ಕಳೆದ 55 ದಿನಗಳಿಂದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೇವಾಲ್ ಆಮರಣಾಂತ ಉಪವಾಸ ನಡೆಸುತ್ತಿದ್ದಾರೆ. ರೈತರು ಜನವರಿ ಜನವರಿ 21ರಂದು ದೆಹಲಿ ಚಲೋ ನಡೆಸುವುದಾಗಿ ಘೋಷಿಸಿದ್ದಾರೆ. ರೈತ ಹೋರಾಟಕ್ಕೆ ಸ್ಪಂದಿಸದೆ ಮೊಂಡು ಧೋರಣೆ ತಳೆದಿದ್ದ ಕೇಂದ್ರ ಸರ್ಕಾರ, ಇದೀಗ ರೈತ ಹೋರಾಟದ ಎದುರು ಮಂಡಿಯೂರಿದೆ. ಪ್ರತಿಭಟನಾನಿರತ ರೈತರಿಗೆ ಪ್ರಸ್ತಾವನೆ ಕಳಿಸಿದೆ.
ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡಿರುವ ಖನೌರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು, “ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಿಯ ರಂಜನ್ ನೇತೃತ್ವದ ಕೇಂದ್ರ ಸರ್ಕಾರದ ತಂಡವು ಶನಿವಾರ ನಮಗೆ ಪ್ರಸ್ತಾವನೆಯೊಂದನ್ನು ನೀಡಿದೆ. ಅದನ್ನು ನಾವು ಪರಿಶೀಲಿಸುತ್ತಿದ್ದೇವೆ. ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದಲ್ಲೇವಾಲ್ ಅವರನ್ನು ಕೂಡ ತಂಡವು ಭೇಟಿ ಮಾಡಿದೆ” ಎಂದು ತಿಳಿಸಿದ್ದಾರೆ.
“ದಲ್ಲೆವಾಲ್ ಅವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ಇದ್ದು, ಅವರ ಸ್ಥಿತಿಯ ಬಗ್ಗೆ ವಿಚಾರಿಸಲು ಬಂದಿರುವುದಾಗಿ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಸರ್ಕಾರದೊಂದಿಗೆ ಮಾತುಕತೆ ನಡೆಸಲು ರೈತ ಸಂಘಟನೆಗಳಾದ ಎಸ್ಕೆಎಂ ಮತ್ತು ಕೆಎಂಎಂ ನಾಯಕರನ್ನು ಕೇಳಿಕೊಂಡಿದ್ದಾರೆ. ರೈತ ನಾಯಕರೊಂದಿಗೆ ಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿದ್ದಾರೆ” ಎಂದು ರೈತ ನಾಯಕ ಅಭಿಮನ್ಯು ಕೊಹರ್ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ದಲ್ಲೇವಾಲ್ ಉಪವಾಸಕ್ಕೂ ಸ್ಪಂದಿಸದ ಮೋದಿ ಮತ್ತೆ ಮಂಡಿಯೂರುವುದು ಸನ್ನಿಹಿತ!
ಇನ್ನು, ಎಸ್ಕೆಎಂ ಮತ್ತು ಕೆಎಂಎಂ ನಡುವೆ ಒಗ್ಗಟ್ಟು ಮೂಡಿಸಲು ಸಭೆಗಳು ನಡೆಯುತ್ತಿವೆ. ಅವರು (ಎಸ್ಕೆಎಂ) ಕನಿಷ್ಠ ಏಕತೆಯತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ, ನಮ್ಮ ಉದ್ದೇಶ ಗರಿಷ್ಠ ಏಕತೆ ಎಂದು ಕೆಎಂಎಂ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ದಲ್ಲೆವಾಲ್ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಪರಿಗಣಿಸಿ ಮುಂದಿನ ಸಭೆ ಮುಂದೂಡುವಂತೆ ಅವರು ಎಸ್ಕೆಎಂ ಮುಖಂಡರು ಒತ್ತಾಯಿಸಿದ್ದಾರೆ. ಜನವರಿ 24 ರಂದು ನಡೆಯಲಿರುವ ಎಸ್ಕೆಎಂ ಸಾಮಾನ್ಯ ಸಭೆಯ ನಂತರ ಮುಂದಿನ ಸಭೆಯ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.