ಚುನಾವಣಾ ಕಾರ್ಯತಂತ್ರದಲ್ಲಿ ನಿಪುಣ ಎಂದೇ ಕರೆಸಿಕೊಳ್ಳುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಈ ಲೋಕಸಭೆ ಚುನಾವಣೆಗೂ ಮುನ್ನ ಚುನಾವಣಾ ಫಲಿತಾಂಶ ಏನಾಗಲಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲಿ ಕಳೆದ ಬಾರಿಗಿಂತ ಅಧಿಕ ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿಯು 300ರ ಗಡಿ ದಾಟಲಿದೆ ಎಂದು ಹೇಳಿದ್ದಾರೆ. ಜೊತೆಗೆ ಕಾಂಗ್ರೆಸ್ ಅವಕಾಶ ಕಳೆದುಕೊಳ್ಳುತ್ತದೆ ಎಂದಿದ್ದಾರೆ.
ಆದರೆ, ಬಿಜೆಪಿ ಅಷ್ಟೊಂದು ಕ್ಷೇತ್ರದಲ್ಲಿ ಗೆಲುವು ಕಾಣುವಷ್ಟು ಪ್ರಬಲವಾಗಿದೆಯೇ? ಅಥವಾ ಇದು ಪ್ರಶಾಂತ್ ಕಿಶೋರ್ ಹೇಳುವಂತೆ ಮಾನಸಿಕ ಯುದ್ಧವೇ? ಅಥವಾ ಬಿಜೆಪಿಯ ಒಂದು ಚುನಾವಣಾ ತಂತ್ರವೇ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ ಎಷ್ಟು ನಿಜವಾಗಿದೆಯೋ, ಅಷ್ಟೇ ಬಾರಿ ಸುಳ್ಳಾಗಿರುವುದು ಕೂಡಾ ಇದೆ. ಅಷ್ಟಕ್ಕೂ ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯವನ್ನು ನಂಬಬಹುದೇ?
ಪ್ರಶಾಂತ್ ಕಿಶೋರ್ ಹೇಳಿಕೆಯೇ ಮಾನಸಿಕ ಯುದ್ಧ!
ಈ ಹಿಂದೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಬಿಜೆಪಿಯ 370ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ‘ಮಾನಸಿಕ ಯುದ್ಧ’ದ ಒಂದು ಭಾಗ ಎಂದಿದ್ದರು. “ಬಿಜೆಪಿ-ಎನ್‌ಡಿಎ ಗೆಲ್ಲುತ್ತದೆಯೇ ಅಥವಾ ಸೋಲುತ್ತದೆಯೇ ಎಂಬುವುದರ ಬದಲಾಗಿ ಈಗ ಬಿಜೆಪಿ 370 ಸ್ಥಾನಗಳನ್ನು ಪಡೆಯುತ್ತದೆಯೋ-ಇಲ್ಲವೋ ಎಂಬ ನಿಟ್ಟನಲ್ಲಿ ಚರ್ಚೆಯ ದಿಕ್ಕು ಬದಲಾಗಿದೆ” ಎಂದು ಹೇಳಿದ್ದರು. ಹಾಗಿದ್ದಾಗ ಈಗ ಪ್ರಶಾಂತ್ ಕಿಶೋರ್ ಹೇಳಿಕೆ ಕೂಡಾ ‘ಮಾನಸಿಕ ಯುದ್ಧ’ ಆಗಬಹುದಲ್ಲವೇ?
ಇದನ್ನು ಓದಿದ್ದೀರಾ? ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್‌ಗೆ ದೊಡ್ಡ ಸೋಲು: ಪ್ರಶಾಂತ್ ಕಿಶೋರ್
ಸಾಮಾನ್ಯವಾಗಿ ಜನರ ಒಂದು ಭಾವನೆ ಇದೆ – ‘ಸೋಲುವ ಪಕ್ಷಕ್ಕೆ ನಾವು ಮತ ಹಾಕಿ ನಮ್ಮ ಮತವೇಕೆ ವ್ಯರ್ಥ ಮಾಡೋದು, ನಾವು ಗೆಲ್ಲುವ ಪಕ್ಷಕ್ಕೆ ಮತ ಹಾಕ್ತೀವಿ’ ಎನ್ನುವ ಜನರಿದ್ದಾರೆ. ಜನರ ಈ ಮಾನಸಿಕ ಸ್ಥಿತಿಯನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿರುವುದು ಖಚಿತ. ಈ ನಿಟ್ಟಿನಲ್ಲಿಯೇ ಮೋದಿ ಅವರು ‘ಅಬ್ ಕಿ ಬಾರ್ ಚಾರ್ ಸೋ ಪಾರ್’ ಎಂದು 400ಕ್ಕೂ ಅಧಿಕ ಸೀಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವುದು. ಈಗ ಪ್ರಶಾಂತ್ ಕಿಶೋರ್ ಅವರನ್ನು ಕೂಡಾ ಈ ಜನರ ‘ಮಾನಸಿಕ ಯುದ್ಧ’ಕ್ಕೆ ಬಿಜೆಪಿ ಬಳಸುತ್ತಿದೆಯೇ? ಈ ಉದ್ದೇಶದಿಂದಲೇ ಬಿಜೆಪಿಯು 300ಕ್ಕೂ ಅಧಿಕ ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿರುವುದೇ?
