ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಪಾಪ್‌ಕಾರ್ನ್‌ಗೂ ಶೇಕಡ 18 ಜಿಎಎಸ್‌ಟಿ ವಿಧಿಸಲಾಗುತ್ತದೆ ಎಂದು ಘೋಷಿಸಿದ್ದಾರೆ. ಈ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ. ಈ ನಡುವೆ, ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟಗಾರರು ಕೂಡ ಜಿಎಸ್‌ಟಿ ನೋಟಿಸ್‌ಗಳನ್ನು ಪಡೆಯುತ್ತಿದ್ದಾರೆ. ಯುಪಿಐ ಆಧಾರಿತ ರೇಜಾರ್‌ಪೇ/ಫೋನ್‌ಪೇ ವಹಿವಾಟಿನ ಆಧಾರದ ಮೇಲೆ ಅವರಿಗೆ ನೋಟಿಸ್ ನೀಡಲಾಗಿದ್ದು, ಜಿಎಸ್‌ಟಿ ಪಾವತಿಸಲು ಸೂಚಿಸಲಾಗಿದೆ ಎಂದು ವರದಿಯಾಗುತ್ತಿದೆ.
ಪಾನಿಪುರಿ ಮಾರಾಟಗಾರರಿಗೂ ಜಿಎಸ್‌ಟಿ ನೋಟಿಸ್ ಬಂದಿರುವುದು ನಾನಾ ಚರ್ಚೆ, ಆಕ್ರೋಶ, ವಿರೋಧಗಳಿಗೆ ಕಾರಣವಾಗಿದೆ. ಜೊತೆಗೆ, ಯುಪಿಐ ಅಪ್ಲಿಕೇಶನ್‌ಗಳಲ್ಲಿ ಪಾವತಿಗಳನ್ನು ಪಡೆಯುವ ಎಲ್ಲ ಸಣ್ಣ ವ್ಯಾಪಾರಿಗಳು ಜಿಎಸ್‌ಟಿ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕಾದ, ಜಿಎಸ್‌ಟಿ ಪಾವತಿಸಬೇಕಾದ ಅನಿವಾರ್ಯ ಎದುರಾಗಿದೆ. ಹೀಗಾಗಿ, ಪಾನಿಪುರಿ ಮಾರಾಟಗಾರರೂ ಕೂಡ ತಾವು ಮಾರುವ ಪಾನಿಪುರಿ ಮೇಲೆ ಗ್ರಾಹಕರಿಗೆ ಜಿಎಸ್‌ಟಿ ವಿಧಿಸಬೇಕಾಗುತ್ತದೆ ಎಂಬ ಚರ್ಚೆಗಳೂ ನಡೆಯುತ್ತಿವೆ.
ಇದನ್ನು ಓದಿದ್ದೀರಾ? ಪಾಪ್‌ಕಾರ್ನ್ ಮೇಲೆ ಮೂರು ರೀತಿಯ ಜಿಎಸ್‌ಟಿ; ಟ್ರೋಲ್ ಆದ ನಿರ್ಮಲಾ ಸೀತಾರಾಮನ್
ಗಮನಾರ್ಹವಾಗಿ, ಹಲವಾರು ಉದ್ದಿಮೆಗಳು, ವ್ಯಾಪಾರ- ವಹಿವಾಟುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಜಿಎಸ್‌ಟಿ ಇಲಾಖೆ ಮುಂದಾಗಿದೆ. ಅದಕ್ಕಾಗಿ, 30 ಬಿಸಿನೆಸ್-ಟು-ಕನ್ಸ್ಯೂಮರ್ (ಬಿ 2 ಸಿ) ವಲಯಗಳನ್ನು ಗುರುತಿಸಿದೆ.
ಇವುಗಳಲ್ಲಿ ಬಾಡಿಗೆಗೆ ವಿವಾಹ ಉಡುಪುಗಳನ್ನು ಒದಗಿಸುವ ಅಂಗಡಿಗಳು, ಪಾದರಕ್ಷೆ ಮಾರಾಟ ಅಂಗಡಿಗಳು, ಸಲೂನ್‌ಗಳು, ವೈದ್ಯಕೀಯ ಅಗತ್ಯವಲ್ಲದ ಸೌಂದರ್ಯ ಚಿಕಿತ್ಸೆಗಳು, ಐಸ್ ಕ್ರೀಮ್ ಪಾರ್ಲರ್ಗಳು, ಜವಳಿ ಮಾರಾಟಗಾರರು, ತಂಬಾಕು ವ್ಯಾಪಾರಿಗಳು, ಬ್ಯಾಟರಿ ವ್ಯಾಪಾರಿಗಳು, ಮೊಬೈಲ್ ಫೋನ್ ಮತ್ತು ಪರಿಕರಗಳ ಮಾರಾಟಗಾರರು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು, ಕೃತಕ ಹೂವು ಮತ್ತು ಅಲಂಕಾರ ಮಾರಾಟಗಾರರು ಮತ್ತು ಕೋಚಿಂಗ್ ಸೆಂಟರ್‌ಗಳೂ ಸೇರಿವೆ.
