ತೀವ್ರ ಕೆಲಸದ ಒತ್ತಡದಿಂದ ಸಾವನ್ನಪ್ಪಿದ 26 ವರ್ಷದ ‘ಅರ್ನ್ಸ್ಟ್ ಅಂಡ್ ಯಂಗ್’ (EY) ಕಂಪನಿಯ ಉದ್ಯೋಗಿ ಅನ್ನಾ ಸೆಬಾಸ್ಟಿಯನ್ ಪೆರೈಲ್ ಅವರ ಪೋಷಕರೊಂದಿಗೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿಡಿಯೋ ಕರೆಯಲ್ಲಿ ಮಾತುಕತೆ ನಡೆಸಿದ್ದಾರೆ.
“ನಾನು ನೋವಿನಲ್ಲಿರುವ ಅನ್ನಾ ಸೆಬಾಸ್ಟಿಯನ್ ಅವರ ಪೋಷಕರೊಂದಿಗೆ ಮಾತನಾಡಿದ್ದೇನೆ. ದೇಶದ ಭವಿಷ್ಯವಾಗಿದ್ದ, ಮಹತ್ವಾಕಾಂಕ್ಷೆಯ ಯುವ ಉದ್ಯೋಗಿಗಳ ಜೀವನವು ಇಂತಹ ಕಲಸದ ಒತ್ತಡದ ಪರಿಸ್ಥಿತಿಗಳಿಂದ ದುರಂತವಾಗಿ ಮೊಟಕುಗೊಂಡಿದೆ” ಎಂದು ರಾಹುಲ್ ಗಾಂಧಿ ‘ಎಕ್ಸ್‘ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಅನ್ನಾ ಅವರ ತಾಯಿ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ತೋರಿಸಿದ್ದಾರೆ. ವೃತ್ತಿಪರರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಗಳನ್ನು ಕಳೆದುಕೊಂಡಿದ್ದರ ಹೊರತಾಗಿಯೂ ಅವರು ಇತರ ಉದ್ಯೋಗಿಗಳ ಪರಿಸ್ಥಿತಿ ಸುಧಾರಿಸಬೇಕೆಂದು ಹೇಳಿದ್ದಾರೆ” ಎಂದು ರಾಹುಲ್ ಶ್ಲಾಘಿಸಿದ್ದಾರೆ.
“ತನಗೆ ಹೆಚ್ಚು ಕೆಲಸದ ಒತ್ತಡವಿರುವುದಾಗಿ ಅನ್ನಾ ಯಾವಾಗಲೂ ಹೇಳುತ್ತಿದ್ದಳು. ಆಕೆ ನಿರಂತರವಾಗಿ ಕೆಲಸ ಮಾಡಬೇಕಿತ್ತು. ಶನಿವಾರ, ಭಾನುವಾರವೂ ಕೆಲಸ ಮಾಡುತ್ತಿದ್ದಳು. ಹೊಸಬರು, ಯುವ ಉದ್ಯೋಗಿಗಳಿಂದ ಹೆಚ್ಚು ದುಡಿಸಿಕೊಳ್ಳಲಾಗುತ್ತಿದೆ. ಈ ಉದ್ಯೋಗಿಗಳು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ಹರಿಸಲು ಕೂಡ ಸಮಯ ದೊರೆಯುತ್ತಿಲ್ಲ” ಎಂದು ಅನ್ನಾ ಅವರ ತಾಯಿ ರಾಹುಲ್ ಬಳಿ ವಿವರಿಸಿದ್ದಾರೆ.
