ಒಡೆದಾಳುವ ಬಿಜೆಪಿಯಲ್ಲೇ ಒಡಕು; ಕಾಂಗ್ರೆಸ್‌ ಎಡೆಗೆ ಪಕ್ಷಾಂತರದ ಪರ್ವ; ಚಾಂಪಿಯನ್ ಆಗುವುದೇ ಕೈಪಡೆ

Date:

ಕರ್ನಾಟಕದಲ್ಲಿ 40% ಕಮಿಷನ್, ಬಿಟ್‌ ಕಾಯಿನ್ ಹಗರಣ, ಕೋವಿಡ್ ವೈದ್ಯಕೀಯ ಸಲಕರಣೆ ಹಗರಣ, ಗುತ್ತಿಗೆದಾರನ ಆತ್ಮಹತ್ಯೆಯಂತಹ ನಾನಾ ಕಾರಣಗಳಿಂದ ಬಿಜೆಪಿಯನ್ನು ಜನರು ದೂರವಿಟ್ಟಿದ್ದಾರೆ. ರಾಜ್ಯದಲ್ಲಿ ಪ್ರಬಲ ನಾಯಕತ್ವವೂ ಇಲ್ಲದೆ, ಅಂತಿಮವಾಗಿ ಬಿಜೆಪಿ ಹೈಕಮಾಂಡ್‌ ಮತ್ತೆ ಯಡಿಯೂರಪ್ಪ ಮತ್ತು ಪುತ್ರರಿಗೆ ಮಣೆ ಹಾಕಿದೆ. ಆದರೂ, ರಾಜ್ಯ ಬಿಜೆಪಿಯ ಹೀನಾಯ ಸ್ಥಿತಿಯಿಂದಾಗಿ ಕಳೆದ ವಿಧಾನಸಭಾ ಚುನಾವಣೆಯ ಸಮಯದಿಂದಲೇ ಹಲವರು ಕಾಂಗ್ರೆಸ್‌ ಎಡೆಗೆ ಪಕ್ಷಾಂತರದ ಪರ್ವ ಆರಂಭಿಸಿದ್ದಾರೆ.

ಒಡೆದ ಮನೆಯಾಗಿರುವ ಬಿಜೆಪಿ ಜೊತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿಯ ಒಡಕು ಜೆಡಿಎಸ್‌ ಮೇಲೂ ಪರಿಣಾಮ ಬೀರುತ್ತಿದೆ ಜೊತೆಗೆ, ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ಸಹಿಸದ ಎರಡೂ ಪಕ್ಷಗಳ ಹಲವರು ಒಬ್ಬೊಬ್ಬರಾಗಿ ಉಭಯ ಪಕ್ಷಗಳನ್ನು ತೊರೆದು ಕಾಂಗ್ರೆಸ್‌ ಸೇರಲಾರಂಭಿಸಿದ್ದಾರೆ. ಎಲ್ಲ ಭಿನ್ನಮತಗಳನ್ನು ಶಮನ ಮಾಡುವುದರಲ್ಲಿ ಯಶಸ್ಸು ಕಾಣುತ್ತಿರುವ ಕಾಂಗ್ರೆಸ್‌, ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿಯೂ ಗೆಲುವಿನ ಹಾದಿಯಲ್ಲಿ ಪ್ರಬಲವಾಗುವ ಸಾಧ್ಯತೆಗಳಿವೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ, ಇಬ್ಬರು ಜೆಡಿಎಸ್‌ ಶಾಸಕರು – ಅರಸೀಕೆರೆಯ ಶಿವಲಿಂಗೇಗೌಡ ಮತ್ತು ತುಮಕೂರು ಗ್ರಾಮಾಂತರದ ಡಿ.ಸಿ ಗೌರಿಶಂಕರ್ – ಕಾಂಗ್ರೆಸ್‌ ಸೇರುವ ಮೂಲಕ ಕೈ ಪಾಳಯದೆಡೆಗೆ ಪಕ್ಷಾಂತರ ಪರ್ವ ಆರಂಭವಾಯಿತು. ಅದು ಈಗಲೂ ಮುಂದುವರೆದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ದೊರೆಯದೆ, ಬಂಡಾಯ ಎದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರಿದ್ದರು. ಇಬ್ಬರೂ ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡು ಸ್ಪರ್ಧಿಸಿದ್ದರು. ಲಕ್ಷ್ಮಣ್ ಸವದಿ ಗೆದ್ದರೆ, ಶೆಟ್ಟರ್ ಸೋಲುಂಡಿದ್ದರು. ಅವರನನ್ನು ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸ್‌ ನೇಮಿಸಿತ್ತು. ಆದರೂ, ಶೆಟ್ಟರ್ ಬಿಜೆಪಿ ಗಾಳಕ್ಕೆ ಬಿದ್ದು, ಮರಳಿ ಬಿಜೆಪಿ ಸೇರಿದ್ದಾರೆ.

