ಮೋದಿಯ ಮತ್ತೊಂದು ಸುಳ್ಳು: ಬಂಗಾಳದ ಬಡವರ ಮೂಗಿಗೆ ಮೂರು ಸಾವಿರ ಕೋಟಿಯ ತುಪ್ಪ

Date:

‘ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಲಾದ ಮತ್ತು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಸುಮಾರು 3,000 ಕೋಟಿಯನ್ನು ಪಶ್ಚಿಮ ಬಂಗಾಳದ ಬಡ ಜನರಿಗೆ ಹಿಂತಿರುಗಿಸುತ್ತೇನೆ’ ಎಂದಿದ್ದಾರೆ ಮೋದಿ. ಕಳೆದ ಹತ್ತು ವರ್ಷಗಳ ಕಾಲ ನೂರಾರು ಸುಳ್ಳು ಹೇಳಿ ದಕ್ಕಿಸಿಕೊಂಡಿರುವ ಮೋದಿಯವರು, ಈಗ ಬಂಗಾಳದ ಬಡ ಜನರ ಮೂಗಿಗೆ ಮೂರು ಸಾವಿರ ಕೋಟಿಯ ಹೊಸ ತುಪ್ಪ ಸವರಿದ್ದಾರೆ.

2014ರಲ್ಲಿ ದೇಶದ ಪ್ರಧಾನಿಯಾಗುವ ಮುನ್ನ ನರೇಂದ್ರ ಮೋದಿಯವರು, ‘ಸ್ವಿಸ್ ಬ್ಯಾಂಕ್‌ನಲ್ಲಿರುವ ಭಾರತೀಯ ಭ್ರಷ್ಟ ರಾಜಕಾರಣಿಗಳ ಕಪ್ಪುಹಣ ವಾಪಸ್‌ ತಂದು ದೇಶದ ಪ್ರತಿಯೊಬ್ಬ ನಾಗರಿಕರ ಬ್ಯಾಂಕ್‌ ಖಾತೆಗೆ 15 ಲಕ್ಷ ರೂ.ಗಳ ಜಮಾ ಮಾಡಲಾಗುವುದು’ ಎಂಬ ಆಶ್ವಾಸನೆ ಕೊಟ್ಟಿದ್ದರು.

ಮೋದಿಯವರು ಆಶ್ವಾಸನೆ ನೀಡಿ ಇಲ್ಲಿಗೆ 10 ವರ್ಷಗಳು ಉರುಳಿಹೋದವು. ಸ್ವಿಸ್ ಬ್ಯಾಂಕ್‌ನಿಂದ ಕಪ್ಪುಹಣ ತರುವುದಿರಲಿ, ಖಾತೆಗೆ ಹಾಕುವುದಿರಲಿ, ಆ ಬಗ್ಗೆ ಮಾತು ಕೂಡ ಆಡಲಿಲ್ಲ. ಆದರೆ, ಗೃಹ ಮಂತ್ರಿ ಅಮಿತ್ ಶಾ, ‘ಅದೆಲ್ಲ ಚುನಾವಣಾ ಜುಮ್ಲಾ’ ಎಂದರು. ಜುಮ್ಲಾ ಎಂದರೆ ಸುಳ್ಳು ಎಂದರ್ಥ. ಪ್ರಧಾನಿಗಳ ಮಾತು ಸುಳ್ಳು ಎಂದು ಗೃಹ ಸಚಿವರೇ ದೇಶದ ಜನರ ಮುಂದೆ ಸತ್ಯ ನುಡಿದರು. ಪ್ರಧಾನಿ ಮೋದಿಯವರನ್ನು ಸುಳ್ಳಗಾರ ಎಂದು ದಾಖಲು ಮಾಡಿದರು, ಇರಲಿ.

