ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಭಿನ್ನಾಭಿಪ್ರಾಯ ಮೂಡಿಸಿರುವ, ತೀವ್ರ ವಿವಾದಕ್ಕೆ ಗ್ರಾಸವಾಗಿರುವ ವಕ್ಫ್ ಮಸೂದೆಯ ಕರಡು ಶಾಸನಕ್ಕೆ ವಕ್ಫ್ ತಿದ್ದುಪಡಿ ಮಸೂದೆಯ ಸಂಸದೀಯ ಸಮಿತಿಯ ಸದಸ್ಯರು 572 ತಿದ್ದುಪಡಿಗಳನ್ನು ಸೂಚಿಸಿದ್ದಾರೆ.
ಸಮಿತಿಯ ವಿಚಾರಣೆ ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ಬಿಜೆಪಿ ನಾಯಕಿ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿಯು ಭಾನುವಾರ ತಡರಾತ್ರಿ ತಿದ್ದುಪಡಿಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇದನ್ನು ಓದಿದ್ದೀರಾ? ‘ಸಾಚಾರ್ ಸಮಿತಿ’ಯ ಶಿಫಾರಸುಗಳನ್ನು ‘ವಕ್ಫ್ ಮಸೂದೆ’ ಒಳಗೊಂಡಿಲ್ಲ- ರೆಹಮಾನ್ ಖಾನ್
ಸಮಿತಿಯು ಸೋಮವಾರ ನಡೆಯುವ ತನ್ನ ಸಭೆಯಲ್ಲಿ ಷರತ್ತು-ವಾರು ತಿದ್ದುಪಡಿಗಳನ್ನು ಚರ್ಚಿಸಲಿದೆ. ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರು ಮಸೂದೆಗೆ ತಿದ್ದುಪಡಿಗಳನ್ನು ಸಲ್ಲಿಸಿದ್ದಾರೆ. ಆದರೆ ತಿದ್ದುಪಡಿಗಳನ್ನು ಸಲ್ಲಿಸಿದ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯ ಯಾವುದೇ ಮಿತ್ರಪಕ್ಷಗಳು ಇಲ್ಲ.
ಆಗಸ್ಟ್ 8ರಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಪರಿಚಯಿಸಿದರು. ಆದರೆ ಈ ಮಸೂದೆಯು ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೇಂದ್ರ ಸರ್ಕಾರ ಮಾಡುತ್ತಿರುವ ಹುನ್ನಾರ ಎಂದು ವಿಪಕ್ಷಗಳು ಆರೋಪಿಸಿದೆ. ವಕ್ಫ್ ಹೆಸರಿನಲ್ಲಿ ಕರ್ನಾಟಕದಲ್ಲಿ ರೈತರ ಭೂಮಿಯನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂಬ ಆರೋಪಗಳನ್ನು ವಿಪಕ್ಷ ಬಿಜೆಪಿ ಮಾಡಿತ್ತು. ಆದರೆ ವಕ್ಫ್ ಮಸೂದೆ ಮೂಲಕ ಮುಸ್ಲಿಮರ ಹಕ್ಕನ್ನು ಮೋದಿ ಸರ್ಕಾರ ಕಸಿದುಕೊಳ್ಳುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದೆ.
