- ಆಪರೇಷನ್ ಕಾವೇರಿ ಮೂಲಕ ಮೊದಲ ಹಂತದಲ್ಲಿ 278 ಜನರ ರಕ್ಷಣೆ
- ಸುಡಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ 72 ಗಂಟೆಗಳ ಕದನ ವಿರಾಮ ಘೋಷಣೆ
‘ಆಪರೇಷನ್ ಕಾವೇರಿ’ ಹೆಸರಿನ ಯೋಜನೆ ಮೂಲಕ ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮೊದಲ ಹಂತದಲ್ಲಿ ರಕ್ಷಿಸಲಾಗಿದೆ ವಿದೇಶಾಂಗ ಸಚಿವಾಲಯ ಮಂಗಳವಾರ (ಏಪ್ರಿಲ್ 25) ಹೇಳಿದೆ.
ಮೊದಲ ಹಂತದ ಕಾರ್ಯಾಚರಣೆಯಲ್ಲಿ ಭಾರತೀಯರನ್ನು ರಕ್ಷಿಸಿ ಭಾರತೀಯ ನೌಕಾಪಡೆಯ ಯುದ್ಧನೌಕೆ ಮೂಲಕ ಸೌದಿ ಅರೇಬಿಯಾದ ಜೆಡ್ಡಾ ಪ್ರದೇಶಕ್ಕೆ ಕರೆತರಲಾಗಿದೆ.
ಈ ಮೂಲಕ ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಿ ತಾಯ್ನಾಡಿಗೆ ಕರೆತರುವ ಪ್ರಯತ್ನ ಭರದಿಂದ ಸಾಗಿದೆ.
ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ನಡುವೆ ನಡೆಯುತ್ತಿರುವ ಹಿಂಸಾಚಾರಕ್ಕೆ 72 ಗಂಟೆಗಳ ಕದನ ವಿರಾಮ ಘೋಷಿಸಿರುವುದರಿಂದ ಆಪರೇಷನ್ ಕಾವೇರಿ ಮೂಲಕ ಭಾರತೀಯರ ರಕ್ಷಣೆಗೆ ಯೋಜನೆ ರೂಪಿಸಲಾಗಿದೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಟ್ವೀಟ್ ಮಾಡಿದ್ದು ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಯುದ್ಧನೌಕೆ ಏರಿದ ಭಾರತೀಯರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಕೆಲವರು ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಮೂಲಕ ತಮ್ಮನ್ನು ರಕ್ಷಿಸಿದ ನೌಕಾಪಡೆಗೆ ಧನ್ಯವಾದ ಸಲ್ಲಿಸಿದರು.
“ಆಪರೇಷನ್ ಕಾವೇರಿ ಮೂಲಕ ಮೊದಲ ಹಂತದಲ್ಲಿ ಸುಡಾನ್‌ನಲ್ಲಿ ಸಿಲುಕಿದ ಭಾರತೀಯರಲ್ಲಿ ಸುಮಾರು 278 ಜನರ ತಂಡವನ್ನು ಸೌದಿ ಅರೇಬಿಯಾದ ಜೆಡ್ಡಾಗೆ ಕರೆತರಲಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಸುಡಾನ್‌ನಿಂದ ರಕ್ಷಿಸಿದ ಭಾರತೀಯರ ತಂಡದಲ್ಲಿ ಮಕ್ಕಳೂ ಇದ್ದಾರೆ.
ಆಪರೇಷನ್ ಕಾವೇರಿ ಭಾಗವಾಗಿ ಭಾರತವು ಜೆಡ್ಡಾನಲ್ಲಿ ಎರಡು ವಿಮಾನ ಮತ್ತು ಸುಡಾನ್ ಬಂದರಿನಲ್ಲಿ ಐಎನ್‌ಎಸ್ ಸುಮೇಧಾ ಇರಿಸಿತ್ತು.
ಸುಡಾನ್‌ನಲ್ಲಿ ಭಾರತ ಮೂಲದ 3,000 ಪ್ರಜೆಗಳು ಸಿಲುಕಿರುವ ಸಾಧ್ಯತೆ ಇದೆ. ಹೀಗಾಗಿ ಇವರೆಲ್ಲರನ್ನೂ ರಕ್ಷಿಸಿ, ತಾಯ್ನಾಡಿಗೆ ಕರೆತರುವ ಕೆಲಸ ಭರದಿಂದ ಸಾಗಿದೆ.