2019ರಲ್ಲಿ ಬೆಂಗಳೂರಿನ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮೋದಿಯವರು, ‘ನಿಮ್ಮ ಚೌಕಿದಾರ್ ಕರ್ತವ್ಯದಲ್ಲಿದ್ದಾಗ ದೇಶದ ಮೇಲೆ ಒಂದೇ ಒಂದು ಭಯೋತ್ಪಾದಕ ದಾಳಿ ನಡೆದಿದೆಯೇ?’ ಎಂದು ನೆರೆದಿದ್ದ ಜನಸಮೂಹವನ್ನು ಪ್ರಶ್ನಿಸಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೋದಿಯವರ ಸಮ್ಮೋಹನಾತ್ಮಕ ಮಾತಿಗೆ ಮರುಳಾದ ಜನ ಉತ್ತರಿಸುವ ಮುನ್ನವೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ‘ಮೋದಿ ಭಯೋತ್ಪಾದಕರ ಹೃದಯದಲ್ಲಿ ಭಯ ಹುಟ್ಟಿಸುವ ಚೌಕಿದಾರ್’ ಎಂದು ಪ್ರಧಾನಿಯವರ ಎದೆಗಾರಿಕೆಯ ಬಗ್ಗೆ ಮಾತನಾಡಿದ್ದರು. ನೆರೆದಿದ್ದ ಜನ ಮೋದಿಯವರ ಐವತ್ತಾರಿಂಚಿನ ಎದೆಯತ್ತ ನೋಡಿದ್ದರು.

ಇದನ್ನು ಓದಿದ್ದೀರಾ?: ಮೋದಿ ವೈಫಲ್ಯ-4 | ಭಾರತದಲ್ಲಿ ಶೇ.5ಕ್ಕೆ ಇಳಿದಿದೆಯಾ ಬಡತನ? ಅಸಲಿಯತ್ತೇನು ಗೊತ್ತೇ?

ವಾಸ್ತವ ಸ್ಥಿತಿ ಏನೆಂದರೆ, ಪ್ರಧಾನಿ ಪ್ರಶ್ನೆ ಕೇಳಿದ ನಂತರ, ಪಠಾಣ್ ಕೋಟ್, ಗುರುದಾಸ್ ಪುರ, ಅಮರನಾಥ ಯಾತ್ರೆ, ಉರಿ ಮತ್ತು ಪುಲ್ವಾಮಾಗಳಲ್ಲಿ ಭಯೋತ್ಪಾದಕರ ದಾಳಿ ನಡೆದು, ನೂರಾರು ಅಮಾಯಕರು ಬಲಿಯಾದರು. ದೇಶದಲ್ಲಿ ಭಯ-ಆತಂಕದ ವಾತಾವರಣ ಸೃಷ್ಟಿಯಾಯಿತು. ಭದ್ರತೆಯ ವೈಫಲ್ಯದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿ ಚರಿತ್ರೆಯ ಪುಟಗಳಲ್ಲಿ ದಾಖಲಾಯಿತು.

ಇದು ಒಂದೆರಡು ಮಾತ್ರ. ಕಳೆದ ಹತ್ತು ವರ್ಷಗಳಲ್ಲಿ, ರೇಲ್ವೇ ಸ್ಟೇಷನ್‌ನಲ್ಲಿ ಟೀ ಮಾರುತ್ತಿದ್ದ ಹುಡುಗನ ಕತೆಯಿಂದ ಹಿಡಿದು ಫೇಕ್ ಡಿಗ್ರಿಯವರೆಗೆ, 1988ರಲ್ಲಿಯೇ ಇ-ಮೇಲ್ ಹೊಂದಿದ್ದೆ ಎನ್ನುವುದರಿಂದ ಹಿಡಿದು ಮೋದಿ ಗ್ಯಾರಂಟಿಯವರೆಗೆ… ಮೋದಿಯವರು ನೂರಾರು ಸುಳ್ಳುಗಳನ್ನು ಹೇಳಿದ್ದಾರೆ. ಅವುಗಳನ್ನು ಸಮಯ, ದಿನಾಂಕ, ಸ್ಥಳ, ಘಟನೆಗಳ ಮೂಲಕ ಕಂಡುಕೊಳ್ಳಲು ದೇಶಕ್ಕೆ ಡಿಜಿಟಲ್ ತಂತ್ರಜ್ಞಾನವನ್ನು ಕರುಣಿಸಿದ್ದಾರೆ.

