ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನವನ್ನು ವಿರೋಧಿಸಿ ದೆಹಲಿ ವಿಶ್ವವಿದ್ಯಾಲಯದ ಕಲಾ ವಿಭಾಗದಲ್ಲಿ ಪ್ರತಿಭಟನೆಗೆ ಕರೆಕೊಟ್ಟಿದ್ದ ಹಿನ್ನೆಲೆ ಸುಮಾರು 55 ವಿದ್ಯಾರ್ಥಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.
ಎಡ ಪಕ್ಷಗಳ ಅಂಗಸಂಘಟನೆಯಾದ ‘ಎಐಎಸ್‌ಎ’ ವಿದ್ಯಾರ್ಥಿಗಳು ಸಿಎಎ ವಿರುದ್ಧ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರು. ಪ್ರತಿಭಟನೆ ಪ್ರಾರಂಭವಾಗುವ ಮೊದಲೇ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಎಐಎಸ್‌ಎ ಘಟಕದ ಅಧ್ಯಕ್ಷ ಮಾಣಿಕ್ ಗುಪ್ತಾ ಹೇಳಿದ್ದಾರೆ.
ಕಲಾ ವಿಭಾಗದ ಹೊರಗೆ ಸುಮ್ಮನೆ ನಿಂತಿದ್ದ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸದೆ ಇದ್ದ ಅನೇಕ ವಿದ್ಯಾರ್ಥಿಗಳನ್ನು ಪೊಲೀಸರು ಕೇವಲ ಅನುಮಾನದ ಆಧಾರದ ಮೇಲೆ ಬಂಧಿಸಿದ್ದಾರೆ. ವಿದ್ಯಾರ್ಥಿಗಳನ್ನು ಪೊಲೀಸರು ಕ್ರೂರವಾಗಿ ನಡೆಸಿಕೊಂಡಿದ್ದಾರೆ ಎಂದು ಗುಪ್ತಾ ಆರೋಪಿಸಿದ್ದಾರೆ.
“ನಾವು ಸಿಎಎ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದೆಹಲಿ ವಿಶ್ವವಿದ್ಯಾಲಯದ ಕೇಂದ್ರ ಗ್ರಂಥಾಲಯದಿಂದ (ಕಲಾ ವಿಭಾಗದ ಎದುರು) ಸುಮಾರು 50 ರಿಂದ 55 ವಿದ್ಯಾರ್ಥಿಗಳನ್ನು ಬಂಧಿಸಿದ್ದೇವೆ. ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಗುವುದು” ಎಂದು ದೆಹಲಿ ಉತ್ತರ ಡಿಸಿಪಿ ಎಂ.ಕೆ ಮೀನಾ ತಿಳಿಸಿದ್ದಾರೆ.
“ನಾವು ಎಲ್ಲಾ ವೀಡಿಯೊ-ರೆಕಾರ್ಡ್ ಮಾಡಿರುವುದರಿಂದ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂಬ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ” ಎಂದು ಅವರು ಹೇಳಿದ್ದಾರೆ.
ಸಿಎಎಗೆ ಸೂಚನೆ ನೀಡಿದ ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸೇರಿದಂತೆ ಇತರ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಲ್ಲಿ ಪ್ರತಿಭಟನೆಗಳು ನಡೆದಿವೆ.