ಒಡಿಶಾದ ಕರಾವಳಿಯಲ್ಲಿ ಸಂಯೋಜಿತ ಪರೀಕ್ಷಾ ಶ್ರೇಣಿಯ(ಐಟಿಆರ್) ಕ್ಷಿಪಣಿ ಉಡಾವಣೆ ಪರೀಕ್ಷೆಗಾಗಿ ಪರೀಕ್ಷಾ ಶ್ರೇಣಿಯ ಗ್ರಾಮಗಳಲ್ಲಿರುವ ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಮುಂಜಾಗೃತ ಕ್ರಮವಾಗಿ ರಕ್ಷಣಾ ಇಲಾಖೆಯ ಅಧಿಕಾರಿಗಳು ಬಾಲ್ಸೋರೆ ಜಿಲ್ಲೆಯ ಅಧಿಕಾರಿಗಳ ಸಹಾಯದಿಂದ ಮಹಿಳೆಯರು, ಮಕ್ಕಳು ಹಾಗೂ ಜಾನುವಾರುಗಳು ಸೇರಿದಂತೆ 3.5 ಕಿ.ಮೀ ಶ್ರೇಣಿಯಲ್ಲಿರುವ 10 ಗ್ರಾಮಗಳ 10,581 ಜನರನ್ನು ಐಟಿಆರ್ ಉಡಾವಣೆಗೊಳಿಸುವ ಸ್ಥಳದಿಂದ ದೂರದಲ್ಲಿರುವ ತಾತ್ಕಾಲಿಕ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಬರ್ದಾನ್ಪುರ್ನ 2725, ಜಯದೇವಕಾಸೇಬಾದಿಂದ 2725, ಭೀಮ್ಪುರ್ನಿಂದ 1823, ಕುಸುಮಲಿಯಿಂದ 1307 ಸೇರಿ ಹಲವು ಗ್ರಾಮಗಳ ಜನರನ್ನು ವಿವಿಧ ಸ್ಥಳಗಳಲ್ಲಿರುವ ಸುರಕ್ಷಿತ ತಾತ್ಕಾಲಿಕ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಪತ್ನಿ ಪಾಕಿಸ್ತಾನಿ, ದಾವೂದ್ ಬಂಗಲೆಯಲ್ಲಿ ವಾಸ ಎಂಬ ಆರೋಪಕ್ಕೆ ಧ್ರುವ್ ರಾಠಿ ತಕ್ಕ ಉತ್ತರ
“ಜನರು ಸುರಕ್ಷಿತ ಸ್ಥಳಗಳ ಆಶ್ರಯಗಳಲ್ಲಿ ಉಳಿದುಕೊಳ್ಳಲು ವಿಸ್ತಾರವಾದ ವ್ಯವಸ್ಥೆಗಳನ್ನು ನಾವು ಕೈಗೊಂಡಿದ್ದೇವೆ. ಮೂವರು ಪೊಲೀಸ್ ಅಧಿಕಾರಿಗಳ ಪ್ರತ್ಯೇಕ ತಂಡ ಸಾರ್ವಜನಿಕರ ರಕ್ಷಣೆಯ ಉಸ್ತುವಾರಿ ವಹಿಸಿಕೊಂಡಿದೆ. ವೈದ್ಯಕೀಯ ತಂಡ ಪಶು ವೈದ್ಯಕೀಯ ತಂಡ ಸೇರಿದಂತೆ ಹಲವು ತಂಡಗಳನ್ನು ಜನರ ಅಗತ್ಯ ಸೌಕರ್ಯ ನೀಡಿಕೆಗಾಗಿ ನಿಯೋಜಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಳ್ಳುವ ಜನರಿಗೆ ಪ್ರತಿಯೊಬ್ಬರಿಗೆ ಆಹಾರ ವೆಚ್ಚವೂ ಸೇರಿ 400 ರೂ. ನೀಡಲಾಗುತ್ತಿದೆ. ಜಾನುವಾರು ಹೊಂದಿರುವವರಿಗೆ ಹೆಚ್ಚುವರಿ 100 ರೂ. ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಡಿಆರ್ಡಿಒ ಅಭಿವೃದ್ಧಿಪಡಿಸಿರುವ ನೂತನ ಪರೀಕ್ಷಾ ಪದ್ಧತಿಯ ಪ್ರಯೋಗಾತ್ಮಕ ಪರೀಕ್ಷೆಗೆ ಎಲ್ಲ ರೀತಿಯ ವೇದಿಕೆ ಸಿದ್ಧವಾಗಿದೆ. ನಿರ್ಣಾಯಕ ಪರೀಕ್ಷೆಗಾಗಿ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಅಂದುಕೊಂಡಂತೆ ಎಲ್ಲ ಯೋಜನೆ, ಕಾರ್ಯಕ್ರಮಗಳು ನಡೆದರೆ ನಿಗದಿತ ವೇಳೆಯೊಳಗೆ ಕ್ಷಿಪಣಿಯನ್ನು ಹಾರಾಟ ಪರೀಕ್ಷೆಗೆ ಒಳಪಡಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.