ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಬಹುಸಂಖ್ಯಾತರ ಇಚ್ಛೆಯಂತೆ ದೇಶ ಮತ್ತು ಕಾನೂನು ನಡೆಯುತ್ತಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಅವರ ಹೇಳಿಕೆ ತೀವ್ರ ವಿರೋಧಕ್ಕೆ ಗುರಿಯಾಗಿದ್ದು, ಯಾದವ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್, “ರಾಜಕೀಯ ಮತ್ತು ಧಾರ್ಮಿಕ ಪೂರ್ವಗ್ರಹ ಇರುವವರನ್ನು ನ್ಯಾಯಾಧೀಶರನ್ನಾಗಿ ಮಾಡಬಾರದು” ಎಂದು ಹೇಳಿದ್ದಾರೆ.
“ನ್ಯಾಯಾಧೀಶರಾದವರು ಸಾರ್ವಜನಿಕ ಸಭೆಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು. ಯಾದವ್ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ಕಾನೂನು-ನಿಮಯಗಳನ್ನು ನ್ಯಾಯಾಧೀಶರು ಚೆನ್ನಾಗಿಯೇ ತಿಳಿದಿರುತ್ತಾರೆ. ರಾಜಕೀಯ ಮತ್ತು ಧಾರ್ಮಿಕ ಪೂರ್ವಗ್ರಹಗಳನ್ನು ಹೊಂದಿರುವ ವ್ಯಕ್ತಿಗಳನ್ನು ನ್ಯಾಯಾಧೀಶರನ್ನಾಗಿ ನೇಮಿಸಬಾರದು” ಎಂದು ಪಟ್ನಾಯಕ್ ಅವರು ‘ಟಿಎನ್‌ಐಇ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ನ್ಯಾಯಮೂರ್ತಿ ಯಾದವ್ ಅವರು ಸಂವಿಧಾನವನ್ನು ಎತ್ತಿ ಹಿಡಿಯುತ್ತೇವೆಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಈಗ ಧಾರ್ಮಿಕ ಸಮುದಾಯದ ವಿರುದ್ಧ ಮಾತನಾಡಿ, ತಮ್ಮ ಪ್ರಮಾಣವನ್ನು ಉಲ್ಲಂಘಿಸಿದ್ದಾರೆ. ಅವರು ತಾವೊಬ್ಬ ನ್ಯಾಯಾಧೀಶ ಎಂಬುದನ್ನು ಮರೆತಿದ್ದಾರೆ. ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಿರ್ಣಯದ ಆಧಾರದ ಮೇಲೆ ಅಧ್ಯಕ್ಷರ ಆದೇಶದ ಮೂಲಕ ಮಾತ್ರ ನ್ಯಾಯಾಧೀಶರನ್ನು ತೆಗೆದುಹಾಕಲು ಸಂವಿಧಾನದಲ್ಲಿ ಅವಕಾಶವಿದೆ. ಈ ಪ್ರಕ್ರಿಯೆ ಆರಂಭಿಸಲು ಲೋಕಸಭೆಯಲ್ಲಿ ಕನಿಷ್ಠ 100 ಮಂದಿ ಸಂಸದರು ಸಹಿ ಹಾಕಿದ ಮನವಿಯನ್ನು ಸ್ಪೀಕರ್‌ಗೆ ಸಲ್ಲಿಸಬೇಕು ಅಥವಾ ರಾಜ್ಯಸಭೆಯಲ್ಲಿನ 50 ಸದಸ್ಯರು ಸಹಿ ಹಾಕಿ ಸಭಾಪತಿಗೆ ಮನವಿ ಸಲ್ಲಿಸಬಹುದು” ಎಂದು ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: 1991ರ ಕಾಯ್ದೆ ವಿಚಾರಣೆ ವೇಳೆ ‘ಹಿಂದುತ್ವ ನ್ಯಾಯಶಾಸ್ತ್ರ’ ತಿರಸ್ಕರಿಸುವರೇ ಸಿಜೆಐ ಖನ್ನಾ?
“ನ್ಯಾಯಾಧೀಶರು ನ್ಯಾಯಾಲಯಗಳಲ್ಲಿ ಮಾತ್ರವೇ ಆದೇಶ ನೀಡಬೇಕು. ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದವರು ನ್ಯಾಯಕ್ಕಾಗಿ ನ್ಯಾಯಾಲಯಗಳತ್ತ ನೋಡುತ್ತಿರುತ್ತಾರೆ. ನ್ಯಾಯಮೂರ್ತಿ ಯಾದವ್ ಅವರ ಇಂತಹ ವಿವಾದಾತ್ಮಕ ಹೇಳಿಕೆಗಳು ಜನರು ಇನ್ನೂ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಬಹುದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಹೇಳಿದ್ದಾರೆ.