ಕೊರೋನ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಜನರನ್ನು ಪ್ರಧಾನಿ ನರೇಂದ್ರ ಮೋದಿ ಲೂಟಿ ಮಾಡಿದ್ದಾರೆ. ಪಿಎಂ ಕೇರ್ಸ್ ನಿಧಿಯ ಮೂಲಕ ಜನರಿಂದ ಹಣ ಪಡೆದು, ಅದರ ಅಂಕಿಅಂಶವನ್ನೂ ನೀಡದೆ, ಮುಚ್ಚಿಟ್ಟಿದ್ದಾರೆ ಎಂಬ ಆರೋಪಗಳಿವೆ. ಕೊರೋನ ವಿರುದ್ಧದ ಹೋರಾಟಕ್ಕಾಗಿ ಜನರು ದೇಣಿಗೆ ನೀಡಬೇಕೆಂದು ಕೇಳಿಕೊಂಡ ಪ್ರಧಾನಿ ಮೋದಿ ಬಳಿಕ ಪಿಎಂ ಕೇರ್ಸ್ ಒಂದು ಟ್ರಸ್ಟ್, ಅದು ಸಾರ್ವಜನಿಕ ನಿಧಿಯಲ್ಲ ಎಂದು ಹೇಳಿಕೊಂಡಿದ್ದಾರೆ. ಮೋದಿ ನಡೆಸಿದ ಈ ಕೋಟ್ಯಂತರ ರೂಪಾಯಿ ಸಂಗ್ರಹಣೆಯನ್ನು ಹಗರಣವೆಂದು ವಿಪಕ್ಷಗಳು ಆರೋಪಿಸಿದೆ. ಇದೀಗ, ಪಿಎಂ ಕೇರ್ಸ್ ಮತ್ತೆ ಚರ್ಚೆಯಲ್ಲಿದೆ.
ಕಳೆದ ಎರಡು ವರ್ಷಗಳಿಂದ ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಪಡೆದ ದೇಣಿಗೆಗಳ ಮತ್ತು ವೆಚ್ಚಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ. ಆರ್‌ಟಿಐ ಅರ್ಜಿಗೂ ಕೂಡಾ ಮಾಹಿತಿ ನೀಡಲು ಪ್ರಧಾನಮಂತ್ರಿ ಕಚೇರಿ (ಪಿಎಂಒ) ನಿರಾಕರಿಸಿದೆ. ಈ ಬಗ್ಗೆ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಪ್ರಶ್ನೆ ಎತ್ತಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಕೊರೋನ ಸಾಂಕ್ರಾಮಿಕ ಸಮಯದಲ್ಲಿ, ಮೋದಿ ಅವರು ಪಿಎಂ ಕೇರ್ಸ್ ನಿಧಿ ಎಂಬ ಹೊಸ ಹಗರಣವನ್ನು ಪ್ರಾರಂಭಿಸಿದರು. ‘ಚಾರಿಟಬಲ್ ಟ್ರಸ್ಟ್’ ಎಂದು ಹೇಳಿಕೊಂಡ ಪಿಎಂ ಕೇರ್ಸ್ ಮೂಲಕ ಜನರು, ಭಾರತೀಯ ಮತ್ತು ವಿದೇಶಿ ಸಂಸ್ಥೆಗಳಿಂದ ಸಾವಿರಾರು ಕೋಟಿ ರೂ. ದೇಣಿಗೆ ಪಡೆಯಲಾಗಿದೆ. ಇದರ ಬಗ್ಗೆ ಪ್ರಶ್ನೆಗಳು ಎದ್ದಾಗ ಪಿಎಂಒ ಪಿಎಂ-ಕೇರ್ಸ್ ನಿಧಿಯ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಯಾವುದೇ ಡೇಟಾವನ್ನು ಅಪ್‌ಲೋಡ್ ಮಾಡಿಲ್ಲ. ಕೊನೆಯದಾಗಿ 2022ರ ಮಾರ್ಚ್ 31ರ ಡೇಟಾವನ್ನು ಬಹಿರಂಗಪಡಿಸಲಾಗಿದೆ” ಎಂದು ಸಾಕೇತ್ ಹೇಳಿದ್ದಾರೆ.
Important:
— Saket Gokhale MP (@SaketGokhale) October 4, 2024
Update on Modi's PM-CARES SCAM:
During the Covid-19 pandemic, Modi launched his new scam called PM-CARES Fund. This was meant to be a "charitable trust" which took contributions of thousands of crores from people as well as Indian & foreign companies.
