ನಮ್ಮ ಮುಂದಿನ ಗುರಿ ದೇಶದಲ್ಲಿ ‘ಜಾತಿ ಗಣತಿ’ ಜಾರಿಯಾಗುವಂತೆ ಮಾಡುವುದು. ಜಾತಿ ಗಣತಿಯ ಆಧಾರದ ಮೇಲೆ ಮೀಸಲಾತಿಗೆ ಹಾಕಲಾಗಿರುವ 50%ನ ಮಿತಿಯನ್ನು ವಿಸ್ತರಿಸಬೇಕು ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ, ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, “ಬಿಜೆಪಿ ಮನುಸ್ಮೃತಿಯನ್ನು ಸಂವಿಧಾನಕ್ಕಿಂತ ಉನ್ನತ ಸ್ಥಾಯಿಯಲ್ಲಿ ಇರಿಸಿಕೊಂಡಿದೆ. ಮಹಾಭಾರತದಲ್ಲೂ ಜಾತಿ ಪದ್ಧತಿ ಇತ್ತು, ದ್ರೋಣಾಚಾರ್ಯ ಗುರು ದಕ್ಷಿಣೆಗಾಗಿ ಏಕಲವ್ಯ ಬೆರಳು ಕತ್ತರಿಸಿಕೊಡುವಂತೆ ಮಾಡಿದರು. ಈಗ ಕೇಂದ್ರ ಸರ್ಕಾರ ಕೂಡ ದೇಶದ ಯುವಜನರ ಹೆಬ್ಬೆರಳನ್ನು ಕತ್ತರಿಸುತ್ತಿದೆ” ಎಂದು ವಾಗ್ದಾಳಿ ನಡೆಸಿದರು.
“ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದಂತೆಯೇ, ನೀವು (ಸರ್ಕಾರ) ದೇಶದ ಯುವಕರ ಹೆಬ್ಬೆರಳನ್ನು ಕತ್ತರಿಸಿದ್ದೀರಿ. ಎಲ್ಲವನ್ನೂ ಅದಾನಿ ಹಾಗೂ ಇನ್ನಿತರ ಕೈಗಾರಿಕೋದ್ಯಮಿಗಳ ಕೈಯಲ್ಲಿ ಇಡುತ್ತಿದ್ದೀರಿ” ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರಲು.
ಸಂವಿಧಾನದ ವಿಚಾರವಾಗಿ ಮಾತನಾಡಿದ ರಾಹುಲ್, “ಸಾವರ್ಕರ್ ಅವರು ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದು ಏನೂ ಇಲ್ಲ ಎಂದಿದ್ದರು. ಸಾವರ್ಕರ್ ಅವರ ಆ ನಿಲುವಿಗೆ ಬಿಜೆಪಿಯೂ ಬದ್ಧವಾಗಿದೆಯೇ? ಆ ನಿಲುವಿಗೆ ಬದ್ದವಾಗಿರುವುದೇ ಆದಲ್ಲಿ, ನೀವು (ಬಿಜೆಪಿ) ಸಂವಿಧಾನವನ್ನು ರಕ್ಷಿಸುವ ಬಗ್ಗೆ ಸಂಸತ್ತಿನಲ್ಲಿ ಮಾತನಾಡುವಾಗ, ಸಾವರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿದ್ದೀರಿ. ಸಾವರ್ಕರ್ ಅವರ ಮಾನಹಾನಿ ಮಾಡುತ್ತಿದ್ದೀರಿ” ಎಂದು ಬಿಜೆಪಿಯನ್ನು ಗೇಲಿ ಮಾಡಿದರು.