ಸುಡಾನ್ ಸೇನೆ ಹಾಗೂ ಸುಡಾನ್‌ನ ಅರೆಸೇನಾ ಪಡೆಯ ನಡುವೆ ಕಳೆದ 10 ದಿನಗಳಿಂದ ಯುದ್ಧ ನಡೆಯುತ್ತಿದೆ. ಈ ಸೇನಾ ಘರ್ಷಣೆಯಲ್ಲಿ ಕೋಟ್ಯಂತರ ಜನರು ಅಪಾಯದಲ್ಲಿದ್ದಾರೆ. ಭಾರತೀಯ ಸೇನೆ ಹಾಗೂ ಭಾರತ ಸರ್ಕಾರ ಅಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ದೊಡ್ಡ ಪಡೆಯನ್ನು ಅಲ್ಲಿಗೆ ಕಳುಹಿಸಿದೆ.
ಸೌದಿ ಮೂಲಕ ರಕ್ಷಣಾ ಕಾರ್ಯ
ಸುಡಾನ್ ದೇಶಕ್ಕೆ ಸೌದಿ ಅರೇಬಿಯಾ ನೆರೆಯ ರಾಷ್ಟ್ರ. 2 ರಾಷ್ಟ್ರಗಳ ನಡುವೆ ಕೆಂಪು ಸಮುದ್ರ ಹರಡಿಕೊಂಡಿದೆ. ಆದ್ದರಿಂದ ಸೌದಿ ಅರೇಬಿಯಾ ಮೂಲಕ ಭಾರತೀಯರನ್ನು ರಕ್ಷಿಸಿ ಕರೆತರುವ ಕಾರ್ಯ ಮುಂದುವರಿದಿದೆ.
500ಕ್ಕೂ ಹೆಚ್ಚು ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದು, ಶೀಘ್ರದಲ್ಲೇ ತಾಯ್ನಾಡಿಗೆ ಮರಳಲಿದ್ದಾರೆ. ಆಪರೇಷನ್ ಕಾವೇರಿ ಮೂಲಕ ಅವರನ್ನು ಭಾರತಕ್ಕೆ ಕರೆತರುವ ಕಾರ್ಯ ಸಾಗಿದೆ.
ಸುಡಾನ್ ಕಾರ್ಯಾಚರಣೆ ಏಪ್ರಿಲ್ 24ರಿಂದ ಪರಿಣಾಮಕಾರಿಯಾಗಿ ಆರಂಭವಾಗಿದೆ. ಯೋಜನೆಯಂತೆ ಹಕ್ಕಿಪಿಕ್ಕಿ ಜನರನ್ನೂ ರಕ್ಷಿಸಿ ಕರೆತರುವ ಪ್ರಯತ್ನ ಮುಂದುವರಿದಿದೆ. ಈಗಾಗಲೇ ಹಲವು ದೇಶಗಳು ಭಾರತೀಯರನ್ನು ರಕ್ಷಣೆ ಮಾಡಿವೆ. ಸೌದಿ ಅರೇಬಿಯಾ ಕೂಡ ಭಾರತೀಯರನ್ನು ರಕ್ಷಿಸಿ ತಾಯ್ನಾಡಿಗೆ ಕಳುಹಿಸಿ ಕೊಟ್ಟಿದೆ.
ಹಿಂಸಾಚಾರದ ತವರು ಸುಡಾನ್
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಹುದ್ದೆಗೆ ರಾಜನಾಥ್ ಸಿಂಗ್ ಗಂಭೀರ ಅಭ್ಯರ್ಥಿ : ಸತ್ಯಪಾಲ್ ಮಲಿಕ್
1956ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ನಂತರ ದೇಶದಲ್ಲಿ ಮೊದಲ ಬಾರಿಗೆ ಹಿಂಸಾಚಾರ ನಡೆದಿತ್ತು. 1958, 1969, 1985, 1989, 2019 ಮತ್ತು 2021ರಲ್ಲಿ ಸುಡಾನ್ ಭೀಕರ ದಂಗೆ ಹಾಗೂ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.
1989ರಲ್ಲಿ ನಡೆದ ದಂಗೆ ಪರಿಣಾಮ ಒಮರ್ ಅಲ್-ಬಶೀರ್ ಅಧಿಕಾರಕ್ಕೆ ಬಂದಿದ್ದ. ಸತತ 3 ದಶಕಕ್ಕೂ ಹೆಚ್ಚು ಕಾಲ ಈತ ಸರ್ವಾಧಿಕಾರಿಯಾಗಿ ಸುಡಾನ್ ನೆಲವನ್ನು ಆಳಿದ್ದ.