ಇಷ್ಟಾದರೂ ದೇಶದ ಜನ ಮೋದಿಯವರ ಸುಳ್ಳಿನ ಸನ್ನಿಗೆ ಒಳಗಾಗುತ್ತಲೇ ಇದ್ದಾರೆ. ಮೋದಿಯವರು ಕೂಡ ಸುಳ್ಳುಗಳನ್ನು ಸತ್ಯವೆಂದು ಹೇಳುತ್ತಲೇ ಸಾಗಿದ್ದಾರೆ.

ಏತನ್ಮಧ್ಯೆ, ಮಾ. 27ರಂದು ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ರಾಜಮನೆತನದ ಅಮೃತಾ ರಾಯ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತ ಮೋದಿಯವರು, ‘ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಲಾದ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಜಪ್ತಿ ಮಾಡಿರುವ ಸುಮಾರು 3,000 ಕೋಟಿಯನ್ನು ಪಶ್ಚಿಮ ಬಂಗಾಳದ ಬಡ ಜನರಿಗೆ ಹಿಂತಿರುಗಿಸಲು ತಾನು ಕೆಲಸ ಮಾಡುತ್ತಿದ್ದೇನೆ’ ಎಂಬ ಹೊಸ ಸುಳ್ಳನ್ನು ಹೇಳಿದ್ದಾರೆ.

ಆ ತಕ್ಷಣವೇ ಪ್ರಧಾನಿ ಮೋದಿಯವರ ಮಾತುಗಳಿಗೆ ಪ್ರತಿಕ್ರಿಯಿಸಿರುವ ತೃಣಮೂಲ್ ಕಾಂಗ್ರೆಸ್ಸಿನ ರಾಜ್ಯಸಭಾ ಚೀಫ್ ವಿಪ್ ಸುಖೇಂದು ಶೇಖರ್ ರಾಯ್, ‘ಜಾರಿ ನಿರ್ದೇಶನಾಲಯ(ಇಡಿ) ತನ್ನ ದಾಳಿಯಲ್ಲಿ ಹಣ, ಆಸ್ತಿ, ದಾಖಲೆಪತ್ರಗಳನ್ನು ವಶಪಡಿಸಿಕೊಂಡಿರುವುದು ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002ರ ಅಡಿಯಲ್ಲಿ. ಮೋದಿಯವರು ಹೇಳಿದ ಪ್ರಕಾರ ಹಣವನ್ನು ಬಡವರಿಗೆ ನೀಡುವುದಾದರೆ, ಅದನ್ನು ಪಿಎಂಎಲ್ಎ ಕಾಯ್ದೆಯಡಿಯಲ್ಲಿಯೇ ಮಾಡಬೇಕು. ಆ ಹಣವೀಗ ನ್ಯಾಯಾಂಗದ ವಶದಲ್ಲಿದೆ. ಪ್ರಧಾನಿ ಹೇಗೆ ಭರವಸೆ ನೀಡುತ್ತಾರೆ? ಇದು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪವಾಗುವುದಿಲ್ಲವೇ? ನ್ಯಾಯಾಲಯ ನಿಂದನೆ ಅಲ್ಲವೇ?’ ಎಂದು ಮೋದಿಯವರ ‘ಸಾಮಾನ್ಯಜ್ಞಾನ’ವನ್ನು ಬಯಲು ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಮಹುವಾ ಮೊಯಿತ್ರಾ ಸ್ಪರ್ಧಿಸುತ್ತಿದ್ದಾರೆ. ಮಹುವಾ ಮೊಯಿತ್ರಾ ಅವರು ಮೋದಿ ಮತ್ತವರ ಸರ್ಕಾರವನ್ನು ಅಂಕಿ-ಅಂಶಗಳ ಸಮೇತ ತರ್ಕಬದ್ಧವಾಗಿ ಟೀಕಿಸಿ, ಬೆತ್ತಲೆ ಮಾಡಿ ನಿಲ್ಲಿಸಿದ್ದು ಒಂದೆರಡು ಸಲವಲ್ಲ. ಲೋಕಸಭೆಯಲ್ಲಿ ಎತ್ತಿದ ಆಕೆಯ ಪ್ರಶ್ನೆಗಳಿಗೆ ಉತ್ತರ ಕೊಡಲಾಗದ ಬಿಜೆಪಿಯವರು, ಆಕೆಯನ್ನು ಪ್ರಶ್ನೆ ಕೇಳಲು ಹಣ ಪಡೆಯಲಾಗಿದೆ ಎಂಬ ಸುಳ್ಳು ಆಪಾದನೆ ಹೊರಿಸಿ, ಹೊರಗೆ ಹಾಕಿದರು. ಕೊಡಬಾರದ ಕಿರುಕುಳ ಕೊಟ್ಟರು. ಆಕೆಯ ಕಟುವಾದ ಪ್ರಶ್ನೆಗಳ ಮುಜುಗರದಿಂದ ಬಚಾವಾದರು. ಆದರೆ, ಟಿಎಂಸಿ ಆಕೆಗೆ ಮತ್ತೆ ಟಿಕೆಟ್ ನೀಡಿದೆ. ಹಾಗಾಗಿ ಕೃಷ್ಣನಗರ ಬಿಜೆಪಿ ಮತ್ತು ಟಿಎಂಸಿ ಪಾಲಿಗೆ ಪ್ರತಿಷ್ಠಿತ ಕ್ಷೇತ್ರವಾಗಿದೆ.