Pani puri wala makes 40L per year and gets an income tax notice 🤑🤑 pic.twitter.com/yotdWohZG6
— Jagdish Chaturvedi (@DrJagdishChatur) January 2, 2025
ಇತ್ತೀಚೆಗೆ ಪಾಪ್‌ಕಾರ್ನ್ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಡವರು ಜೀವನ ನಡೆಸುವುದೇ ಕಷ್ಟವಾಗಬಹುದು. ನೀರು ಕುಡಿದರೆ ಶೇ.5 ಜಿಎಸ್‌ಟಿ, ಊಟ ಮಾಡಿದರೆ ಶೇ.10 ಜಿಎಸ್‌ಟಿ, ಇದನ್ನೆಲ್ಲ ಅರಗಿಸಿಕೊಂಡರೆ ಶೇ. 20 ಜಿಎಸ್‌ಟಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಇದನ್ನು ಓದಿದ್ದೀರಾ? ಜೀವ ಹಿಂಡುವ ಜಿಎಸ್‌ಟಿ : ಬಡವರ ಹಣ ಕಿತ್ತು ಶ್ರೀಮಂತರಿಗೆ ನೀಡುತ್ತಿರುವ ನಿರ್ಮಲಾ ಸೀತಾರಾಮನ್
ಸಾಮಾನ್ಯ ಜನರು ಉಪಯೋಗಿಸುವ ಪಾಪ್‌ಕಾರ್ನ್‌ಗೆ ಶೇ.18 ಜಿಎಸ್‌ಟಿ ಹೇರಲಾಗಿದೆ. ಶ್ರೀಮಂತರು ಖರೀದಿಸುವ ಕಾರುಗಳು, ವಸ್ತುಗಳು, ಮುಂತಾದವುಗಳ ಮೇಲೆ ಕಡಿಮೆ ತೆರಿಗೆಯನ್ನು ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಸಾಮಾನ್ಯರಿಗೆ ಸರಳ ಹಾಗೂ ಸುಲಭದ ತೆರಿಗೆ ಅಗತ್ಯ ಹೊರತು, ಹೆಚ್ಚಿನ ಸುಲಿಗೆ ಮಾಡುವುದಲ್ಲ. ಒಂದೇ ಉತ್ಪನ್ನಕ್ಕೆ ಮೂರು ರೀತಿಯ ತೆರಿಗೆ ನಿಜಕ್ಕೂ ಹಗಲು ದರೋಡೆಯಾಗಿದೆ ಎಂದು ಆಕ್ರೋಶಗೊಂಡಿದ್ದಾರೆ.
ನಗರ ಪ್ರದೇಶಗಳಲ್ಲಿ 15, 20 ಸಾವಿರ ರೂ.ಗಳು ಸಂಬಳ ಪಡೆಯುವ ಮಧ್ಯಮ ವರ್ಗದವರು, ದಿನಕ್ಕೆ ನೂರು, ಇನ್ನೂರು ರೂ.ಗಳು ದುಡಿಯುವ ಬಡ ವರ್ಗದವರು ಅಪರೂಪಕ್ಕೆ ಹೊರಗಡೆ ಹೋದಾಗ ತಿನ್ನುವುದೇ ಕೈಗೆಟಕುವ ದರದಲ್ಲಿ ಸಿಗುವ ಪಾನಿಪುರಿ, ಪಾಪ್ ಕಾರ್ನ್‌ಗಳನ್ನು. ಅದರ ಮೇಲೂ ಕೇಂದ್ರ ಸರ್ಕಾರ ತೆರಿಗೆ ವಿಧಿಸಿ, ಬಡವರ ಬಾಯಿಯಿಂದ ಅದನ್ನೂ ಕಿತ್ತುಕೊಳ್ಳುತ್ತಿದೆ. ಸೋಪು, ತರಕಾರಿ, ಆಹಾರ ಪದಾರ್ಥಗಳ ಮೇಲೆ ಸರ್ಕಾರ ತೆರಿಗೆಯ ಸವಾರಿ ಮಾಡುತ್ತಿದೆ. ಹೀಗೆ ಮುಂದುವರೆದರೆ, ಹಿಂದುಳಿದವರು, ಬಡವರು ಉಪವಾಸವಿದ್ದು, ಸಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