“ಅನ್ನಾ ಪ್ರತಿದಿನ ಕರೆ ಮಾಡುತ್ತಿದ್ದಳು. ‘ಅಮ್ಮಾ, ನಾನು ಮಾತನಾಡಲು ಸಾಧ್ಯವಿಲ್ಲ, ನಾನು ಸುಸ್ತಾಗಿದ್ದೇನೆ, ನಾನು ಮಲಗುತ್ತೇನೆ’ ಎನ್ನುತ್ತಿದ್ದಳು. ನಮ್ಮ ಮಕ್ಕಳಿಗೆ ಕೆಲಸದ ಜಾಗದಲ್ಲಿ ಚಿತ್ರಹಿಂಸೆ ನೀಡಲಾಗುತ್ತಿದೆ. ಗುಲಾಮರಂತೆ ಕೆಲಸ ಮಾಡಿಸಲಾಗುತ್ತಿದೆ” ಎಂದು ಅನ್ನಾ ಅವರ ತಾಯಿ ಹೇಳಿದ್ದಾರೆ.
“ರಾಹುಲ್ ಜೀ, ನಾನು ಹೇಳಬೇಕಾಗಿರುವುದು ಭಾರತದಲ್ಲಿ ಮಾತ್ರ ಮಕ್ಕಳು ಇಂತಹ ಚಿತ್ರಹಿಂಸೆಗೆ ಒಳಗಾಗುತ್ತಿದ್ದಾರೆ. ಬೇರೆ ದೇಶಗಳಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಈ ರೀತಿ ಕೆಲಸ ಮಾಡಲು ಕೇಳುತ್ತಾರೆಯೇ? ಅವರು ನಮಗೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಾರೆ. ಆದರೆ ನಮ್ಮ ಮಕ್ಕಳು ಈಗಲೂ ಜೀತದಾಳುಗಳಂತೆ ದುಡಿಯುತ್ತಿದ್ದಾರೆ” ಎಂದು ಅನ್ನಾ ಅವರ ತಾಯಿ ಹೇಳಿರುವುದು ವಿಡಿಯೋದಲ್ಲಿದೆ.
“ಈ ವಿಷಯವನ್ನು ಸಂಸತ್ತಿನಲ್ಲಿ ನೀವು ಪ್ರಸ್ತಾಪಿಸುತ್ತಿರಾ” ಎಂದು ರಾಹುಲ್ ಅವರನ್ನು ಅವರು ಹೇಳಿದ್ದಾರೆ. ಅದಕ್ಕೆ, ರಾಹುಲ್ ಗಾಂಧಿ, “ಹೌದು” ಎಂದು ಪ್ರತಿಕ್ರಿಯಿಸಿದ್ದಾರೆ.
“ನಾವು ಸಂಪೂರ್ಣವಾಗಿ ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಮಾತುಗಳು ಸರಿಯಾಗಿವೆ. ಅವುಗಳನ್ನು ಮಾಡಲು ನಿಮ್ಮೊಂದಿಗೆ ನಾವಿದ್ದೇವೆ” ಎಂದು ಅನ್ನಾ ಪೋಷಕರಿಗೆ ರಾಹುಲ್ ಭರವಸೆ ನೀಡಿದ್ದಾರೆ.
‘ಅರ್ನ್ಸ್ಟ್ ಅಂಡ್ ಯಂಗ್’ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಅನ್ನಾ ಪೆರಾಯಿಲ್ ಅವರು ಕೆಲಸ-ಸಂಬಂಧಿತ ಒತ್ತಡದ ಕಾರಣದಿಂದ ಸಾವನ್ನಪ್ಪಿದ್ದಾರೆ. ಅವರ ಸಾವು ಕೆಲಸ ಮತ್ತು ಜೀವನದಲ್ಲಿನ ಸಮತೋಲನ ಮತ್ತು ಕಾರ್ಪೊರೇಟ್ ಹೊಣೆಗಾರಿಕೆಯ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಹುಟ್ಟುಹಾಕಿದೆ.
ಅನ್ನಾ ಅವರ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ಕೇಂದ್ರ ಕಾರ್ಮಿಕ ಸಚಿವಾಲಯವು ತನಿಖೆ ನಡೆಸುತ್ತಿದೆ.