ಸುಮಾರು ಹನ್ನೊಂದು ತಿಂಗಳ ಮಣಿಪುರ ಹಿಂಸಾಚಾರದ ಸಂದರ್ಭದಲ್ಲಿ 50,000 ಕ್ಕೂ ಹೆಚ್ಚು ಸ್ಥಳಾಂತರಗೊಂಡಿದ್ದು, ಕೆಲವರು ಚುನಾವಣೆಯನ್ನೇ ಧಿಕ್ಕರಿಸುತ್ತಿದ್ದಾರೆ. ಈ ನಡುವೆ ಚುನಾವಣಾ ಆಯೋಗವು ಹಿಂಸಾಚಾರ ಪೀಡಿತ ರಾಜ್ಯದಲ್ಲಿಯೇ ಲೋಕಸಭೆ ಚುನಾವಣೆಯನ್ನು ನಡೆಸುವ ಸವಾಲಿನ ಕಾರ್ಯಕ್ಕೆ ಸಜ್ಜಾಗಿದೆ.
ಮುಖ್ಯ ಚುನಾವಣಾಧಿಕಾರಿ, ಪ್ರದೀಪ್ ಕುಮಾರ್ ಝಾ ಅವರು, “24,500 ಕ್ಕೂ ಹೆಚ್ಚು ಸ್ಥಳಾಂತರಗೊಂಡ ಜನರನ್ನು ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರು ಎಂದು ಗುರುತಿಸಲಾಗಿದೆ. ಅವರು ಪರಿಹಾರ ಶಿಬಿರಗಳಿಂದ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುವಂತೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಸ್ಥಳಾಂತರಗೊಂಡ ಮತದಾರರಿಗೆ ʼಚುನಾವಣೆʼಗಳು ಅರ್ಥಹೀನ
“ಲೋಕಸಭಾ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ ಸುಮಾರು ಶೇಕಡ 50ರಷ್ಟು ಮತಗಟ್ಟೆಗಳನ್ನು ಸೂಕ್ಷ್ಮ, ದುರ್ಬಲ ಅಥವಾ ನಿರ್ಣಾಯಕ ಎಂದು ಗುರುತಿಸಲಾಗಿದೆ. ನಾವು ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು ಮತದಾನ ಮಾಡಲು ಅನುಕೂಲವಾಗುವಂತೆ 94 ವಿಶೇಷ ಮತಗಟ್ಟೆಗಳನ್ನು ಸಹ ಸ್ಥಾಪಿಸುತ್ತಿದ್ದೇವೆ” ಎಂದು ಪ್ರದೀಪ್ ಕುಮಾರ್ ಝಾ ಪಿಟಿಐಗೆ ಮಾಹಿತಿ ನೀಡಿದರು.
ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿಯಮಗಳ ಪ್ರಕಾರ, ಕುಗ್ರಾಮಗಳು, ಗ್ರಾಮಗಳು ಮತ್ತು ಬೆದರಿಕೆ ಇರುವ ವಿಭಾಗಗಳ ಮ್ಯಾಪಿಂಗ್ ಅನ್ನು ಚುನಾವಣೆಗೆ ಮುನ್ನ ನಡೆಸಲಾಗುತ್ತದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆಗೂ ಮುನ್ನ ಮಣಿಪುರಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ
“ಈ ಮತದಾರರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ನಾವು ಮತದಾರರ ಜಾಗೃತಿ ಚಟುವಟಿಕೆಗಳನ್ನು ಸಹ ಪ್ರಾರಂಭಿಸಿದ್ದೇವೆ. ತಮ್ಮ ಮನೆಯಲ್ಲೇ ಇರುವ ಸೌಕರ್ಯವನ್ನು ಕಳೆದುಕೊಂಡಿರುವ ನಿರಾಶ್ರಿತ ಜನರ ಹತಾಶೆಯ ಭಾವನೆಯನ್ನು ನಾವು ಗಮನದಲ್ಲಿಟ್ಟುಕೊಂಡು ತಯಾರಿಯನ್ನು ನಡೆಸುತ್ತೇವೆ” ಎಂದು ಪ್ರದೀಪ್ ಕುಮಾರ್ ಝಾ ಹೇಳಿದರು.
ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತಿ ಸಮುದಾಯದ ಬೇಡಿಕೆಯನ್ನು ವಿರೋಧಿಸಿ ‘ಬುಡಕಟ್ಟು ಐಕ್ಯತಾ ಮೆರವಣಿಗೆ’ ಆಯೋಜಿಸಿದ ಬಳಿಕ ಕಳೆದ ವರ್ಷ ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು, ರಾಜ್ಯದಲ್ಲಿ ಕನಿಷ್ಠ 219 ಜನರು ಸಾವನ್ನಪ್ಪಿದ್ದಾರೆ. 50,000 ಕ್ಕೂ ಜನರು ಸ್ಥಳಾಂತರಗೊಂಡಿದ್ದಾರೆ. ಜನರು ಪ್ರಸ್ತುತ ಐದು ಕಣಿವೆ ಜಿಲ್ಲೆಗಳು ಮತ್ತು ಮೂರು ಬೆಟ್ಟದ ಜಿಲ್ಲೆಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ತಂಗಿದ್ದಾರೆ. ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಮಣಿಪುರ ಲೋಕಸಭಾ ಚುನಾವಣೆ ನಡೆಯಲಿದೆ.