ಅಮೃತಾ ರಾಯ್- ಮೋದಿ
ಅಮೃತಾ ರಾಯ್- ಮೋದಿ

ಮಹುವಾ ಮೊಯಿತ್ರಾ ಅವರನ್ನು ಮಣಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಸೂಕ್ತ ಅಭ್ಯರ್ಥಿಯ ಹುಡುಕಾಡುತ್ತ ರಾಜವಂಶಸ್ಥರ ಮೊರೆ ಹೋಗಿದೆ. ರಾಜವಂಶಸ್ಥರಾದ ಅಮೃತಾ ರಾಯ್‌ರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ವಿರೋಧ ಪಕ್ಷ ಟಿಎಂಸಿ, ‘ಆ ರಾಜಮನೆತನವು ಬ್ರಿಟಿಷರಿಗೆ ಬೆಂಬಲ ನೀಡಿತ್ತು, ದೇಶದ್ರೋಹಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ’ ಎಂದು ಟೀಕಿಸಿದೆ. ಟೀಕೆಗೊಳಗಾದ ಅಮೃತಾ ರಾಯ್ ಪ್ರತಿರೋಧ ತೋರಲಾಗದೆ ಕಂಗೆಟ್ಟು ಕೂತಿದ್ದರು. ಅಂತಹ ಸಮಯದಲ್ಲಿ ಫೋನ್ ಮಾಡಿದ ಪ್ರಧಾನಿ ಮೋದಿಯವರು, ಆಕೆಯನ್ನು ಸಮಾಧಾನ ಪಡಿಸುತ್ತಾ, ‘ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರಬೇಕಿದೆ, ಅದಕ್ಕೆ ನೀವು ಸಮರ್ಥರಿದ್ದೀರಿ, ನಿಮ್ಮಿಂದ ಅದು ಸಾಧ್ಯ’ ಎಂದು ಹುರಿದುಂಬಿಸಿದರು. ಮುಂದುವರೆದು, ‘ಬಂಗಾಳದ ಬಡವರಿಗೆ ಮೂರು ಸಾವಿರ ಕೋಟಿ ಕೊಡಲಾಗುವುದು’ ಎಂಬ ಸುಳ್ಳು ಹೇಳಿ, ಆ ಸುಳ್ಳನ್ನೇ ಬಂಗಾಳದ ಬಡವರಿಗೆ ಹೇಳಿ ಎಂದರು.