After an… pic.twitter.com/PzYMKWgclH
ಇಷ್ಟು ಮಾತ್ರವಲ್ಲದೆ ಆರ್‌ಟಿಐ ಅರ್ಜಿಗೂ ಮಾಹಿತಿ ನೀಡಲು ಪಿಎಂಒ ನಿರಾಕರಿಸಿದೆ. ಕಳೆದ ವರ್ಷ ದೆಹಲಿ ಹೈಕೋರ್ಟ್‌ನಲ್ಲಿ ಮೋದಿ ಸರ್ಕಾರವು ಪಿಎಂ ಕೇರ್ಸ್ ಒಂದು ‘ಟ್ರಸ್ಟ್’, ಆದ್ದರಿಂದ ಯಾವುದೇ ಮಾಹಿತಿಯನ್ನು ಪಿಎಂಒ ಬಹಿರಂಗಪಡಿಸಲಾಗದು ಎಂದು ಹೇಳಿದೆ. ಆದರೆ, ಇಲ್ಲಿ ಹುಟ್ಟುವ ಹಲವು ಪ್ರಶ್ನೆಗಳತ್ತ ಸಾಕೇತ್ ಬೊಟ್ಟು ಮಾಡಿದ್ದಾರೆ. ಸಾಕೇತ್ ಮಾತ್ರವಲ್ಲದೆ ಹಲವಾರು ವಿಪಕ್ಷ ನಾಯಕರು, ಜನರು ಎತ್ತಿರುವ ಪ್ರಶ್ನೆ ಕೂಡಾ ಇದೇ ಆಗಿದೆ.
ಇದನ್ನು ಓದಿದ್ದೀರಾ? ಪಿಎಂ ಕೇರ್ಸ್ ಹಗರಣ | ಆರ್‌ಟಿಐ ಅರ್ಜಿಗೆ ಉತ್ತರಿಸಲು ಕೇಂದ್ರ ಹಿಂಜರಿಯುವುದೇಕೆ?
ಪಿಎಂ ಕೇರ್ಸ್ ಒಂದು ಟ್ರಸ್ಟ್ ಆದಲ್ಲಿ, ದೇಶದ ಪ್ರಧಾನಿ ಹೆಸರಲ್ಲಿ ಯಾಕಿದೆ? ಈ ಟ್ರಸ್ಟ್‌ನಲ್ಲಿ ದೇಶದ ರಾಷ್ಟ್ರೀಯ ಲಾಂಛನ ಬಳಸುವುದು ಯಾಕೆ? ಪ್ರಧಾನಿ ಮೋದಿಯ ಚಿತ್ರ ಬಳಸುವುದು ಯಾಕೆ? ಹೀಗೆ ಪ್ರಧಾನಿ ಮೋದಿಯ ಈ ಯೋಜನೆ ಸುತ್ತ ಅನುಮಾನದ ಹುತ್ತವಿದೆ.
ಯೋಜನೆಯ ಬಗ್ಗೆ ವಿವರ
ಕೋವಿಡ್ ಸಂದರ್ಭದಲ್ಲಿ 2020ರ ಮಾರ್ಚ್ 28ರಂದು ಪಿಎಂ ಕೇರ್ಸ್ ಆರಂಭಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಈ ನಿಧಿಯ ಅಧ್ಯಕ್ಷರಾದರೆ, ಟ್ರಸ್ಟಿಗಳ ಮಂಡಳಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದ್ದಾರೆ.
ಪಿಎಂ ಕೇರ್ಸ್ ನಿಧಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ ಈ ಯೋಜನೆಯ ಹಿಂದೆ ಮೂರು ಉದ್ದೇಶಗಳಿವೆ. ಮೊದಲನೆಯದಾಗಿ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಸಹಾಯ ಮಾಡುವುದು, ಅದಕ್ಕೆ ಸಂಬಂಧಿಸಿದ ಸಂಶೋಧನೆಗೆ ಧನಸಹಾಯ ನೀಡುವುದು. ಎರಡನೆಯದಾಗಿ ಪೀಡಿತರಿಗೆ ಟ್ರಸ್ಟಿಗಳ ಮಂಡಳಿಯಿಂದ ಅನುದಾನವನ್ನು ಒದಗಿಸುವುದು ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳುವುದು. ಮೂರನೆಯದಾಗಿ ಮೇಲಿನ ಉದ್ದೇಶಗಳಿಗೆ ಹೊಂದಿಕೆಯಾಗುವಂತೆ ಇತರೆ ಚಟುವಟಿಕೆ ಕೈಗೊಳ್ಳುವುದು.
