ಲಿಂಗ ತಾರತಮ್ಯದ ವಿರುದ್ಧ ಹೋರಾಟಗಳು, ಕಾನೂನುಗಳು, ಜಾಗೃತಿ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದರೂ ಗಂಡು ಮೇಲು, ಹೆಣ್ಣು ಕೀಳೆಂಬ ಧೋರಣೆ ಇನ್ನೂ ಸಮಾಜದಲ್ಲಿ ಉಳಿದಿದೆ. ಪುರುಷಾಧಿಪತ್ಯ ತುಂಬಿ ತುಳುಕುತ್ತಿರುವ ಸಾಮಾಜದಲ್ಲಿ ಗಂಡು ಮಗು ಬೇಕೆಂಬ ಧೋರಣೆ ಪೋಷಕರಲ್ಲಿ ಹೆಚ್ಚುತ್ತಲೇ ಇದೆ. ಪುರುಷ ಅಹಂಕಾರದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿ ವಿಕೃತಿ ಮೆರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ನಾಕಾ ದುಶ್ಕೃತ್ಯ ನಡೆದಿದೆ. ಕುಂಡ್ಲಿಕ್ ಉತ್ತಮ್ ಕಾಳೆ ಎಂಬಾತ ತನ್ನ ಪತ್ನಿ ಮೈನಾ ಅವರನ್ನು ಜೀವಂತವಾಗಿ ಸುಟ್ಟು ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಳೆ ಮತ್ತು ಮೈನಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಕಾಳೆ ಮತ್ತು ಆತನ ಪೋಷಕರು ಗಂಡು ಮಗು ಆಗಲೇಬೇಕೆಂಬ ಹಠಕ್ಕೆ ಬಿದ್ದಿದ್ದರು. ಇತ್ತೀಚೆಗೆ, ಮೈನಾ ಅವರಿಗೆ 3ನೇ ಹೆರಿಗೆ ಆಗಿದ್ದು, ಹೆಣ್ಣು ಮಗು ಜನಿಸಿತ್ತು. ಹೆಣ್ಣು ಮಗು ಹುಟ್ಟಿದ್ದಕ್ಕಾಗಿ ಮೈನಾ ಜೊತೆ ಕಾಳೆ ಪದೇ-ಪದೇ ಜಗಳವಾಡುತ್ತಿದ್ದ ಎಂದು ವರದಿಯಾಗಿದೆ.
ಇತ್ತೀಚೆಗೆ, ಮತ್ತೆ ಮಗು ವಿಚಾರಕ್ಕೆ ಜಗಳವಾಗಿದ್ದು, ಮೈನಾ ಅವರ ಮೇಲೆ ಕಾಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೂಡಲೇ ನೆರೆಹೊರೆಯವರು ಧಾವಿಸಿ, ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ, ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯ ಕುರಿತು ಗಂಗಾಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕಾಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ನೆನಪಿನಲ್ಲಿಡಿ: ಮಹಿಳೆಯರಲ್ಲಿ ‘X’ ಕ್ರೋಮೋಸೋಮ್ ಮಾತ್ರವೇ ಇರುತ್ತದೆ. ಪುರುಷನಲ್ಲಿ ‘X’ ಮತ್ತು ‘Y’ ಕ್ರೋಮೋಸೋಮ್ ಎರಡೂ ಇರತ್ತವೆ. ಲೈಂಗಿಕತೆಯ ಸಮಯದಲ್ಲಿ ಮಹಿಳೆಯಿಂದ ‘X’ ಕ್ರೋಮೋಸೋಮ್ ಬಿಡುಗಡೆಯಾಗುತ್ತದೆ. ಪುರುಷನಿಂದ ‘X’ ಮತ್ತು ‘Y’ ಕ್ರೋಮೋಸೋಮ್ಗಳು ಬಿಡುಗಡೆಯಾಗುತ್ತದೆ. ಈ ವೇಳೆ, ಮಹಿಳೆಯ ‘X’ ಕ್ರೋಮೋಸೋಮ್ ಜೊತೆಗೆ, ಪುರುಷನಲ್ಲಿನ ‘X’ ಕ್ರೋಮೋಸೋಮ್ ಸೇರಿದರೆ ‘XX’ ಜೀನೋಟೈಪ್ನ ರಚನೆಯಾಗಿ ಹೆಣ್ಣು ಮಗು ಜನಿಸುತ್ತದೆ. ಮಹಿಳೆಯ ‘X’ ಕ್ರೋಮೋಸೋಮ್ ಜೊತೆಗೆ, ಪುರುಷನಲ್ಲಿನ ‘Y’ ಕ್ರೋಮೋಸೋಮ್ ಸೇರಿದರೆ ‘XY’ ಜೀನೋಟೈಪ್ ರಚನೆಯಾಗಿ ಗಂಡು ಮಗು ಜನಿಸುತ್ತದೆ. ಹೀಗಾಗಿ, ಹೆಣ್ಣು ಅಥವಾ ಗಂಡು ಮಗು ಹುಟ್ಟುವುದರಲ್ಲಿ ಪುರುಷನ ಪಾತ್ರವಿದೆಯೇ ಹೊರತು, ಮಹಿಳೆಯದ್ದಲ್ಲ. ತಾವು ಇಚ್ಚಿಸಿದ ಮಗು ಜನಿಸದೇ ಇರುವುದಕ್ಕೆ ಪುರುಷನೇ ಕಾರಣ.
ನಮ್ಮ ನ್ಯಾಯಾಂಗ ಎಲ್ಲವನ್ನೂ ಸುಲಭಗೊಳಿಸಿದೆ.