“ಭಾರತದ ನಾವಿಕರಾದ ನಮ್ಮ ಪೂರ್ವಜರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಕಂಡುಹಿಡಿದರು, ಕೊಲಂಬಸ್ ಅಲ್ಲ” ಎಂದು ಮಧ್ಯಪ್ರದೇಶದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಮಂಗಳವಾರ ಹೇಳಿದ್ದಾರೆ.
ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ಭಾಗಿಯಾಗಿದ್ದ ಬರ್ಕತುಲ್ಲಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಮಧ್ಯಪ್ರದೇಶ ಶಿಕ್ಷಣ ಸಚಿವರು, “ಭಾರತದ ನಾವಿಕರೊಬ್ಬರು ಅಮೆರಿಕ ಕಂಡುಹಿಡಿದರು” ಎಂದು ಹೇಳಿದರು.
ಹಾಗೆಯೇ, “ಭಗವಾನ್ ರಾಮನ ಪ್ರತಿಮೆಗಳನ್ನು ಮಾಡಿದ ಭಾರತೀಯ ವಾಸ್ತುಶಿಲ್ಪಿ ಸಹಾಯದಿಂದ ಬೀಜಿಂಗ್ ನಗರವನ್ನು ವಿನ್ಯಾಸಗೊಳಿಸಲಾಗಿದೆ. ಋಗ್ವೇದವನ್ನು ಬರೆದವರು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ ಎಂದು ಮೊದಲು ಊಹಿಸಿದವರು” ಎಂದೂ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಮೂರು ದಿನಗಳ ಅಮೆರಿಕ ಪ್ರವಾಸ
“ಇತಿಹಾಸಕಾರರು ವ್ಯವಸ್ಥಿತವಾಗಿ ಭಾರತದ ಶಕ್ತಿಯನ್ನು ದುರ್ಬಲಗೊಳಿಸಿದ್ದಾರೆ. ಸುಳ್ಳು ಸಂಗತಿಗಳಿಂದಾಗಿ, ಭಾರತದ ನಕಾರಾತ್ಮಕ ಚಿತ್ರಣವನ್ನು ಜಗತ್ತಿಗೆ ಪ್ರಸ್ತುತಪಡಿಸಲಾಗಿದೆ” ಎಂದು ಇಂದರ್ ಸಿಂಗ್ ಪರ್ಮಾರ್ ಆರೋಪಿಸಿದರು.
“ನಮ್ಮ ಪೂರ್ವಜರು ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯದ ಪ್ರತಿಯೊಂದು ಅಂಶದಲ್ಲೂ ಮುಂದುವರಿದಿದ್ದವರು. ನಾವು ಯಾವುದೇ ಕೀಳರಿಮೆಯನ್ನು ಹೊಂದಿರಬಾರದು. ಉನ್ನತ ವಿಚಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮುನ್ನಡೆಯಲು ಶ್ರಮಿಸಬೇಕು” ಎಂದು ತಿಳಿಸಿದರು.
“ಕೊಲಂಬಸ್ ಅಮೆರಿಕವನ್ನು ಕಂಡುಹಿಡಿದನು ಎಂಬುದು ಭಾರತದಲ್ಲಿ ಅನಗತ್ಯವಾಗಿ ಕಲಿಸಲ್ಪಟ್ಟ ಸುಳ್ಳಾಗಿದೆ. ಇದು ಭಾರತೀಯ ವಿದ್ಯಾರ್ಥಿಗಳಿಗೆ ಅಪ್ರಸ್ತುತವಾಗಿತ್ತು. ಇದನ್ನು ಕಲಿಸಲು ಹೋದರೆ, ಕೊಲಂಬಸ್ ನಂತರ ಬಂದವರು ಮಾಡಿದ ದೌರ್ಜನ್ಯ, ಸ್ಥಳೀಯ ಸಮಾಜವನ್ನು ನಾಶ ಮಾಡಿದ ರೀತಿ, ಮತಾಂತರ ಮಾಡಿದ ಬಗ್ಗೆಯೂ ನಾವು ಕಲಿಸಬೇಕಾಗಿತ್ತು” ಎಂದು ಅಭಿಪ್ರಾಯಿಸಿದರು.
“ಒಬ್ಬ ಭಾರತೀಯ ನಾವಿಕ 8ನೇ ಶತಮಾನದಲ್ಲಿ ಅಮೆರಿಕಕ್ಕೆ ಹೋಗಿ ಸ್ಯಾನ್ ಡಿಯಾಗೋದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದನು. ಅವುಗಳನ್ನು ಇನ್ನೂ ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ದಾಖಲಿಸಲಾಗಿದೆ, ಗ್ರಂಥಾಲಯಗಳಲ್ಲಿ ಸಂರಕ್ಷಿಸಲಾಗಿದೆ” ಎಂದು ಪರ್ಮಾರ್ ಹೇಳಿದ್ದಾರೆ.
America is discovered by our ancestors, not by Christopher Columbus
— Veena Jain (@DrJain21) September 11, 2024
~~ Higher Education Minister, Madhya Pradesh Govt.
Why all this Extra-Ordinary Genius are in BJP only 🤔
pic.twitter.com/Yd0gayGIyw
