ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಅಥವಾ ಪಿಎಂಎಲ್‌ಎ ಸೆಕ್ಷನ್ 19ರಡಿ ದೂರಿನ ಪರಿಗಣನೆ ತೆಗೆದುಕೊಂಡಿರುವ ವಿಶೇಷ ನ್ಯಾಯಾಲಯದ ಸಮನ್ಸ್‌ನಂತೆ ಹಾಜರಾಗಿದ್ದರೆ ಆರೋಪಿಯನ್ನು ಜಾರಿ ನಿರ್ದೇಶನಾಲಯ ಬಂಧಿಸುವುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಇಂತಹ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಯು ಮೊದಲು ಕೋರ್ಟ್‌ನ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
“ಅಪರಾಧ ಎಂದು ಪರಿಗಣಿಸಿದ ನಂತರ ದೂರಿನಲ್ಲಿ ಆರೋಪಿ ಎಂದು ತೋರಿಸಲಾದ ವ್ಯಕ್ತಿಯನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಮತ್ತು ಅದರ ಅಧಿಕಾರಿಗಳು ಸೆಕ್ಷನ್ 19ರಡಿಯಲ್ಲಿ ಅಧಿಕಾರವನ್ನು ಚಲಾಯಿಸಲು ಅಶಕ್ತರಾಗಿರುತ್ತಾರೆ” ಎಂದು ನ್ಯಾಯಾಲಯ ತಿಳಿಸಿತು.
ಪಿಎಂಎಲ್‌ಎ ಸೆಕ್ಷನ್ 19 ಕಾಯ್ದೆಯು ಇ.ಡಿ ಅಧಿಕಾರಿಗಳಿಗೆ “ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಂಬಲು ಹೊಂದಿರುವ ದಾಖಲೆಯ(ಬರಹ ರೂಪದಲ್ಲಿ ದಾಖಲಿಸಿರಬೇಕು) ಆಧಾರದ ಮೇಲೆ” ಬಂಧಿಸಲು ಅನುಮತಿಸುತ್ತದೆ. ಬಹು ಮುಖ್ಯವಾಗಿ ಜಾರಿ ನಿರ್ದೇಶನಾಲಯವು ಬಂಧನದ ಕಾರಣವನ್ನು ಸಾಧ್ಯವಾದಷ್ಟು ಬೇಗ ಬಂಧಿಸುವ ವ್ಯಕ್ತಿಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
“ಈ ಪ್ರಕರಣಗಳಲ್ಲಿ ಆರೋಪಿಯ ಬಂಧನವಾಗದಿದ್ದರೆ ಜಾರಿ ನಿರ್ದೇಶನಾಲಯ ದೂರನ್ನು ದಾಖಲಿಸಬೇಕು. ನಂತರ ವಿಶೇಷ ನ್ಯಾಯಾಲಯ ಮೊದಲು ಸಮನ್ಸ್ ಜಾರಿಗೊಳಿಸಬೇಕು. ಸಮನ್ಸ್‌ಗೆ ಆರೋಪಿ ಉತ್ತರ ನೀಡಿದರೆ ಅವರು ಕಸ್ಟಡಿಯಲ್ಲಿದ್ದಾರೆ ಎಂದು ತಿಳಿಯಬಾರದು. ಆರೋಪಿಯನ್ನು ಕಸ್ಟಡಿಗೆ ಪಡೆಯಲು ಅಗತ್ಯವಾದರೆ ವಿಶೇಷ ನ್ಯಾಯಾಲಯದ ಅನುಮತಿಪಡೆಯಬೇಕು” ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ಉಜ್ಜಲ್ ಭಯಾನ್ ಪೀಠ ತೀರ್ಪು ನೀಡಿದೆ.
ಕಸ್ಟಡಿಯ ವಿಚಾರಣೆ ಅಗತ್ಯವಿದೆ ಎಂದು ಕೋರ್ಟ್‌ಗೆ ಮನವರಿಕೆಯಾದರೆ ಮಾತ್ರ ನ್ಯಾಯಾಲಯ ಅನುಮತಿ ನೀಡುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅಪರಾಧ ಪ್ರಕ್ರಿಯೆ ಸಂಹಿತೆಯ 70ನೇ ಸೆಕ್ಷನ್ ಅಡಿ ಬಂಧನದ ವಾರಂಟ್ ನೀಡಬೇಕೆಂದರೆ ಆರೋಪಿ ಸಮನ್ಸ್‌ಗೆ ಉತ್ತರ ನೀಡಲು ವಿಫಲನಾಗಿರಬೇಕು. ನಂತರದ ಸಂದರ್ಭದಲ್ಲಿ ಜಾಮೀನು ಸಹಿತ ವಾರಂಟ್ ಹೊರಡಿಸಬೇಕು.
ಜಾಮೀನಿಗೆ ಸಂಬಂಧಿಸಿದಂತೆ ಆರೋಪಿ ತಪ್ಪಿತಸ್ಥನಲ್ಲ, ಬಿಡುಗಡೆಯಾದ ಬಳಿಕವೂ ಆತ ಅಂತಹ ಅಪರಾಧ ಮಾಡುವ ಸಾಧ್ಯೆಯಿಲ್ಲ ಎಂದು ಮನವರಿಕೆಯಾದರೆ ಜಾಮೀನು ಮಂಜೂರು ಮಾಡಬಹುದು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
