ಇತ್ತೀಚೆಗೆ ಪಂಜಾಬ್ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ನಂತರ 41 ಮಂದಿ ಸಾವನ್ನಪ್ಪಿದ್ದು, 1,616 ಜನರು 173 ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫಿರೋಜ್‌ಪುರ್, ಫರೀದ್‌ಕೋಟ್, ರೂಪನಗರ, ಪಟಿಯಾಲ, ಜಲಂಧರ್ ಸೇರಿದಂತೆ ಹತ್ತೊಂಬತ್ತು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಸರ್ಕಾರ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗಳು 27,286 ಜನರನ್ನು ಜಲಾವೃತ ಪ್ರದೇಶಗಳಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಂದಾಯ ಇಲಾಖೆ ವರದಿ ಪ್ರಕಾರ ಪ್ರವಾಹದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ಹಲವಾರು ಜಿಲ್ಲೆಗಳು ಇತ್ತೀಚಿಗೆ ಭಾರೀ ಮಳೆಯಿಂದ ಜರ್ಜರಿತವಾಗಿದ್ದು, ಇದು ದೈನಂದಿನ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ಅಲ್ಲದೆ ಅಪಾರ ಪ್ರಮಾಣದ ವಸತಿ ಮತ್ತು ಕೃಷಿ ಭೂಮಿ ಜಲಾವೃತಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಇಡಿ, ಸಿಬಿಐ, ಐಟಿ ಇಲಾಖೆಗಳೇ ಎನ್‌ಡಿಎ ನಿಜವಾದ ಶಕ್ತಿ: ಉದ್ಧವ್ ಠಾಕ್ರೆ ವಾಗ್ದಾಳಿ
ಪ್ರವಾಹದಿಂದ ಹಾನಿಗೊಳಗಾದ ಎಲ್ಲ 595 ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ. ಪ್ರವಾಹವು ಪಂಜಾಬ್‌ನ ವಿದ್ಯುತ್ ನಿಗಮ ಸಂಸ್ಥೆಯ ಆಸ್ತಿಗಳಿಗೂ ಗಮನಾರ್ಹ ಹಾನಿಯನ್ನುಂಟು ಮಾಡಿದೆ ಎಂದು ಪಂಜಾಬ್ ವಿದ್ಯುತ್ ಸಚಿವ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಪ್ರವಾಹದಿಂದಾಗಿ ಸುಮಾರು 16 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಾನಿಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳ ಉಪಕೇಂದ್ರಗಳು ಸೇರಿವೆ.
“ಮೂಲಸೌಕರ್ಯಗಳ ನಷ್ಟದಿಂದ ಪ್ರವಾಹ ಪೀಡಿತ ಪ್ರದೇಶಗಳ ವಿದ್ಯುತ್ ಸರಬರಾಜಿನ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಜಲಾವೃತ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲು ಪಂಜಾಬ್ ವಿದ್ಯುತ್ ನಿಗಮ ಹಗಲಿರುಳು ಕೆಲಸ ಮಾಡುತ್ತಿದೆ” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.