ಯುವಕನೊಬ್ಬ ತನ್ನ ಪ್ರಿಯತಮೆಗಾಗಿ ಮಹಿಳೆಯ ವೇಷ ತೊಟ್ಟು ಸರ್ಕಾರಿ ಉದ್ಯೋಗದ ಪರೀಕ್ಷೆಯನ್ನು ಬರೆಯಲು ಬಂದ ಘಟನೆ ಪಂಜಾಬ್ ರಾಜ್ಯದಲ್ಲಿ ನಡೆದಿದೆ.
ಪಂಜಾಬ್ ಫರೀದಾಕೋಟ್‌ನ ಡಿಎವಿ ಶಾಲೆಯಲ್ಲಿ ಜನವರಿ 7 ರಂದು ಈ ಘಟನೆ ನಡೆದಿದ್ದು ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿವಿಯ ಬಹುಸೇವಾ ಆರೋಗ್ಯ ಕಾರ್ಯಕರ್ತೆ ಹುದ್ದೆಗೆ ಪುರುಷನೊಬ್ಬ ಮಹಿಳೆಯ ವೇಷ ತೊಟ್ಟು ಪರೀಕ್ಷೆ ಬರೆಯಲು ಬಂದಿದ್ದಾನೆ.
ಆರೋಪಿ ಅಂಗ್ರೇಜ್ ಸಿಂಗ್ ತನ್ನ ಪ್ರಿಯತಮೆ ಪರಮ್‌ಜಿತ್ ಕೌರ್ ಹೆಸರಿನಲ್ಲಿ ಆಕೆಯ ಪರವಾಗಿ ಮಹಿಳೆಯ ವೇಷ ತೊಟ್ಟು ಪರೀಕ್ಷೆ ಬರೆಯಲು ನಿರ್ಧರಿಸಿದ್ದ. ಸಂಪೂರ್ಣ ಮಹಿಳೆಯ ರೀತಿ ಕಾಣಲು ಅಂಗ್ರೇಜ್ ಸಿಂಗ್ ಕೆಂಪು ಬಳೆಗಳು, ಲಿಪ್‌ಸ್ಟಿಕ್ ಹಾಗೂ ಬಿಂದಿ ಧರಿಸಿದ್ದ. ಅಲ್ಲದೆ ಮಹಿಳೆಯ ಉಡುಪನ್ನು ಧರಿಸಿದ್ದ.
ಆದಾಗ್ಯೂ, ಪರೀಕ್ಷಾಧಿಕಾರಿಗಳು ಶೀಘ್ರವಾಗಿ ಆತನ ನಿಜ ಸ್ವರೂಪವನ್ನು ಪತ್ತೆ ಹಚ್ಚಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ತಾನು ಮಹಿಳೆ ಎಂದು ಸಾಬೀತುಪಡಿಸುವ ಸಲುವಾಗಿ ಪ್ರಿಯತಮೆಯ ಹೆಸರಿನಲ್ಲಿ ನಕಲಿ ಚುನಾವಣಾ ಹಾಗೂ ಆಧಾರ್ ಗುರುತು ಪತ್ರವನ್ನು ತಯಾರಿಸಿಕೊಂಡಿದ್ದ. ಆದರೆ ಎಲ್ಲವೂ ಸರಿಯಾಗಿ ಆತನ ಅದೃಷ್ಟ ಕೆಟ್ಟಿದ್ದು ಬೆರಳಚ್ಚು ಪರೀಕ್ಷೆಯ ಸಂದರ್ಭದಲ್ಲಿ. ಬಯೋ ಮೆಟ್ರಿಕ್ ಯಂತ್ರವು ಆರೋಪಿಯ ನಿಜ ಬಂಡವಾಳವನ್ನು ಬಯಲು ಮಾಡಿತ್ತು.
ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಆತನ ಗೆಳತಿ ಅಭ್ಯರ್ಥಿ ಪರಮ್‌ಜಿತ್ ಅರ್ಜಿಯನ್ನು ಆಡಳಿತ ಮಂಡಳಿ ತಿರಸ್ಕರಿಸಿದೆ.
“ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿವಿಯಿಂದ ದೂರನ್ನು ಸ್ವೀಕರಿಸಲಾಗಿದ್ದು, ಘಟನೆಯ ಬಗ್ಗೆ ತನಿಖೆಯನ್ನು ನೆಡಸುತ್ತಿದ್ದೇವೆ.ವಿಚಾರಣೆ ಪೂರ್ಣಗೊಂಡ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.
ನಕಲಿ ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಳ್ಳುವುದು ಗಂಭಿರ ಪ್ರಕರಣವಾಗಿದ್ದು, 2011ರಲ್ಲಿಇದೇ ರೀತಿಯ ಪ್ರಕರಣ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿತ್ತು. ಪದವೀಧರನೊಬ್ಬ 12ನೇ ತರಗತಿಯ ವಿದ್ಯಾರ್ಥಿಯ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದ. ಮೇಲ್ವೀಚಾರಕರು ಆರೋಪಿಯನ್ನು ಪತ್ತೆಹಚ್ಚಿದ್ದರು.