ಪಂಜಾಬ್‌ನ ಮಹಾನ್ ಹುತಾತ್ಮರಿಗೆ ಬಿಜೆಪಿಯ ‘ಒಎನ್‌ಸಿ’ ಅಗತ್ಯವಿಲ್ಲ. ದೇಶಭಕ್ತರು ನಮ್ಮ ರಾಷ್ಟ್ರೀಯ ನಾಯಕರು ಎಂದು ಹೇಳಿರುವ ಪಂಚಾಜ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್, ಕೇಂದ್ರ ಸರ್ಕಾರದ ವಿರುದ್ಧ ಕಿಡಕಾರಿದ್ದಾರೆ.
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ಗೆ ಪಂಜಾಬ್ ಸರ್ಕಾರ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ರಾಜಗುರು, ಸುಖದೇವ್, ಲಾಲಾ ಲಜಪತ್ ರಾಯ್, ಉಧಮ್ ಸಿಂಗ್, ಕರ್ತಾರ್ ಸಿಂಗ್ ಸರಭಾ, ಮೈ ಭಾಗೋ, ಗಾದ್ರಿ ಬಾಬೆ ಸೇರಿದಂತೆ ಮಹಾನ್ ಹತಾತ್ಮರ ಟ್ಯಾಬ್ಲೊವನ್ನು ಕಳಿಸಲು ನಿರ್ಧರಿಸಿತ್ತು. ಅದರೆ, ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯ ಆ ಟ್ಯಾಬ್ಲೋವನ್ನು ಪರೇಡ್ ಪಟ್ಟಿಯಲ್ಲಿ ಸೇರಿಸಲು ನಿರಾಕರಿಸಿದೆ. ಅಲ್ಲದೆ, ಕೆಂಪುಕೋಟೆಯಲ್ಲಿ ಜನವರಿ 23ರಿಂದ 31ರವರೆಗೆ ನಡೆಯುವ ‘ಭಾರತ್ ಪರ್ವ್’ ಸಮಯದಲ್ಲಿ ಅದನ್ನು ಪ್ರದರ್ಶಿಸಲು ಆಹ್ವಾನಿಸಿದೆ.
ಕೇಂದ್ರದ ನಡೆಯನ್ನು ಖಂಡಿಸಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ಪಂಜಾಬ್‌ನ ಟ್ಯಾಬ್ಲೋವನ್ನು ‘ತಿರಸ್ಕೃತ ವರ್ಗ’ದಲ್ಲಿ ಪ್ರದರ್ಶಿಸಲು ಸಾಧ್ಯವೇ ಇಲ್ಲ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಂಜಾನ್ ಟ್ಯಾಬ್ಲೋಗಳನ್ನು ಸೇರಿಸದೆ ಕೇಂದ್ರ ಸರ್ಕಾರ ಸ್ವಾತಂತ್ರ್ಯ ವೀರರ ಕೊಡುಗೆ ಮತ್ತು ತ್ಯಾಗವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದು ಈ ಮಹಾನ್ ಹುತಾತ್ಮರಿಗೆ ಮಾಡಿದ ಘೋರ ಅವಮಾನವಾಗಿದೆ” ಕಿಡಿಕಾರಿದೆ.
“ರಾಜ್ಯ ಸರ್ಕಾರವು ತಮ್ಮ ವೀರರನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರದ ಬೆಂಬಲ ಅಗತ್ಯವಿಲ್ಲ. ಅವರಿಗೆ ಗೌರವ ಸಲ್ಲಿಸಲು ಪಂಚಾಜ್ ಸರ್ಕಾರ ಸಾಕಷ್ಟು ಸಮರ್ಥವಾಗಿದೆ” ಎಂದು ಹೇಳಿದೆ.
