ಎರಡು ದಿನಗಳ ಹಿಂದೆ ಕುವೈತ್ ಬೆಂಕಿ ದುರಂತದಲ್ಲಿ ಸಾವಿಗೀಡಾದ 45 ಮಂದಿಯ ಮೃತದೇಹಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನ ಇಂದು ಭಾರತಕ್ಕೆ ಕರೆತರಲಿದೆ. ವಿಮಾನವು ಬೆಳಿಗ್ಗೆ 11 ಗಂಟೆಗೆ ಕೇರಳದ ಕೊಚ್ಚಿಗೆ ಆಗಮಿಸಲಿದ್ದು, ನಂತರ ದೆಹಲಿಗೆ ತೆರಳಲಿದೆ.
ವಿದೇಶಾಂಗ ಇಲಾಖೆಯ ಅಧಿಕಾರಿಗಳೊಂದಿಗೆ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೆ ವಿ ಸಿಂಗ್ ಭಾರತೀಯರ ಮೃತದೇಹವನ್ನು ತರಲು ಕುವೈತ್‌ಗೆ ತೆರಳಿದ್ದು, ಅದೇ ವಿಮಾನದಲ್ಲಿಯೇ ವಾಪಸಾಗಲಿದ್ದಾರೆ.
“ಕುವೈತ್‌ನ ಬೆಂಕಿ ದುರಂತದಲ್ಲಿ ಮೃತಪಟ್ಟ 45 ಮಂದಿಯ ಮೃತದೇಹಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನ ಕೊಚ್ಚಿಗೆ ಕರೆತರಲಿದೆ. ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಕೆ ವಿ ಸಿಂಗ್ ಅವರು ಕುವೈತ್ ಅಧಿಕಾರಿಗಳೊಳೊಂದಿಗೆ ಸಮನ್ವಯ ನಡೆಸಿ ಅದೇ ವಿಮಾನದಲ್ಲಿ ಭಾರತಕ್ಕೆ ಆದಷ್ಟು ಬೇಗ ಹಿಂತಿರುಗಲಿದ್ದಾರೆ” ಎಂದು ಕುವೈತ್ನಲ್ಲಿರುವ ಭಾರತೀಯ ಕಚೇರಿ ತಿಳಿಸಿದೆ.
ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ವಸತಿ ಸೌಲಭ್ಯದಲ್ಲಿರುವ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಸಾವನ್ನಪ್ಪಿದ್ದು, 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ಕುವೈತ್ ಅಗ್ನಿ ಅವಘಡ | ಕಲಬುರಗಿಯ ವ್ಯಕ್ತಿ ಸಾವು; ಇಂಜಿನಿಯರ್,ಅಕೌಂಟೆಂಟ್‌ಗಳು ಸೇರಿ 45 ಭಾರತೀಯರು ಮೃತ
ಭಾರತೀಯರಲ್ಲಿ, 23 ಕೇರಳದಿಂದ, ಏಳು ತಮಿಳುನಾಡಿನಿಂದ, ತಲಾ ಇಬ್ಬರು ಆಂಧ್ರ ಪ್ರದೇಶ ಮತ್ತು ಒಡಿಶಾದಿಂದ ಮತ್ತು ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದ್ದಾರೆ.
ಸಂತ್ರಸ್ತರಲ್ಲಿ ಕೆಲವರು ಇತ್ತೀಚೆಗೆ ಕುವೈತ್‌ಗೆ ಕೆಲಸದ ನಿಮಿತ್ತ ತೆರಳಿದ್ದರೆ, ದಶಕಗಳಿಂದ ದೇಶದಲ್ಲಿ ನೆಲೆಸಿರುವ ಹಲವರು ಇದ್ದಾರೆ.
ಸಂತ್ರಸ್ತರಲ್ಲಿ ಹೆಚ್ಚಿನವರು ಕುವೈತ್‌ನಲ್ಲಿ ದೇಶದ ಅತಿದೊಡ್ಡ ನಿರ್ಮಾಣ ಸಂಸ್ಥೆಯಾದ ಎನ್‌ಬಿಟಿಸಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಂಕಿ ಹೊತ್ತಿಕೊಂಡ ಕಟ್ಟಡವೂ ಎನ್‌ಬಿಟಿಸಿಗೆ ಸೇರಿದ್ದಾಗಿದೆ.
ಘಟನೆಯಲ್ಲಿ ಮೃತಪಟ್ಟ ಸಂಬಂಧಿಕರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