ಬಿಜೆಪಿ-ಜೆಡಿಎಸ್‌ಗೆ ಗುಡ್‌ಬೈ ಹೇಳಿದ ಮುಖಂಡರು
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಭರ್ಜರಿ ಗೆಲುವಿನಿಂದ ಕಂಗೆಟ್ಟಿರುವ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣಾ ಕಣಕ್ಕಿಳಿದಿವೆ. ಆದರೆ, ಮೈತ್ರಿ ವಿರುದ್ಧವೇ ಅಪಸ್ವರ ಎದ್ದಿದೆ. ಹಲವರು ಮೈತ್ರಿಯನ್ನು ವಿರೋಧಿಸಿ ಉಭಯ ಪಕ್ಷಗಳನ್ನು ತೊರೆಯುತ್ತಿದ್ದರೆ, ಇನ್ನೂ ಕೆಲವರು ತಮ್ಮ ನಾಯಕರಿಗೆ ಟಿಕೆಟ್‌ ನೀಡದೇ ಇರುವುದಕ್ಕೆ ಅಸಮಾಧಾನಗೊಂಡು ಪಕ್ಷ ತೊರೆಯುತ್ತಿದ್ದಾರೆ. ಅವರೆಲ್ಲರೂ ಕಾಂಗ್ರೆಸ್‌ ಸೇರುತ್ತಿದ್ದಾರೆ.

ಈಗಾಗಲೇ, ಜೆಡಿಎಸ್‌ನ ಮಾಜಿ ಎಂಎಲ್‌ಸಿ ಮರಿತಿಬ್ಬೇಗೌಡ, ಮಾಜಿ ಶಾಸಕ ಎಂ ಶ್ರೀನಿವಾಸ್ ಹಾಗೂ ಅಪ್ಪಾಜಿಗೌಡ – ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಇದೇ ಹೊತ್ತಿನಲ್ಲಿ, ಬಿಜೆಪಿಯಲ್ಲಿದ್ದ ಮೂಡಿಗೆರೆ ಮಾಜಿ ಶಾಸಕ ಎಂ.ಪಿ ಕುಮಾರಸ್ವಾಮಿ ಮತ್ತು ಬೈಂದೂರು ಮಾಜಿ ಶಾಸಕ ಬಿ.ಎಂ ಸುಕುಮಾರ್‌ ಶೆಟ್ಟಿ ಕೂಡ ಕಾಂಗ್ರೆಸ್‌ ಸೇರಿದ್ದಾರೆ.

ಉಡುಪಿ ಚಿಕ್ಕಮಗಳೂರು ಭಾಗದ ಪ್ರಬಲ ನಾಯಕರಲ್ಲಿ ಒಬ್ಬರಾಗಿದ್ದ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಜಯಪ್ರಕಾಶ್ ಹೆಗ್ಡೆ ಕೂಡ ಮರಳಿ ಕಾಂಗ್ರೆಸ್‌ ಬಂದಿದ್ದಾರೆ. ಮಾತ್ರವಲ್ಲದೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿಯೂ ಕಣಕ್ಕಿಳಿದಿದ್ದಾರೆ.

ಅಲ್ಲದೆ, ಜಯಪ್ರಕಾಶ್ ಹೆಗ್ಗೆಯಂತೆಯೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ತೇಜಸ್ವಿನಿ ಗೌಡ ಅವರು ತಮ್ಮ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರಳಿ ಕಾಂಗ್ರೆಸ್‌ ಸೇರಿದ್ದಾರೆ.

ಈ ಪ್ರಮುಖರ ಜೊತೆಗೆ, ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಗ್ಲ್ಯಾಡಿಸ್ ಅಲ್ಮೇಡಾ ಕೂಡ ಕಾಂಗ್ರೆಸ್‌ ಸೇರಿದ್ದಾರೆ. ಕೊಪ್ಪಳ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರ ಆಪ್ತ ನಗರಸಭೆ ಸದಸ್ಯ ರಾಜಶೇಖರ ಆಡೂರು, ಮೈಸೂರಿನಲ್ಲಿ ಯಡಿಯೂರಪ್ಪ ಅವರ ಆಪ್ತ ನಾಗಿದ್ದ ಹೆಚ್.ವಿ.ರಾಜೀವ್, ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಮುಖಂಡ ಎಂ. ಆರ್ ರವಿಶಂಕರ್ ಸೇರಿದಂತೆ ಹಲವಾರು ಸ್ಥಳೀಯ ಬಿಜೆಪಿ-ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರಿದ್ದಾರೆ. ಇನ್ನೂ ಸೇರುತ್ತಿದ್ದಾರೆ.