ಪಾರದರ್ಶಕತೆಯಿಲ್ಲದ ಪಿಎಂ ಕೇರ್ಸ್
2023ರಲ್ಲಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಪಿಎಂ ಕೇರ್ಸ್ ನಿಧಿಯು ಮಾಹಿತಿ ಹಕ್ಕು (ಆರ್‌ಟಿಐ) ಕಾಯಿದೆಯಿಂದ ವ್ಯಾಖ್ಯಾನಿಸಲಾದ ‘ಸಾರ್ವಜನಿಕ ಪ್ರಾಧಿಕಾರ’ ಅಲ್ಲ ಅಥವಾ ಸಂವಿಧಾನದ 12ನೇ ಪರಿಚ್ಛೇದದ ಅಡಿಯಲ್ಲಿ ಬರುವುದಿಲ್ಲ ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಹೇಳಿದೆ. ಪಿಎಂ ಕೇರ್ಸ್ ನಿಧಿಯು ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಎಂದು ಪಿಎಂಒ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಪಿಎಂ ಕೇರ್ಸ್ ಫಲಾನುಭವಿಗಳು ನಾಗಪುರದಲ್ಲಿದ್ದಾರೆ: ಡಾ.ಜಿ.ರಾಮಕೃಷ್ಣ
ಆದರೆ, ವರದಿ ಪ್ರಕಾರ ಕೊರೋನ ವಿರುದ್ಧದ ಪರಿಹಾರ ಕ್ರಮಗಳಿಗಾಗಿ ಜನರು ಸುಮಾರು 12,691.82 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಮೊತ್ತದಲ್ಲಿ 2020-21ರ ಹಣಕಾಸು ವರ್ಷದಲ್ಲಿ 3,976.17 ಕೋಟಿ ರೂ. ಮತ್ತು 2021-22ನೇ ಹಣಕಾಸು ವರ್ಷದಲ್ಲಿ 3,716.29 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 5,415.65 ಕೋಟಿ ರೂ.ಗಳು ಇನ್ನೂ ಕೂಡಾ ಸರ್ಕಾರದ ಬಳಿ ಬಾಕಿ ಉಳಿದಿದೆ. ಆದರೆ, ಮೋದಿ ಸರ್ಕಾರ ಮಾತ್ರ ಈ ಮೊತ್ತದ ಖರ್ಚು ವೆಚ್ಚದ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸುತ್ತಿದೆ. ಈ 5,415.65 ಕೋಟಿ ರೂ. ಏನಾಯಿತು ಎಂಬ ಪ್ರಶ್ನೆಗೆ ಮೋದಿ ಸರ್ಕಾರ ಉತ್ತರವನ್ನೇ ನೀಡುತ್ತಿಲ್ಲ.
ಪಿಎಂ ಕೇರ್ಸ್ ಅರ್ಧದಷ್ಟು ಅರ್ಜಿ ವಜಾ!
ಕೊರೋನದಿಂದ ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪರಿಹಾರ, ನೆರವು ಕೋರಿ ಪಿಎಂ ಕೇರ್ಸ್ ಯೋಜನೆಯಡಿಯಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಶೇಕಡ 50ಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪಿಎಂ ಕೇರ್ಸ್ ಯೋಜನೆಯಡಿಯಲ್ಲಿ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 613 ಜಿಲ್ಲೆಗಳಲ್ಲಿ ಮಕ್ಕಳಪರವಾಗಿ 9,331 ಅರ್ಜಿಗಳು ಸಲ್ಲಿಕೆಯಾಗಿವೆ.
ಇದನ್ನು ಓದಿದ್ದೀರಾ? ಮೋದಿ ಮೋಸ-1 |ಕೋವಿಡ್ ಹೆಸರಿನಲ್ಲಿ ಮಾಡಿದ ಪಿಎಂ-ಕೇರ್ಸ್ ಎಲ್ಲೋಯ್ತು?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಒಟ್ಟು ಅರ್ಜಿಗಳಲ್ಲಿ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 558 ಜಿಲ್ಲೆಗಳ ಕೇವಲ 4,532 ಅರ್ಜಿಗಳನ್ನು ಮಾತ್ರ ಅನುಮೋದಿಸಲಾಗಿದೆ. 4,781 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತು 18 ಅರ್ಜಿಗಳು ಇನ್ನೂ ಕೂಡಾ ಬಾಕಿ ಉಳಿದಿದೆ. ಯಾವ ಮಾನದಂಡದಲ್ಲಿ ಅರ್ಜಿ ತಿರಸ್ಕರಿಸಲಾಗಿದೆ ಎಂಬ ಬಗ್ಗೆ ಮಾಹಿತಿಯಿಲ್ಲ.
