ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ (JMISU) ಚುನಾವಣೆಯನ್ನು ಪುನರಾರಂಭಿಸಬೇಕು, ಪೂರ್ಣಪ್ರಮಾಣದ ವೇಳಾಪಟ್ಟಿಯನ್ನು ತಕ್ಷಣವೇ ಪ್ರಕಟಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯನ್ನು ಬೆಂಬಲಿಸಲು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಮತ್ತು ಸಮಾಜವಾದಿ ಪಾರ್ಟಿ (ಎಸ್‌ಪಿ) ಸಂಸದ ಮೊಹಿಬುಲ್ಲಾ ನದ್ವಿ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ಟೋಬರ್ 12ರಿಂದ ಪ್ರತಿಭಟನೆ ಆರಂಭಿಸಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮರುಸ್ಥಾಪನೆಗೆ ಒತ್ತಾಯಿಸುತ್ತಿದ್ದಾರೆ. ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ 2006ರಲ್ಲಿ ವಿದ್ಯಾರ್ಥಿ ಸಂಘವನ್ನು ವಿಸರ್ಜಿಸಲಾಗಿದ್ದು, 2005ರಿಂದೀಚೆಗೆ ಯಾವುದೇ ಚುನಾವಣೆಗಳು ನಡೆದಿಲ್ಲ. ಪ್ರಜಾಸತ್ತಾತ್ಮಕ ಪ್ರಾತಿನಿಧ್ಯದ ಕೊರತೆಯಿಂದಾಗಿ ಶೈಕ್ಷಣಿಕ ಸೌಲಭ್ಯಗಳು, ಹಾಸ್ಟೆಲ್ ವ್ಯವಸ್ಥೆ, ಹಾಜರಾತಿ ನಿಯಮಗಳು, ಸಂಶೋಧನಾ ವೇತನ ಹಾಗೂ ವಿದ್ಯಾರ್ಥಿವೇತನದಂತಹ ಮೂಲಭೂತ ಸಮಸ್ಯೆಗಳನ್ನು ಆಡಳಿತ ಮಂಡಳಿಯ ಗಮನಕ್ಕೆ ತರಲು ವೇದಿಕೆಯಿಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಬಂದಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರನ್ನು ಪೊಲೀಸರು ಆವರಣದ ಹೊರಭಾಗದಲ್ಲೇ ವಶಕ್ಕೆ ಪಡೆದರು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಬೆಂಬಲಿಸಿ ಮಾತನಾಡಿದ ಮಸೂದ್, “ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ. ಅವರ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿ ಸಂಘವನ್ನು ಪುನಃ ಸ್ಥಾಪಿಸಲು ಆಡಳಿತ ಮಂಡಳಿಗೆ ಏನು ಸಮಸ್ಯೆ” ಎಂದು ಪ್ರಶ್ನಿಸಿದ್ದರು.
ಅದೇ ರೀತಿ, ಜಾಮಿಯಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೂ ಆಗಿರುವ ಸಮಾಜವಾದಿ ಪಾರ್ಟಿ ಸಂಸದ ಮೊಹಿಬುಲ್ಲಾ ನದ್ವಿ ಅವರನ್ನೂ ಪೊಲೀಸರು ದಾರಿಯಲ್ಲೇ ತಡೆದು ವಶಕ್ಕೆ ಪಡೆದುಕೊಂಡಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?
ಪರಿಸ್ಥಿತಿಯನ್ನು ನಿಭಾಯಿಸಲು ವಿಶ್ವವಿದ್ಯಾಲಯ ಆಡಳಿತವು ಹೊಸ ವಿದ್ಯಾರ್ಥಿ ಸಂಘದ ಸಂವಿಧಾನ ರಚನೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಆದರೂ, ಕೇವಲ ಸಮಿತಿ ರಚನೆಯಿಂದ ತೃಪ್ತರಾಗದ ವಿದ್ಯಾರ್ಥಿಗಳು ತಕ್ಷಣವೇ ಅಧಿಕೃತ ಚುನಾವಣೆ ದಿನಾಂಕ ಮತ್ತು ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.