ಅಲ್ಲದೆ, ಜೆಡಿಎಸ್‌-ಬಿಜೆಪಿ ಮೈತ್ರಿ ವಿರೋಧಿಸಿದ್ದ ಜೆಡಿಎಸ್‌ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ನಜ್ಮಾ ನಜೀರ್ ಕೂಡ ಕಾಂಗ್ರೆಸ್‌ ಸೇರಿದ್ದಾರೆ.

ಇನ್ನು, ಬಿಜೆಪಿ ಯುವ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷ, ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಸೋದರಳಿಯ ಧೀರಜ್ ಪ್ರಸಾದ್ ಕೂಡ ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ. ಬಿಜೆಪಿಯಲ್ಲಿ ನಿರಂತರ ಟಿಕೆಟ್‌ ವಂಚಿತರಾಗಿರುವ ಬಿಜೆಪಿ ಯುವ ಮೋರ್ಚಾದ ಮತ್ತೋರ್ವ ಮಾಜಿ ಅಧ್ಯಕ್ಷ ಡಾ. ಸಂದೀಪ್ ಕೂಡ ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದಾರೆ. ಬಿಜೆಪಿ ನಾಯಕ, ವಿಧಾನ ಪರಿಷತ್‌ ಸದಸ್ಯ ಸಿ.ಪಿ ಯೋಗೇಶ್ವರ್‌ ಅವರ ಪುತ್ರಿ ನಿಶಾ ಕೂಡ ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ್ದಾರೆ.

ಅಲ್ಲದೆ, ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಕೂಡ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಕಾಂಗ್ರೆಸ್‌ ನಾಯಕರೊಂದಿಗೆ ಒಡನಾಟದಲ್ಲಿದ್ದಾರೆ.

ಬಿಜೆಪಿಯೊಳಗೆ ಬಂಡಾಯದ ಭೇಗುದಿ
ಒಂದೆಡೆ, ಬಿಜೆಪಿ-ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವವರ ಸಂಖ್ಯೆ ಬೆಳೆಯುತ್ತಲೇ ಇದೆ. ಮತ್ತೊಂದೆಡೆ, ತಮಗೆ ಟಿಕೆಟೆ ಸಿಗದ ಹಿನ್ನೆಲೆ ಹಲವರು ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದಾರೆ. ಅವರಲ್ಲಿ ಕೆಲವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದರೆ, ಇನ್ನೂ ಕೆಲವರು, ಪಕ್ಷ ತೊರೆಯದೇ ಇದ್ದರೂ, ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಒಬಿಸಿ ನಾಯಕ ಕೆ.ಎಸ್‌ ಈಶ್ವರಪ್ಪ ತಮ್ಮ ಮಗನಿಗೆ ಬಿಜೆಪಿ ಟಿಕೆಟ್‌ ನಿರಾಕರಣೆಗೆ ಯಡಿಯೂರಪ್ಪ ಕಾರಣವೆಂದು ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ತಾವೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ತುಮಕೂರಿನಲ್ಲಿ ತಮಗೆ ಟಿಕೆಟ್‌ ಬೇಕೆಂದು ಬೇಡಿಕೆ ಇಟ್ಟಿದ್ದ ಮಾಜಿ ಸಚಿವ ಮಾಧುಸ್ವಾಮಿ ಕೂಡ ಬಂಡಾಯ ಎದ್ದಿದ್ದಾರೆ. ತಾವು ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣಗೆ ಬೆಂಬಲ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ.

ದಾವಣೆಗೆರೆಯಲ್ಲಿ ರೇಣುಕಾಚಾರ್ಯ ಕೂಡ ಬಂಡಾಯ ಎದ್ದಿದ್ದರು. ಈಗ ಬಿಜೆಪಿ ನಾಯಕರು ಅವರನ್ನು ಸಮಾಧಾನಿಸಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಚುನಾವಣಾ ಕಣದಲ್ಲಿ ಅವರು ನಡೆ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಲ್ಲದೆ, ಮೂವರು – ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ಮತ್ತು ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ – ಬದಲಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಈ ಮೂವರೂ ವಿಭಜನೆ ಮತ್ತು ಪ್ರಚೋದನಾಕಾರಿ ಹೇಳಿಕೆಗಳಲ್ಲಿ ಹೆಸರುವಾಸಿಯಾಗಿದ್ದವರು. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಮನೆ ಬಾಗಿಲಿಗೆ ಬಂದರೂ, ಅನಂತ ಹೆಗಡೆ ಬಾಗಿಲು ತೆರೆಯದೆ ವಾಪಸ್‌ ಕಳಿಸಿದ್ದಾರೆ. ಇನ್ನು, ಯಧುವೀರ್ ಅವರನ್ನು ರಾಜರು ಎನ್ನುತ್ತಲೇ ಪ್ರತಾಪ್ ಸಿಂಹ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕಟೀಲ್ ನಿಧಾನವಾಗಿ ಮೂಲೆಗುಂಪಾಗುತ್ತಿದ್ದಾರೆ.