ನಿಜವಾದ ಪ್ರಶಾಂತ್ ಕಿಶೋರ್ ಭವಿಷ್ಯವಾಣಿ
ಪಿಕೆ ಎಂದು ಕರೆಯಲ್ಪಡುವ ಪ್ರಶಾಂತ್ ಕಿಶೋರ್ ರಾಜಕೀಯ ತಂತ್ರಗಾರರಾಗುವ ಮುನ್ನ ರಾಜಕೀಯ ತಂತ್ರಗಾರರಾಗಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದರು. ಆರಂಭದಲ್ಲಿ ಬಿಜೆಪಿಗೆ ರಾಜಕೀಯ ತಂತ್ರಜ್ಞರಾಗಿ ಕೆಲಸ ಮಾಡಿದ್ದ ಅವರು, ಬಳಿಕ ಜೆಡಿ(ಯು), ಐಎನ್‌ಸಿ, ಎಎಪಿ, ವೈಎಸ್‌ಆರ್‌ಸಿಪಿ, ಡಿಎಂಕೆ ಮತ್ತು ಟಿಎಂಸಿಗಾಗಿಯೂ ಕೆಲಸ ಮಾಡಿದ್ದರು.
ಇದನ್ನು ಓದಿದ್ದೀರಾ? ಆಂಧ್ರಪ್ರದೇಶದ ಚುನಾವಣಾ ಲೆಕ್ಕಾಚಾರ ಬದಲಿಸುವರೇ ಪ್ರಶಾಂತ್ ಕಿಶೋರ್?
ಮೊದಲ ಬಾರಿಗೆ 2012ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಚುನಾವಣಾ ತಂತ್ರಗಾರಿಕೆ ಮೂಲಕ ಸಹಾಯ ಮಾಡಿದ್ದಾರೆ. ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಆಯ್ಕೆಯಾಗುವಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಪ್ರಶಾಂತ್ ಕೊಡುಗೆ ನೀಡಿದ್ದಾರೆ.
ಅದಾದ ಬಳಿಕ ಸಿಟಿಜನ್ಸ್ ಫಾರ್ ಅಕೌಂಟೆಬಲ್ ಗವರ್ನೆನ್ಸ್ (ಸಿಎಜಿ) ಎಂಬ ಚುನಾವಣಾ ಪ್ರಚಾರದ ಗುಂಪನ್ನು ಕಟ್ಟಿಕೊಂಡರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿದ ಬಳಿಕ ಪ್ರಶಾಂತ್ ಕಿಶೋರ್ ಮುನ್ನೆಲೆಗೆ ಬಂದರು. ಈಗ ಅದೇ ಪ್ರಖ್ಯಾತಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಇದೆ.
ಸುಳ್ಳಾದ ಪ್ರಶಾಂತ್ ಕಿಶೋರ್ ಚುನಾವಣಾ ಭವಿಷ್ಯ
ನರೇಂದ್ರ ಮೋದಿ ಗೆಲುವಿಗೆ ಪ್ರಶಾಂತ್ ಕಿಶೋರ್ ಚುನಾವಣಾ ತಂತ್ರಗಾರಿಕೆಯೇ ಸಹಾಯ ಮಾಡಿದೆ ಎನ್ನಲಾದರೂ ಕೂಡಾ ಈ ಹೆಸರಾಂತ ವ್ಯಕ್ತಿಯ ಚುನಾವಣಾ ಭವಿಷ್ಯವು ಅದೆಷ್ಟೋ ಬಾರಿ ಹುಸಿಯಾಗಿದೆ. ಹೀಗಿದ್ದಾಗ ಪ್ರಶಾಂತ್ ಕಿಶೋರ್ ಹೇಳಿದ ಎಲ್ಲ ಚುನಾವಣಾ ಭವಿಷ್ಯವನ್ನು ನಾವು ಹೇಗೆ ನಂಬಲು ಸಾಧ್ಯ?
