ಐದು ಗ್ಯಾರಂಟಿಗಳನ್ನೂ ಸಮರ್ಪಿಸಿ ನಿಮ್ಮ ಮುಂದೆ ನಿಂತಿದ್ದೇವೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ, ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ ಎಂಬ ಪುರಂದರ ದಾಸರ ಕೀರ್ತನೆಯಂತೆ ಕುವೆಂಪು ಅವರ ಈ ಪವಿತ್ರವಾದ ಭೂಮಿಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದು ನಮ್ಮ ಭಾಗ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಯುವನಿಧಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಯೋಜನೆಗಳನ್ನು ನಿಮ್ಮ ಜೇಬು ತುಂಬಿಸಲು ಮಾತ್ರವಲ್ಲ ನಿಮಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ, ಕುಟುಂಬದ ಆತ್ಮವಿಶ್ವಾಸ ಹೆಚ್ಚಿಸಲು, ಮಾನಸಿಕವಾಗಿ ಧೈರ್ಯ ತುಂಬಿ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಜಾರಿಗೆ ತಂದಿದ್ದೇವೆ” ಎಂದರು.
“ಕೇವಲ ಉದ್ಯೋಗ ಮಾಡುವುದಷ್ಟೇ ನಿಮ್ಮ ಆದ್ಯತೆಯಾಗಬಾರದು. ಬೇರೆಯವರಿಗೆ ಉದ್ಯೋಗ ನೀಡುವುದು ನಿಮ್ಮ ಗುರಿಯಾಗಬೇಕು. ನಿಮ್ಮ ಕೆಳಗೆ ಹತ್ತಾರು ಜನರಿಗೆ ಉದ್ಯೋಗ ಕೊಟ್ಟರೆ ಮಾತ್ರ ನಮ್ಮ ಈ ಯೋಜನೆಯ ಉದ್ದೇಶ ಸಾರ್ಥಕವಾಗಲಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ
“ಇಂದು ವಿವೇಕಾನಂದ ಅವರ ಜಯಂತಿ. ಯುವಕರು ಸ್ವಾಭಿಮಾನದಿಂದ ಬದುಕಬೇಕು. ನಿಮ್ಮಿಂದ ಸಾಧ್ಯವಾಗದ ವಿಚಾರ ಯಾವುದೂ ಇಲ್ಲ. ನೀವು ಏನನ್ನು ಬೇಕಾದರೂ ಸಾಧಿಸಬಹುದು. ರಾಜೀವ್ ಗಾಂಧಿ ಅವರು ಯುವಕರಿಗೆ ಸ್ಫೂರ್ತಿ ತುಂಬಲು ಕಾರ್ಯಕ್ರಮ ರೂಪಿಸಿದ್ದರು. ಯುವಕರು ತಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಈ ದೇಶಕ್ಕೆ ಶಕ್ತಿ ತುಂಬಬೇಕು. ಇದು ಕುವೆಂಪು ಅವರ ನಾಡು. ಅವರು ‘ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ’ ಎಂದು ಹೇಳಿದ್ದಾರೆ. ನೀವು ನಿಮ್ಮ ಬದುಕಿನಲ್ಲಿ ಯಾರೇ ಟೀಕೆ ಮಾಡಿದರೂ ಚಿಂತಿಸದೇ ಮುನ್ನಡೆಯಿರಿ. ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ನಿಮ್ಮ ಬದುಕಿನಲ್ಲಿ ಜ್ಯೋತಿ ಬೆಳಗಿಸಲು ಬದ್ಧವಾಗಿದೆ” ಎಂದರು.
ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು, ಮುಖಂಡರು ಭಾಗಿ
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಇದೇ ತಿಂಗಳು 21ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರು ಹಾಗೂ ಮುಖಂಡರು ಭಾಗವಹಿಸಲಿದ್ದು, ನಮ್ಮ ಎಲ್ಲಾ ಕಾರ್ಯಕರ್ತರು, ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.