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್! - Vistara News

ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬೆಂಗಳೂರಿಗೆ ಬರುವುದು ನಗರದ ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟವಿಲ್ಲ. ಹೀಗಾಗಿ, ಅವರನ್ನು ಹಿಮ್ಮೆಟ್ಟುವ ಕೆಲಸವೂ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ. ಇನ್ನು, ಕರಂದ್ಲಾಜೆಯನ್ನು ಚಿಕ್ಕಮಗಳೂರಿಂದ ಓಡಿಸುವಲ್ಲಿ ಯಶಸ್ಸು ಕಂಡ ಸಿ.ಟಿ ರವಿ, ತನಗೆ ಟಿಕೆಟ್‌ ದೊರೆಯದೆ ಅಸಮಾಧಾನಗೊಂಡಿದ್ದಾರೆ.

ಇನ್ನು, ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರೇ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಕೆ.ಸಿ ನಾರಾಯಣಗೌಡ ಹಾಗೂ ಹಲವರಿಗೆ ನುಂಗಲಾದರ ತುತ್ತಾಗಿ ಪರಿಣಮಿಸಿದೆ. ಅಲ್ಲದೆ, ಪ್ರಧಾನಿ ಮೋದಿ ಅವರನ್ನು ನಂಬಿ ಬಿಜೆಪಿಗೆ ಹೋಗಿರುವ ಸುಮಲತಾ ಪಾಡು ಕೂಡ ಅತಂತ್ರವಾಗಿದೆ. ನಾರಾಯಣಗೌಡರ ಬೆಂಬಲದೊಂದಿಗೆ ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸುವ ಸಾಧ್ಯತೆಗಳೂ ಇವೆ. ಆದರೆ, ಏಪ್ರಿಲ್ 3ರಂದು ನಿರ್ಧಾರ ತಿಳಿಸುವುದಾಗಿ ಸುಮಲತಾ ಹೇಳಿದ್ದಾರೆ.

ಇನ್ನು, ಬೆಂಗಳೂರು ಕೇಂದ್ರದ ಸಂಸದ, ಅಭ್ಯರ್ಥಿ ಪಿ.ಸಿ ಮೋಹನ್ ಪ್ರಚಾರದ ವೇಳೆ, ಬಿಜೆಪಿ ಕಾರ್ಯಕರ್ತರೇ ಮೋಹನ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ರಾಯಚೂರಿನ ದೇವದುರ್ಗದಲ್ಲಿ ಜೆಡಿಎಸ್‌ ಶಾಸಕಿ ಕರೆಮ್ಮ ಅವರು ಬಿಜೆಪಿ ಪರವಾಗಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಹಲವೆಡೆ ಇದೇ ಪರಿಸ್ಥಿತಿ ಇದೆ.

ಈ ಎಲ್ಲ ಕಾರಣಗಳಿಂದಾಗಿ ಬಿಜೆಪಿ ಸದ್ಯ ಒಡೆದು ಚೂರಾದ ಮಡಿಕೆಯಂತಾಗಿದೆ. ಈ ಒಡೆದ ಮನೆಯನ್ನು ಒಗ್ಗೂಡಿಸುವುದು ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರಗೆ ಸವಾಲಾಗಿದೆ ನಿಂತಿದೆ. ಈ ಬಂಡಾಯ ಶಮನ ಮಾಡುವುದು ಸುಲಭವಾಗಿ ಉಳಿದಿಲ್ಲ.

