ಬಿಜೆಪಿ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಮೀಸಲಾತಿಯ ವಿರುದ್ಧವಾಗಿದ್ದು, ಜನರ ಮೀಸಲಾತಿಯನ್ನು ಕಿತ್ತುಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತೆಲಂಗಾಣದ ಅದಿಲಾಬಾದ್ ಮೀಸಲು ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವೆ ನಡೆಯುತ್ತಿದೆ. ಒಂದು ಸಂವಿಧಾನವನ್ನು ಉಳಿಸಲು ಬಯಸುವ ಕಾಂಗ್ರೆಸ್ ನಡುವೆ ಹಾಗೂ ಮತ್ತೊಂದು ಜನರ ಹಕ್ಕುಗಳನ್ನು ಕೊನೆಗೊಳಿಸುವ ಬಿಜೆಪಿ – ಆರ್‌ಎಸ್‌ಎಸ್ ಒಳಗೊಂಡ ಪಕ್ಷಗಳ ನಡುವೆ ಎಂದು ರಾಹುಲ್ ತಿಳಿಸಿದರು.
“ನರೇಂದ್ರ ಮೋದಿ ಅವರು ಮೀಸಲಾತಿ ವಿರುದ್ಧವಾಗಿದ್ದಾರೆ. ಅವರು ನಿಮ್ಮಿಂದ ಮೀಸಲಾತಿಗಳನ್ನು ಕಿತ್ತುಕೊಳ್ಳಲು ಬಯಸುತ್ತಾರೆ. ಮೀಸಲಾತಿಯನ್ನು ಶೇ.50 ರಷ್ಟು ಹೆಚ್ಚಿಸುವುದು ದೇಶದ ಅತೀ ದೊಡ್ಡ ಸವಾಲಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
“ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಮೀಸಲಾತಿಗಿರುವ ಶೇ.50ರ ಮಿತಿಯನ್ನು ತೆಗೆದುಹಾಕಲಿದೆ. ಆದರೆ ಬಿಜೆಪಿ ನಾಯಕರು ಮೀಸಲಾತಿಯನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಹೇಳಿದರು.
ಅಮೇಥಿ, ರಾಯ್‌ಬರೇಲಿಗೆ ಪ್ರಿಯಾಂಕಾ ಗಾಂಧಿ ಉಸ್ತುವಾರಿ
ರಾಯ್‌ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಲಿದ್ದಾರೆ. ಕೈ ಪಕ್ಷದ ಭದ್ರಕೋಟೆ ಹಾಗೂ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿರುವ ಇವೆರೆಡು ಕ್ಷೇತ್ರಗಳಲ್ಲಿ ಗೆಲುವು ಖಚಿತಪಡಿಸಿಕೊಳ್ಳಲು ಪಕ್ಷ ಮುಂದಾಗಿದೆ.
ಕೊನೇ ಕ್ಷಣದವರೆಗೂ ರಹಸ್ಯವಾಗಿಟ್ಟಿದ್ದ ಇವೆರೆಡೂ ಕ್ಷೇತ್ರಗಳಿಗೆ ರಾಯ್‌ಬರೇಲಿಯಿಂದ ರಾಹುಲ್ ಗಾಂಧಿ ಹಾಗೂ ಅಮೇಥಿಗೆ ಕಿಶೋರ್ ಲಾಲ್ ಶರ್ಮಾ ಅವರ ಹೆಸರನ್ನು ಪ್ರಕಟಿಸಲಾಯಿತು.
ರಾಯ್ ಬರೇಲಿಯಿಂದ ಕಳೆದ 2 ದಶಕಗಳಿಂದ ಸೋನಿಯಾ ಗಾಂಧಿ ಗೆಲುವು ಸಾಧಿಸಿದ್ದರೆ, 2004ರಿಂದ 2019ರವರೆಗೆ ಅಮೇಥಿಯಲ್ಲಿ ರಾಹುಲ್ ಗಾಂಧಿ ಜಯಗಳಿಸಿದ್ದರು. ಮತದಾನ ಮುಗಿಯುವವರೆಗೂ ಇವೆರೆಡೂ ಕ್ಷೇತ್ರಗಳಲ್ಲಿ ಉಳಿದುಕೊಳ್ಳಲು ಪ್ರಿಯಾಂಕಾ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
