ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ) 28 ವರ್ಷದ ಪಿಎಚ್‌ಡಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷ ಕಾನ್ಪುರ ಐಐಟಿಯಲ್ಲಿ ನಡೆದ ನಾಲ್ಕನೇ ಪ್ರಕರಣ ಇದಾಗಿದೆ. ವಿದ್ಯಾರ್ಥಿನಿಯ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಕಾನ್ಪುರದ ಸನಿಗವಾನ್‌ನ ನಿವಾಸಿ ಪ್ರಗತಿ ಖರ್ಯ ಎಂದು ಗುರುತಿಸಲಾಗಿದೆ. ಅವರು ಐಐಟಿಯಲ್ಲಿ ಭೂ ವಿಜ್ಞಾನದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದರು. ಅವರು ತಾವು ತಂಗಿದ್ದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
“ಅವರ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಫೋರೆನ್ಸಿಕ್ ತಂಡವು ಕ್ಯಾಂಪಸ್‌ನಲ್ಲಿ ತನಿಖೆ ನಡೆಸುತ್ತಿದೆ. ಆಕೆಯ ಸಾವಿನಿಂದ ಯುವ ಸಂಶೋಧಕರನ್ನು ಸಂಸ್ಥೆಯು ಕೆಳದುಕೊಂಡಿದೆ. ಅವರ ಸಾವಿಗೆ ಸಂಸ್ಥೆಯು ಸಂತಾಪ ಸೂಚಿಸುತ್ತದೆ. ಅವರನ್ನು ಕಳೆದುಕೊಂಡ ಕುಟುಂಬ ಹಾಗೂ ಸ್ನೇಹಿತರಿಗಾಗಿ ನಾವು ಪ್ರಾರ್ಥಿಸುತ್ತೇವೆ” ಎಂದು ಐಐಟಿ ಹೇಳಿದೆ.
ಕಲ್ಯಾಣಪುರ ಠಾಣೆಯ ಸಹಾಯಕ ಸಿಪಿ ಅಭಿಷೇಕ್ ಪಾಂಡೆ, “ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ಅರಿಯಲು ಪೊಲೀಸರು ಆಕೆಯ ಮೊಬೈಲ್ ಫೋನ್ಅನ್ನು ವಶಕ್ಕೆ ಪಡೆದಿದ್ದಾರೆ. ಹಾಸ್ಟೆಲ್ ರೂಮ್‌ಅನ್ನು ಸೀಜ್ ಮಾಡಿದ್ದಾರೆ. ಶೀಘ್ರದಲ್ಲೇ ಸಾವಿನ ಕಾರಣಗಳನ್ನು ಪತ್ತೆ ಮಾಡಲಾಗುವುದು” ಎಂದು ಹೇಳಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಇದೇ ವರ್ಷದ ಜನವರಿ 18 ರಂದು, ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ 29 ವರ್ಷದ ಪಿಎಚ್‌ಡಿ ವಿದ್ಯಾರ್ಥಿನಿ ಪ್ರಿಯಾಂಕಾ ಜೈಸ್ವಾಲ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ, ಜನವರಿ 11 ರಂದು, M.Tech ಎರಡನೇ ವರ್ಷದ ವಿದ್ಯಾರ್ಥಿ ವಿಕಾಸ್ ಕುಮಾರ್ ಮೀನಾ (31) ತನ್ನ ಕೋರ್ಸ್‌ನಲ್ಲಿ ಮುಂದುವರಿಯುವುದನ್ನು ‘ತಾತ್ಕಾಲಿಕವಾಗಿ’ ನಿರ್ಬಂಧಿಸಿದ್ದ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದಕ್ಕೂ ಮುನ್ನ, 2023ರ ಡಿಸೆಂಬರ್ 19ರಂದು ಪೋಸ್ಟ್‌ಡಾಕ್ಟರಲ್ ಸಂಶೋಧಕಿ ಪಲ್ಲವಿ ಚಿಲ್ಕಾ (34) ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.