ, ಸರ್ಕಾರದ ವಕ್ತಾರನೂ ಅಲ್ಲ. ನನ್ನ ಅಭಿಪ್ರಾಯಗಳಿಗೆ ಒಪ್ಪಿಗೆ ಇಲ್ಲಿದಿದ್ದರೆ ವಿರೋಧಿಸಿ. ಭಯೋತ್ಪಾದನೆ ವಿರುದ್ಧದ ಭಾರತದ ನಿಲುವನ್ನು ಜಗತ್ತಿಗೆ ಸಾರುವ ಸರ್ವಪಕ್ಷ ನಿಯೋಗಕ್ಕೆ ನನ್ನನ್ನು ಆಯ್ಕೆ ಮಾಡಿದಾಗ, ಆ ಬಗ್ಗೆ ಪಕ್ಷದೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದುಕೊಳ್ಳುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೆ” ಎಂದು ಹೇಳಿಕೊಂಡಿದ್ದಾರೆ.
ಆದಾಗ್ಯೂ, ಕಾಂಗ್ರೆಸ್ ಮತ್ತು ತರೂರ್ ನಡುವಿನ ಭಿನ್ನಾಭಿಪ್ರಾಯ, ಆಕ್ಷೇಪಗಳು ಮುಂದುವರೆದಿವೆ. ಈ ಇಬ್ಬರ ನಡುವಿನ ಜಗಳದಲ್ಲಿ ಯಾವ ರೀತಿ ಲಾಭ ಪಡೆಯಬಹುದು ಎಂದು ಬಿಜೆಪಿ ನೋಡುತ್ತಿದೆ. ತರೂರ್ ಅವರನ್ನೇ ಬಳಸಿಕೊಂಡು, ಕಾಂಗ್ರೆಸ್‌ಗೆ ಪೆಟ್ಟು ಕೊಡಲು ಯತ್ನಿಸುತ್ತಿದೆ. ಅದರ ಭಾಗವಾಗಿಯೇ ಭಾರತದ ಸರ್ವಪಕ್ಷ ನಿಯೋಗಕ್ಕೆ ತರೂರ್ ಅವರನ್ನು ಆಯ್ಕೆ ಮಾಡಿ, ಕಾಂಗ್ರೆಸ್‌ಅನ್ನು ಛೇಡಿಸುವ ಕೆಲಸ ಮಾಡುತ್ತಿದೆ ಎಂಬ ಅಭಿಪ್ರಾಯಗಳಿವೆ.