ಇದನ್ನು ಓದಿದ್ದೀರಾ? ಒಡೆದಾಳುವ ಬಿಜೆಪಿಯಲ್ಲೇ ಒಡಕು; ಕಾಂಗ್ರೆಸ್ ಎಡೆಗೆ ಪಕ್ಷಾಂತರದ ಪರ್ವ; ಚಾಂಪಿಯನ್ ಆಗುವುದೇ ಕೈಪಡೆ
ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಬಿಆರ್‌ಎಸ್ ಗೆಲುವಿನ ಮುನ್ಸೂಚನೆಯನ್ನು ಪ್ರಶಾಂತ್ ಕಿಶೋರ್ ನೀಡಿದ್ದರು. ಆದರೆ, ನಡೆದಿದ್ದು ಬೇರೆಯೇ. ಬಿಆರ್‌ಎಸ್ಅನ್ನು ಮಣಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇನ್ನು ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ, ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿದ್ದು ಇಲ್ಲಿಯೂ ಪ್ರಶಾಂತ್ ಚುನಾವಣಾ ಭವಿಷ್ಯ ಸುಳ್ಳಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಗ್ಯಾರಂಟಿ ಘೋಷಣೆಗಳೇ ಕಾರಣ ಎಂದರೆ ತಪ್ಪಾಗಲಾರದು. 2024ರ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಈ ಗ್ಯಾರಂಟಿಗಳೇ ಕೈಹಿಡಿಯುವ ಸಾಧ್ಯತೆಯಿದೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಹಿಂದೂ ಜನಸಂಖ್ಯೆ ಹೆಚ್ಚಿರುವುದರಿಂದ ಅಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದರು. ಆದರೆ ಮತದಾರರು ಅಲ್ಲಿಯೂ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ಭವಿಷ್ಯವು ಸಂಪೂರ್ಣವಾಗಿ ಬುಡಮೇಲಾದ ಅದೆಷ್ಟೋ ನಿದರ್ಶನಗಳು ಇರುವಾಗ, ಅವರ ಭವಿಷ್ಯವನ್ನು ಈಗ ನಂಬಲು ಸಾಧ್ಯವೇ? ಮೋದಿ, ಬಿಜೆಪಿ ಮತ್ತು ಪಿಕೆಗಳ ಮೈಂಡ್ ಗೇಮ್ ಅಲ್ಲವೇ?
ಉಡುಪಿಯ ವೃತ್ತಿ ನಿರತ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ ಎಂಬವರು ಕರ್ನಾಟಕ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಭವಿಷ್ಯ ನುಡಿಯುತ್ತಾ , ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಅವರು ನುಡಿದ ಭವಿಷ್ಯ ವಾಣಿ ಸುಳ್ಳಾಯಿತು. ಬಿಜೆಪಿ ಸೋತಿತು. ಕಾಂಗ್ರೆಸ್ ಭಾರೀ ಬಹುಮತ ಗಳಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿತು.
ಜ್ಯೋತಿಷಿಗಳು ನುಡಿಯುವ ಭವಿಷ್ಯ , ರಾಜಕೀಯ ಪಂಡಿತರ ಲೆಕ್ಕಾಚಾರ ಕೆಲವೊಮ್ಮೆ ಕಾಕತಾಳೀಯವೆಂಬಂತೆ ಸರಿಯಾಗುವುದಿದೆ. ಕೆಲವೊಮ್ಮೆ ತಲೆ ಕೆಳಗಾಗುವುದೂ ಇದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 370 ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ ಎಂಬ ಪ್ರಶಾಂತ್ ಕಿಶೋರ್ ಅವರ ಭವಿಷ್ಯ ವಾಣಿಗೆ ಯಾವುದೇ ಪೂರಕವಾದ ವಾತಾವರಣ ಸದ್ಯಕ್ಕಂತೂ ಎಲ್ಲೂ ಕಾಣಸಿಗುತ್ತಿಲ್ಲದಿರುವುದಂತೂ ಅತ್ಯಂತ ಸ್ಪಷ್ಟ ಮತ್ತು ಸತ್ಯ.