ಟ್ಯಾಬ್ಲೋ ವಿವಾದ ಸಂಬಂಧ ಪ್ರತಿಕ್ರಿಯಿಸಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನಿಲ್ ಜಾಖರ್, “ಸಮಸ್ಯೆಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ರಾಜಕೀಯಗೊಳಿಸುತ್ತಿದ್ದಾರೆ. ಪಂಜಾಬ್‌ನ ಟ್ಯಾಬ್ಲೋ ಅದರ ‘ಕಚ್ಚಾ’ ತಯಾರಿಕೆಯಿಂದಾಗಿ ಶಾರ್ಟ್‌ಲಿಸ್ಟ್‌ನಲ್ಲಿ ಸೇರ್ಪಡೆಯಾಗಿಲ್ಲ” ಎಂದು ಹೇಳಿದ್ದಾರೆ. ಅಲ್ಲದೆ, ಟ್ಯಾಬ್ಲೋದಲ್ಲಿ ಮಾನ್ ಮತ್ತು ಕೇಜ್ರಿವಾಲ್ ಅವರ ಫೋಟೋಗಳನ್ನು ಇರಿಸಲು ಎಎಪಿ ಬಯಸಿದೆ ಎಂದು ಆರೋಪಿಸಿದ್ದಾರೆ. ಟ್ಯಾಬ್ಲೋ ನಿರಾಕರಣೆಗೆ ಇದೂ ಒಂದು ಕಾರಣವಾಗಿದೆ ಎಂದು ಅಹೇಳಿದ್ದಾರೆ.
“ನನ್ನ ಮತ್ತು ಕೇಜ್ರಿವಾಲ್ ಅವರ ಫೋಟೋಗಳನ್ನು ಟ್ಯಾಬ್ಲೋದಲ್ಲಿ ಇರಿಸಲು ಬಯಸಿದ್ದೆವು ಎಂಬುದಕ್ಕೆ ಜಾಖರ್ ಅವರು ಪುರಾವೆ ನೀಡಬೇಕು. ಜಾಖರ್ ತಮ್ಮ ಆರೋಪ ಸಾಬೀತುಪಡಿಸಿದರೆ, ನಾನು ರಾಜಕೀಯ ತೊರೆಯುತ್ತೇನೆ. ಅವರು ವಿಫಲವಾದರೆ ಅವರು ಪಂಚಾಬ್‌ಗೆ ಪ್ರವೇಶಿಸಬಾರದು” ಎಂದು ಮುಖ್ಯಮಂತ್ರಿ ಭಗವತ್ ಮಾನ್ ಸವಾಲು ಹಾಕಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರು ಯಾವ ಟ್ಯಾಬ್ಲೋವನ್ನು ತೋರಿಸಬೇಕು ಮತ್ತು ಯಾವುದನ್ನು ಪ್ರದರ್ಶಿಸಬಾರದು ಎಂಬುದನ್ನು ಆಯ್ಕೆ ಮಾಡುತ್ತಾರೆ” ಎಂದು ಭಗವಂತ್ ಮಾನ್ ಹೇಳಿದ್ದಾರೆ.
