ಉತ್ತರ ಪ್ರದೇಶದ ಮೀರತ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಹೋಳಿ ಆಚರಣೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಗುಂಪೊಂದು ನಮಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಖಂಡಿಸಿ ಬಲಪಂಥೀಯ ಗುಂಪು ಪ್ರತಿಭಟನೆ ನಡೆಸಿದ್ದು ಖಾಲಿದ್ ಪ್ರಧಾನ್ ಯಾನೆ ಖಾಲಿದ್ ಮೇವಾಟಿ ಎಂಬ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.
ಇದನ್ನು ಓದಿದ್ದೀರಾ? ಮುಸ್ಲಿಂ ಶಾಸಕರಿಗಿದ್ದ ಶುಕ್ರವಾರದ ನಮಾಜ್ ವಿರಾಮ ರದ್ದುಗೊಳಿಸಿದ ಅಸ್ಸಾಂ ಸರ್ಕಾರ
ಇನ್ನು ಘಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಆಡಳಿತವು ಪ್ರಧಾನ್ ಮತ್ತು ಮೂವರು ಭದ್ರತಾ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ. ವಿಡಿಯೋವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಖಾಲಿದ್ ಪ್ರಧಾನ್ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಬಲಪಂಥೀಯ ಗುಂಪು ಒತ್ತಾಯಿಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ ಶಿವ ಪ್ರತಾಪ್ ಸಿಂಗ್, “ಐಐಎಂಟಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಮಾಜ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಈ ಹಿನ್ನೆಲೆ ಪ್ರಧಾನ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ ಶಾಸಕ ರಾಜಾ ಭಯ್ಯಾ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲು
ಶನಿವಾರ, ಗಂಗಾ ನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅನೂಪ್ ಸಿಂಗ್, ಕಾರ್ತಿಕ್ ಹಿಂದೂ ಎಂಬವರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೋಮು ಸಾಮರಸ್ಯವನ್ನು ಭಂಗಗೊಳಿಸಲು ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಹಲವು ಕಾಲೇಜುಗಳಲ್ಲಿ ಧಾರ್ಮಿಕ ವೈಷಮ್ಯಗಳು ಹೆಚ್ಚಾಗುತ್ತಿದೆ. ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಈ ರಾಜಕೀಯವನ್ನು ಅರ್ಥ ಮಾಡಿಕೊಳ್ಳದ ಹಿಂದೂ, ಮುಸ್ಲಿಂ ಯುವಕರು, ವಿದ್ಯಾರ್ಥಿಗಳು ಪರಸ್ಪರ ದ್ವೇಷದ ಕಿಡಿಕಾರುತ್ತಿದ್ದಾರೆ.