ಅಮೃತಾ ರಾಯ್‌ರಿಗೆ ಧೈರ್ಯ ಹೇಳಲು ಹೀಗೆ ಕಾನೂನಾತ್ಮಕವಾಗಿ ಸಾಧ್ಯವಾಗದ ಸಂಗತಿಯನ್ನು ಪ್ರಧಾನಿಗಳು ಹೇಳುವುದು ಎಷ್ಟು ಸರಿ ಎಂದ ಟಿಎಂಸಿ ಈಗ ಮೋದಿಯವರನ್ನು ಲೇವಡಿ ಮಾಡುತ್ತಿದೆ. ಅಷ್ಟೇ ಅಲ್ಲ, ‘ಚುನಾವಣಾ ದಿನಾಂಕ ಘೋಷಣೆಯಾದ ಮೇಲೆ ಬಡವರಿಗೆ ಆಶ್ವಾಸನೆ ಕೊಡುವುದು ಸುಳ್ಳು, ಅಪ್ರಸ್ತುತ, ಕಾನೂನುಬಾಹಿರ, ಅಸಂವಿಧಾನಿಕ ಮತ್ತು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು’ ಎಂದಿದೆ.

ಇದನ್ನು ಓದಿದ್ದೀರಾ?: ಮೋದಿ ವೈಫಲ್ಯ-3 | 100 ಸ್ಮಾರ್ಟ್‌ ಸಿಟಿಗಳು ಎಲ್ಲಿವೆ? ಇದು ಮೋದಿಯ ‘ಸ್ಮಾರ್ಟ್‌’ ಸುಳ್ಳು!

ಅಷ್ಟೇ ಅಲ್ಲ, ಪ್ರಧಾನಿ ಮೋದಿಯವರ ಮಹಿಳಾಪರ ಕಾಳಜಿ, ಕಳಕಳಿಯನ್ನೂ ಬಿಡಿಸಿಟ್ಟಿದೆ. ಟಿಎಂಸಿಯ ರಾಜ್ಯ ಸಚಿವ ಶಶಿ ಪಂಜ, ‘ಪ್ರಧಾನಿಗಳು ಈಗ ಚುನಾವಣಾ ಮಂತ್ರಿಗಳಾಗಿದ್ದಾರೆ. ಮಹಿಳಾ ಅಭ್ಯರ್ಥಿಗಳಿಗೆ ಕರೆ ಮಾಡಿ ಮಾತನಾಡುತ್ತಿದ್ದಾರೆ. ಧೈರ್ಯ ತುಂಬುತ್ತಿದ್ದಾರೆ. ಮಾಡಲಿ, ಒಳ್ಳೆಯದು. ಆದರೆ, ಇದೇ ಪ್ರಧಾನಿ ಮೋದಿಯವರು ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಕರೆ ಮಾಡಿ ಮಾತನಾಡಿದ್ದಾರೆಯೇ, ಅವರಿಗೆ ಧೈರ್ಯ ತುಂಬಿದ್ದಾರೆಯೇ? ದೇಶಕ್ಕೆ ಗೌರವ ತಂದ ಮಹಿಳಾ ಕುಸ್ತಿಪಟುಗಳು ದೆಹಲಿಯಲ್ಲಿಯೇ ಕೂತು ಕಣ್ಣೀರುಗರೆದರು, ಅವರಿಗೆ ಕರೆ ಮಾಡಿ ಸಂತೈಸಿದ್ದಾರೆಯೇ? ತಮ್ಮದೇ ಗುಜರಾತಿನಲ್ಲಿ ನಡೆದ ಭೀಕರ ಅತ್ಯಾಚಾರಕ್ಕೆ ಬಲಿಯಾದ ಬಿಲ್ಕಿಸ್ ಬಾನೋಗೆ ಕರೆ ಮಾಡಿದ್ದಾರೆಯೇ? ಹತ್ರಾಸ್, ಲಖೀಂಪುರ್ ಖೇರ್, ಉನ್ನಾವೋದ ಸಂತ್ರಸ್ತೆಯರಿಗೆ ಕರೆ ಮಾಡಿ ಮಾತನಾಡಿ ಧೈರ್ಯ ತುಂಬಿದ್ದಾರೆಯೇ? ಆ ದಿಕ್ಕೆಟ್ಟ ಬಡ ಮಹಿಳೆಯರ ಬಗ್ಗೆ ಮಾತನಾಡದ ಮೋದಿ, ರಾಜವಂಶಸ್ಥರಿಗೆ ಮಾತ್ರ ಕರೆ ಮಾಡುತ್ತಾರೆಂದರೆ, ಅವರ ಹೃದಯದಲ್ಲಿ ಯಾರಿದ್ದಾರೆ?’ ಎಂದು ಪ್ರಶ್ನಿಸಿದೆ.