ಕರ್ನಾಟಕದ ಕೊರೋನ ಹಗರಣ = ಪಿಎಂ ಕೇರ್ಸ್
2020ರಲ್ಲಿ ಕೊರೋನ ದೇಶವನ್ನು ವ್ಯಾಪಿಸಿಕೊಂಡ ವೇಳೆ ಕರ್ನಾಟಕದಲ್ಲಿ ಅಂದಿನ ರಾಜ್ಯ ಬಿಜೆಪಿ ಸರ್ಕಾರ ಕೊರೋನ ನಿರ್ವಹಣೆಯಲ್ಲೂ ಭ್ರಷ್ಟಾಚಾರ ನಡೆಸಿತ್ತು. ಬರೋಬ್ಬರಿ 40,000 ಕೋಟಿ ರೂ. ಹಗರಣ ನಡೆದಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆರೋಪಿಸಿದ್ದರು. 2021ರ ಜುಲೈ- ಆಗಸ್ಟ್‌ನಲ್ಲಿ ‘ಸಾರ್ವಜನಿಕ ಲೆಕ್ಕಪತ್ರ ಸಮಿತಿ’ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಹಗರಣದ ಬಗ್ಗೆ ಗಂಭೀರ ಆರೋಪಗಳಿದ್ದವು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊರೋನ ಹಗರಣವನ್ನು ನಡೆಸಿದಂತೆ ಕೇಂದ್ರದಲ್ಲಿಯೂ ಅಂದಿನ ಬಿಜೆಪಿ ಸರ್ಕಾರ ಕೊರೋನ ನೆಪದಲ್ಲಿ ಹಗರಣ ನಡೆಸಿದೆ. ಆದರೆ ಇಂದಿಗೂ ಕೂಡಾ ಇದನ್ನು ಪ್ರಶ್ನಿಸಬೇಕಾದ ಜನರು ಮೋದಿ ಜಪ ಮಾಡುತ್ತಿರುವುದು ವಿಪರ್ಯಾಸ. ಜಗತ್ತಿನಲ್ಲೇ ಅತೀ ದೊಡ್ಡ ಹಗರಣ ಎನಿಸಿಕೊಂಡಿರುವ ಮೋದಿ ಸರ್ಕಾರ ನಡೆಸಿದ ಚುನಾವಣಾ ಬಾಂಡ್ ಹಗರಣದ ಮುಂದೆ ಪಿಎಂ ಕೇರ್ಸ್ ಹಗರಣ ಏನೂ ಅಲ್ಲ ಎಂದೆನಿಸಿಕೊಂಡರೂ ಕೋಟ್ಯಂತರ ರೂಪಾಯಿ ಹಗರಣವನ್ನು ನಾವು ಅಲ್ಲಗಳೆಯುವಂತಿಲ್ಲ.
ಪ್ರಧಾನಿಯನ್ನು ದೇಶದ ಪ್ರಜೆಗಳೇ ಆಯ್ಕೆ ಮಾಡಿದ್ದಾರೆ. ತನ್ನನ್ನು ಆಯ್ಕೆ ಮಾಡಿದ ಜನರಿಂದಲೇ ದೇಣಿಗೆಯನ್ನು ಪಡೆದು ಈಗ ಅದರ ಖರ್ಚು, ವೆಚ್ಚದ ಲೆಕ್ಕಾಚಾರವನ್ನು ಜನರಿಗೆ ನೀಡಲ್ಲ ಎಂದರೆ ಎಷ್ಟು ಸರಿ? ಇದು ಪ್ರಧಾನಿ ಹುದ್ದೆಯಲ್ಲಿ ಕುಳಿತ ಮೋದಿ ಜನರಿಗೆ ಮಾಡುವ ವಂಚನೆಯಾಗಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಬಗೆವ ದ್ರೋಹವಾಗಿದೆ. ಮತ ಹಾಕಿ ಪ್ರಧಾನಿ ಸ್ಥಾನಕ್ಕೆ ಏರಿಸಿದ ಜನರು ಪ್ರಧಾನಿಯ ನಡೆಯನ್ನು ಪ್ರಶ್ನಿಸುವುದು ಮತ್ತು ತಾವು ನೀಡಿದ ದೇಣಿಗೆಯ ಲೆಕ್ಕಾಚಾರವನ್ನು ಕೇಳುವುದು ತಪ್ಪಾಗುತ್ತದೆಯೇ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.