ಪ್ರಧಾನಿ ನರೇಂದ್ರ ಮೋದಿ ಮುಂಬೈನಲ್ಲಿ 21.8 ಕಿ.ಮೀ ಉದ್ದದ ಭಾರತದ ಅತೀ ದೊಡ್ಡ ಸಮುದ್ರ ಸೇತುವೆ ಉದ್ಘಾಟನೆಗೂ ಮುನ್ನ ನಾಸಿಕ್‌ನ ಕಲಾರಾಂ ದೇವಸ್ಥಾನದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಕಲಾರಾಂ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಸಂತ ಏಕನಾಥ್ ರಚಿಸಿದ ಮರಾಠಿ ಕವಿತೆ ಭಾವಾರ್ಥ ರಾಮಾಯಣವನ್ನು ಆಲಿಸಿದರು.
ಹಿಂದಿನ ದಿನ ನರೇಂದ್ರ ಮೋದಿ ನಾಸಿಕ್‌ನಲ್ಲಿ ಜನವರಿ 11 ರಂದು ಸ್ವಾಮಿ ವಿವೇಕಾನಂದ ಜನ್ಮದಿನದ ಅಂಗವಾಗಿ ವಿವೇಕಾನಂದರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ನಂತರ ನಾಸಿಕ್‌ನಲ್ಲಿನ ತಪೋವನ ಮೈದಾನದಲ್ಲಿ ನಡೆದ ರಾಷ್ಟ್ರೀಯ ಯುವ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮನ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೂ ಮುನ್ನ ದೇಶಾದ್ಯಂತವಿರುವ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಭಿಯಾನ ಹಮ್ಮಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾಲ್ದೀವ್ಸ್ ಮೋದಿ ನಿಂದನೆ ಖಂಡನೀಯ; ನಮ್ಮ ನಡವಳಿಕೆ ಶೋಚನೀಯ
“ರಾಮ ಮಂದಿರ ಪ್ರಾಣ ಪ್ರತಿಷ್ಠಾಪನಾ ದಿನದಂದು ದೇಶಾದ್ಯಂತವಿರುವ ದೇಗುಲಗಳು ಹಾಗೂ ಪುಣ್ಯ ಕ್ಷೇತ್ರಗಳಲ್ಲಿ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಭಾರತವು ಯುವಕರಿಂದಾಗಿ ವಿಶ್ವದ ಮೊದಲ ಐದು ಆರ್ಥಿಕ ರಾಷ್ಟ್ರಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಸ್ಟಾರ್ಟ್‌ಪ್ ಕಂಪನಿಗಳಲ್ಲಿಯು ಸಹ ಪ್ರಮುಖ ಮೂರು ಸ್ಥಾನಗಳಲ್ಲಿ ಒಂದಾಗಿದೆ. ಭಾರತವು ನೂತನ ಆವಿಷ್ಕಾರಗಳನ್ನು ಸಹ ಕೈಗೊಳ್ಳುತ್ತಿದೆ. ಪೆಟೆಂಟ್ ಪಡೆದುಕೊಳ್ಳುವುದರಲ್ಲಿಯೂ ಭಾರತವು ಮುಂದಿದೆ. ದೇಶದ ಇವೆಲ್ಲ ಸಾಧನೆಗಳ ಹಿಂದೆ ಯುವಕರಿದ್ದಾರೆ. ಈ ಕಾರಣದಿಂದ ಅಮೃತ ಕಾಲ ದೇಶದ ಯುವಕರಿಗೆ ಸುವರ್ಣಯುಗ” ಎಂದು ಮೋದಿ ಬಣ್ಣಿಸಿದರು.
“ಇಂದು ದೇಶದ ಯುವಶಕ್ತಿಯ ದಿನ. ಗುಲಾಮಗಿರಿ ದಿನಗಳಿಂದ ದೇಶಕ್ಕೆ ಹೊಸ ಶಕ್ತಿ ತುಂಬಿದ ಮಹಾನ್ ನಾಯಕನಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ನಾನು ಆ ಮಹಾನ್ ನಾಯಕ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಇಲ್ಲಿಗೆ ಆಗಮಿಸಿರುವುದಕ್ಕೆ ಸಂತೋಷವಾಗಿದೆ. ರಾಷ್ಟ್ರೀಯ ಯುವ ದಿನಕ್ಕಾಗಿ ನಾನು ಶುಭ ಕೋರುತ್ತಾನೆ. ಇಂದು ಭಾರತದ ನಾರಿ ಶಕ್ತಿಯ ಸಂಕೇತವಾದ ರಾಜ ಮಾತೆ ಜೀಜಾ ಬಾಯಿ ಅವರ ಜನ್ಮ ಮಹೋತ್ಸವ ದಿನವಾಗಿದೆ” ಎಂದು ಪ್ರಧಾನಿ ಹೇಳಿದರು.