ಏತನ್ಮಧ್ಯೆ, ರಕ್ಷಣಾ ಸಚಿವಾಲಯದ ಮೂಲಗಳು ಟ್ಯಾಬ್ಲೋ ಆಯ್ಕೆಯ ಬಗ್ಗೆ ಹೇಳಿಕೆ ನೀಡಿವೆ. “ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮ ಟ್ಯಾಬ್ಲೋಗಳನ್ನು ಪ್ರದರ್ಶಿಸಲು ಪ್ರಸ್ತಾವನೆ ನೀಡಿವೆ. ಆ ಪ್ರಸ್ತಾವನೆಗಳನ್ನು ಕಲೆ, ಸಂಸ್ಕೃತಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ, ವಾಸ್ತುಶಿಲ್ಪ, ನೃತ್ಯ ಹಾಗೂ ವಿವಿಧ ಕ್ಷೇತ್ರದಲ್ಲಿನ ಗಣ್ಯ ವ್ಯಕ್ತಿಗಳು ಸೇರಿದಂತೆ ಇತ್ಯಾದಿ ಸಂಯೋಜನೆಗಳೊಂದಿಗೆ ಟ್ಯಾಬ್ಲೋಗಳ ಆಯ್ಕೆಗೆ ತಜ್ಷರ ಸಮಿತಿ ಸರಣಿ ಸಭೆಯಗಳನ್ನು ನಡೆಸಿದೆ. ಪರಿಣಿತ ಸಮಿತಿಯು ತನ್ನ ಶಿಫಾರಸುಗಳನ್ನು ಮಾಡುವ ಮೊದಲು ಥೀಮ್, ಪರಿಕಲ್ಪನೆ, ವಿನ್ಯಾಸ ಮತ್ತು ಅದರ ದೃಶ್ಯ ಪ್ರಭಾವದ ಆಧಾರದ ಮೇಲೆ ಪ್ರಸ್ತಾಪಗಳನ್ನು ಪರಿಶೀಲಿಸುತ್ತದೆ” ಎಂದು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ರಾಮ ಮಂದಿರ ಉದ್ಘಾಟನೆಗೆ ಸೋನಿಯಾ ಗಾಂಧಿ, ಖರ್ಗೆ ಭಾಗಿಯಾಗುವ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧರಿಸುತ್ತೇವೆ: ಕಾಂಗ್ರೆಸ್
“ತಜ್ಞ ಸಮಿತಿಯ ಮೊದಲ ಮೂರು ಸುತ್ತಿನ ಸಭೆಗಳಲ್ಲಿ ಪಂಜಾಬ್‌ನ ಟ್ಯಾಬ್ಲೋವನ್ನು ಪರಿಗಣಿಸಲಾಗಿದೆ. ಮೂರನೇ ಸುತ್ತಿನ ಸಭೆಯ ನಂತರ, ಪಂಜಾಬ್‌ನ ಟ್ಯಾಬ್ಲೋವನ್ನು ಕೆಲವು ವಿಷಯಗಳಿಗೆ ಹೊಂದಿಕೆಯಾಗದ ಕಾರಣ ಸಮಿತಿಯು ಗಣನೆಯಿಂದ ಹೊರಗಿಟ್ಟಿದೆ” ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಕಳೆದ ಎಂಟು ವರ್ಷಗಳಲ್ಲಿ ಪಂಜಾಬ್‌ನ ಟ್ಯಾಬ್ಲೋ ಆರು ಬಾರಿ ಗಣರಾಜ್ಯೋತ್ಸವ ಪರೇಡ್‌ಗೆ ಶಾರ್ಟ್‌ಲಿಸ್ಟ್ ಆಗಿದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.
ರಕ್ಷಣಾ ಸಚಿವಾಲಯದ ವಿವರಣೆಯನ್ನು ಉಲ್ಲೇಖಿಸಿ ಮಾತನಾಡಿರುವ ಎಎಪಿ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, “ಬಿಜೆಪಿ ನಾಯಕ ಜಖರ್ ಅವರ ಆರೋಪಗಳು ಸುಳ್ಳೆಂಬುದು ಈಗ ಬಹಿರಂಗವಾಗಿದೆ. ಕೇಜ್ರಿವಾಲ್ ಮತ್ತು ಮಾನ್ ಅವರ ಫೋಟೋಗಳ ಕಾರಣಕ್ಕೆ ತಿರಸ್ಕರಿಸಲಾಗಿದೆ ಎಂದು ಆರೋಪಿಸಿ ಪಂಜಾಬ್ ಜನರ ದಾರಿ ತಪ್ಪಿಸುವ ಬಿಜೆಪಿ ಪ್ರಯತ್ನವು ಈಗ ಹೊಣೆಗಾರಿಕೆಯನ್ನು ಕೋರುತ್ತದೆ.” ಎಂದು ಹೇಳಿದ್ದಾರೆ.