ಕಳೆದ ಹತ್ತು ವರ್ಷಗಳ ಕಾಲ ನೂರಾರು ಸುಳ್ಳು ಹೇಳಿ ದಕ್ಕಿಸಿಕೊಂಡಿರುವ, ಸುಳ್ಳಿನ ಸಾಮ್ರಾಜ್ಯವನ್ನು ಸೃಷ್ಟಿ ಮಾಡಿರುವ ಪ್ರಧಾನಿ ಮೋದಿಯವರು, ಮೂರನೇ ಬಾರಿಗೆ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಬರಿ ಕನಸಲ್ಲ, ಆಗಿಯೇ ತೀರಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅಂದಮೇಲೆ, ಅವರ ಬಾಯಿಯಿಂದ ಇನ್ನೆಷ್ಟು ಸುಳ್ಳುಗಳು ಸಿಡಿಯಲಿವೆಯೋ… ಕಾದು ನೋಡಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿ ಸುಳ್ಳುಗಳು: ಭಾಗ-1 | ಕಳೆದ 10 ವರ್ಷಗಳಲ್ಲಿ ವಿಶ್ವಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗಿದೆಯೇ? ವಾಸ್ತವ ಏನು?

ಮುಸಲ್ಮಾನರಿಗೆ ಕಳೆದ 30 ವರ್ಷದಿಂದ ಮೀಸಲಾತಿ ಜಾರಿಯಲ್ಲಿದೆ. ನಂತರ ಬಸವರಾಜ ಬೊಮ್ಮಾಯಿ...

ಛಲಬಿಡದೆ ಬರಪರಿಹಾರ ತಂದ ಕಾಂಗ್ರೆಸ್‌ಗೆ ಜನ ಮೆಚ್ಚುಗೆ; ಯಾರು ಏನಂದರು?

ಬಿಜೆಪಿ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಕುಗ್ಗದೆ, ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ...

26/11 ದಾಳಿಯ ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಮುಂಬೈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್...

ಕುಮಾರಣ್ಣನ ಜೇಬಲ್ಲಿದ್ದ ‘ಪೆನ್‌ಡ್ರೈವ್‌’ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯ್ತು: ಡಿ ಕೆ ಶಿವಕುಮಾರ್

ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಜೆಡಿಎಸ್ ಸಂಸದ ಹಾಗೂ ಹಾಸನ...