ಬಿಜೆಪಿ-ಜೆಡಿಎಸ್‌ ಒಳಗಿನ ಬಂಡಾಯಗಳ ನಡುವೆ ಕಾಂಗ್ರೆಸ್‌ ತನ್ನೊಳಗಿನ ಎಲ್ಲ ಬಂಡಾಯಗಳನ್ನೂ ಶಮನ ಮಾಡಿ, ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದೆ. ಕೋಲಾರ ಕ್ಷೇತ್ರವು ಕಾಂಗ್ರೆಸ್‌ಗೆ ಕಗ್ಗಂಟಾಗಿ ಪರಿಣಮಿಸಿತ್ತು. ಅಲ್ಲಿನ ಎರಡೂ ಬಣಗಳಿಗೆ ಟಿಕೆಟ್ ನೀಡದೆ, ಬಣಗಳಿಂದ ದೂರ ಉಳಿದಿದ್ದ ಗೌತಮ್ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರವನ್ನು ಪಾಲಿಸುವುದಾಗಿ ಕೆ.ಎಚ್ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣ ಒಪ್ಪಿಕೊಂಡಿದೆ. ಹೀಗಾಗಿ, ಇದ್ದ ಒಂದು ಬಿಕ್ಕಟ್ಟು ಕೂಡ ನಿವಾರಣೆಯಾಗಿದೆ.

ಇದೆಲ್ಲವೂ, ಬಿಜೆಪಿ-ಜೆಡಿಎಸ್‌ ಮೈತ್ರಿಯು ತಮ್ಮೊಳಗಿನ ಭಿನ್ನಾಭಿಪ್ರಾಯ, ಬಂಡಾಯಗಳಿಂದಲೇ ಸೋಲುಣ್ಣುವ ಸಾಧ್ಯತೆಗಳನ್ನು ತೋರುತ್ತಿದೆ. ಈ ಬಂಡಾಯವು ಕಾಂಗ್ರೆಸ್‌ಗೆ ಗೆಲುವಿಗೆ ನೆರವಾಗುವ ಸಾಧ್ಯತೆಗೂ ಇವೆ. ಅದರೆ, ಬಿಜೆಪಿ-ಜೆಡಿಎಸ್‌ ಒಳಗಿನ ಈ ತಿಕ್ಕಾಟವನ್ನು ಕಾಂಗ್ರೆಸ್‌ ಹೇಗೆ ಬಳಸಿಕೊಳ್ಳಲಿದೆ. ಯಾವ ರೀತಿಯ ತಂತ್ರ ಎಣೆಯಲಿದೆ. ಮೈತ್ರಿ ಪಕ್ಷಗಳ ಭಿನ್ನಮತವನ್ನು ತನ್ನ ಯಶಸ್ಸಾಗಿ ಹೇಗೆ ಮಾಡಿಕೊಳ್ಳಲಿದೆ ಎಂಬುದು ಮುಂದಿರುವ ಪ್ರಶ್ನೆ!

ಒಟ್ಟಿನಲ್ಲಿ ಇಡೀ ರಾಜ್ಯದಲ್ಲಿ ರಾಜಕೀಯ ಅಲೆ ಕಾಂಗ್ರೆಸ್ ಪರವಾಗಿದೆ. ಅದಕ್ಕೆ, ಬಿಜೆಪಿ-ಜೆಡಿಎಸ್‌ ತೊರೆದವರ ಪಾತ್ರವೂ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ. ಅದಾಗ್ಯೂ, ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಯಾವಾಗಲೂ ಎಡವುವ ಕಾಂಗ್ರೆಸ್‌ ಏನು ಮಾಡಲಿದೆ ನೋಡೋಣ….!

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಾವು ಮತ ಹಾಕುತ್ತೇವೆ, ಆದರೆ ಬಿಜೆಪಿಗಲ್ಲ’; 1,200 ಕುಟುಂಬಗಳು ಹೀಗೆ ಹೇಳಿದ್ದೇಕೆ?

ನಾವು ಒಡೆದ ಮನೆಯಲ್ಲಿ ಬದುಕುತ್ತಿದ್ದೇವೆ. ಬಿಜೆಪಿ ಸರ್ಕಾರ ನಮ್ಮ ಮನೆಗಳನ್ನು ಒಡೆದುರುಳಿಸಿದೆ....

‘ಇಂಡಿಯಾ’ ಒಕ್ಕೂಟ ತೊರೆಯಲು ನಿರಾಕರಿಸಿದ್ದಕ್ಕೆ ಮಾಜಿ ಸಿಎಂ ಹೇಮಂತ್ ಸೊರೆನ್‌ಗೆ ಜೈಲು’

'ಇಂಡಿಯಾ' ಮೈತ್ರಿಕೂಟವನ್ನು ತೊರೆಯಲು ನಿರಾಕರಿಸಿದ್ದಕ್ಕೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ, ಜೆಎಂಎಂ ನಾಯಕ...

ಮೋದಿಯವರ ದ್ವೇಷ ಭಾಷಣ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ: ರಾಹುಲ್ ಗಾಂಧಿ

"ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ...