ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ

Date:

ಸಂಘ ಪರಿವಾರ ಮತ್ತು ಬಿಜೆಪಿ, ತಾನೇ ಬಿತ್ತಿದ ಬೆಂಕಿ ತನ್ನನ್ನೇ ಸುಡತೊಡಗಿದಾಗ ಎಚ್ಚರಗೊಂಡಿದೆ. ಈಗ ಈ ಬೆಂಕಿಯ ಅಗತ್ಯವಿಲ್ಲವೆಂದು ದೂರ ಇಟ್ಟಿದೆ. ವಿಚಲಿತರಾದ ಬೆಂಕಿ ಬಾಲಕ ಅನಂತಕುಮಾರ್ ಹೆಗಡೆ , ವಿಕ್ಷಿಪ್ತರಾಗಿ ಒದರಾಡುತ್ತಿದ್ದಾರೆ. ಆ ಒದರಾಟವನ್ನು ಬಿಜೆಪಿಗರೇ ಖಂಡಿಸುತ್ತಿದ್ದಾರೆ. ಇದು, ಬಿಜೆಪಿಯವರಿಂದ ಬಿಜೆಪಿಗಾಗಿ ನಡೆಯುತ್ತಿರುವ ಬಿಜೆಪಿಯ ಭಂಡಾಟ ಮತ್ತು ಜನಿವಾರದಾಟ.

ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದ ಅನಂತಕುಮಾರ್‌ ಹೆಗಡೆ ಕಳೆದ ನಾಲ್ಕೂವರೆ ವರ್ಷಗಳ ಸುದೀರ್ಘ ನಿದ್ರೆಯಿಂದ ಎದ್ದಿದ್ದಾರೆ. ಮಲಗಿದ್ದನ್ನು ಮರೆಮಾಚಲು, ಶ್ರೀರಾಮನನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ʼನೀನು ಬಾ, ಇಲ್ಲ ಅಂದ್ರೆ ಬಿಡು, ರಾಮಮಂದಿರ ನಿಲ್ಲಲ್ಲ ಮಗನೇ’ ಎಂದು ಏಕವಚನದಲ್ಲಿ ಸಿಗಿದುಹಾಕಿದ್ದಾರೆ.

ಇದು ಒಬ್ಬ ಜವಾಬ್ದಾರಿಯುತ ಸಂಸದ ಮಾತನಾಡುವ ಭಾಷೆಯೇ? ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ, ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿ, ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವರಿಗೆ ಗೌರವ ತೋರಲಿಲ್ಲವೆಂದರೆ, ಅದು ಈ ನೆಲದ ಕಾನೂನಿಗೆ, ಸಂವಿಧಾನಕ್ಕೆ ಬಗೆದ ದ್ರೋಹವಲ್ಲವೇ? ಸಂಸದರಾಗಿ ಆಯ್ಕೆಯಾದ ವ್ಯಕ್ತಿ, ಕೇಂದ್ರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಮನುಷ್ಯ ಇಷ್ಟು ಕೀಳಾಗಿ ಮಾತನಾಡುತ್ತಾರೆಂದರೆ, ಅದು ತಮ್ಮನ್ನು ಆರಿಸಿ ಕಳಿಸಿದ ಮತದಾರರ ಮರ್ಯಾದೆ ತೆಗೆದಂತಲ್ಲವೇ?

ಪ್ರಚೋದನಾಕಾರಿ ಭಾಷಣದ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸಿದ ಅನಂತಕುಮಾರ ಹೆಗಡೆ ವಿರುದ್ಧ ಕುಮಟಾ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆ, ಸಮಾಜದ ಅಶಾಂತಿಗೆ ಕಾರಣವಾಗುವ ಹೇಳಿಕೆ ಹಿನ್ನೆಲೆಯಲ್ಲಿ ಅನಂತಕುಮಾರ್‌ ಹೆಗಡೆ ವಿರುದ್ಧ ಸೆಕ್ಷನ್ 153ಎ, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದೇವರು, ಧರ್ಮ, ದೇಶ ಎಂದಾಕ್ಷಣ ಗುತ್ತಿಗೆ ಹಿಡಿದವರಂತೆ ಎದೆಯುಬ್ಬಿಸಿ ಮಾತನಾಡುವ ಬಿಜೆಪಿ ನಾಯಕರಿಗೆ, ಎಲುಬಿಲ್ಲದ ನಾಲಗೆಯಿಂದ ಏನು ಬೇಕಾದರೂ ಮಾತನಾಡಬಹುದು, ಮಾತನಾಡಿಯೂ ದಕ್ಕಿಸಿಕೊಳ್ಳಬಹುದೆಂಬುದು ಅವರ ಮಾನಸಿಕತೆ. ಅದಕ್ಕೆ ಬೇಕಾದ ಸಿದ್ಧತೆಯನ್ನು, ಸರಕನ್ನು, ಸಮಜಾಯಿಷಿಯನ್ನು ಸಂಘಪರಿವಾರ ಒದಗಿಸುತ್ತದೆ. ಹಾಗೆ ಮಾತನಾಡುವವರನ್ನು ಉತ್ತೇಜಿಸುತ್ತದೆ. ಮೋದಿ ಮಾಧ್ಯಮ ಅದನ್ನು ನಿಭಾಯಿಸುತ್ತದೆ.

ಇದನ್ನು ಮೈಗೂಡಿಸಿಕೊಂಡ ಅನಂತಕುಮಾರ್ ಹೆಗಡೆ, ಮಹಾತ್ಮಾ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನು ನಾಟಕ ಎಂದರು. ಕೊಲೆಗಡುಕ ಗೋಡ್ಸೆಯನ್ನು ಗೌರವಿಸಿದರು. ಸಂವಿಧಾನವನ್ನು ಬದಲಿಸಲು ಬಂದಿದ್ದೇವೆ ಎಂದು ಬಹಿರಂಗವಾಗಿ ಹೇಳಿದರು. ರಾಹುಲ್‌ ಗಾಂಧಿಯನ್ನು ಕಾಂಗ್ರೆಸ್‌ ಪ್ರಯೋಗಾಲಯದ ಹೈಬ್ರಿಡ್‌ ಉತ್ಪನ್ನ ಎಂದು ಲೇವಡಿ ಮಾಡಿದರು. ಮುಸ್ಲಿಮರನ್ನು ದೇಶದ್ರೋಹಿಗಳಂತೆ ಚಿತ್ರಿಸಿ, ರಣಭೈರವ ಎದ್ದಾಗಿದೆ, ಸಾವಿರ ವರ್ಷದ ಸೇಡನ್ನು ತೀರಿಸಿಕೊಳ್ಳದಿದ್ದರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಆರ್ಭಟಿಸಿದರು. ಮಸೀದಿಗಳನ್ನು ಕೆಡವಲು ಕರೆ ಕೊಟ್ಟರು. ಕರಪಾತ್ರಿ ಮಹಾರಾಜರು ಇಂದಿರಾ ಗಾಂಧಿಗೆ ಶಾಪ ಕೊಟ್ಟಿದ್ದಾರೆ, ಅವರ ಕುಟುಂಬದವರೆಲ್ಲ ಗೋಪಾಷ್ಟಮಿಯಂದೇ ಸತ್ತರು ಎಂದು ಹಸೀ ಸುಳ್ಳು ಹೇಳಿದರು. ಸುಳ್ಳು ಹೇಳಿಯೂ ಸತ್ಯಸಂಧನಂತೆ ಪೋಸು ಕೊಟ್ಟರು.

1996ರಿಂದ ಇಲ್ಲಿಯವರೆಗೆ, ಒಂದು ಸಲ ಸೋತು, ಆರು ಸಲ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್‌ ಹೆಗಡೆಗೆ, ಗೆಲುವಿನ ಗರ ಬಡಿದಿದೆ. ಜಾತಿ ಅಹಂಕಾರ ಅಮರಿಕೊಂಡಿದೆ. ಕೊಳಕು ಮಾತಿಗೆ, ಉಗ್ರ ವರ್ತನೆಗೆ, ದ್ವೇಷಾಸೂಯೆ ಬಿತ್ತನೆಗೆ ಬಿಜೆಪಿ ಮತ್ತು ಸಂಘಪರಿವಾರ ಕುಮ್ಮಕ್ಕು ಕೊಟ್ಟಿದೆ.

ಭಾರತೀಯರ ಮನಸ್ಸಿನಲ್ಲಿ ಮುಸ್ಲಿಂ ದ್ವೇಷ ಎನ್ನುವುದು ರಕ್ತ-ಮಾಂಸದಂತೆ ಬೆರೆತುಹೋಗಿದೆ. ಅದನ್ನು ಬಿಜೆಪಿ ಮತ್ತು ಸಂಘಪರಿವಾರ ತನಗೆ ಬೇಕಾದಾಗಲೆಲ್ಲ ಬಡಿದೆಬ್ಬಿಸಿ, ಬೆಂಕಿ ಹಚ್ಚಿ, ಆ ಬೆಂಕಿಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಲೇ ಬಂದಿದೆ. ಇಡೀ ದೇಶವನ್ನು ಕೇಸರಿಮಯ ಮಾಡಿದೆ. ಶ್ರೀರಾಮನ ಭಜನೆಯಲ್ಲಿ ಬಂಧಿಸಿಡಲು ನೋಡುತ್ತಿದೆ. 2024ರಲ್ಲಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಲು ಹವಣಿಸುತ್ತಿದೆ.

ಈ ಸುಳಿವನ್ನರಿತ ಅನಂತಕುಮಾರ್‌ ಹೆಗಡೆ, ರಾಜಕೀಯದ ಸಹವಾಸವೇ ಬೇಡವೆಂದು ನಿವೃತ್ತಿ ಘೋಷಿಸಿದ್ದವರು, ಶ್ರೀರಾಮ ಮತ್ತು ಮೋದಿ ಆರ್ಭಟ ನೋಡಿ, ಅವರ ಮರೆಯಲ್ಲಿ ಮತ್ತೆ ಸಂಸದನಾಗಬಹುದೆಂದು ಬಿಲದಿಂದ ಹೊರಬಂದಿದ್ದಾರೆ, ಬೆಂಕಿ ಉಗುಳುತ್ತಿದ್ದಾರೆ. ಆದರೆ ಈ ಬಾರಿ ಆ ಬೆಂಕಿ- ಅವರನ್ನೇ ಸುಡತೊಡಗಿದೆ. ಹೆಗಡೆ 2018ರಲ್ಲಿ ಸಂವಿಧಾನದ ವಿರುದ್ಧ ಮಾತನಾಡಿದರು. 2019ರಲ್ಲಿ ಮತ್ತೊಮ್ಮೆ ಗೆದ್ದ ಮೋದಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ರಚಿತ ಸಂವಿಧಾನವನ್ನು ಕಣ್ಣಿಗೊತ್ತಿಕೊಂಡು ಗೌರವಿಸಿದ್ದರು. ಇದಾದ ಕೆಲ ದಿನಗಳಲ್ಲಿಯೇ ಹೆಗಡೆ ಸಚಿವ ಸ್ಥಾನ ಕಳೆದುಕೊಂಡರು. ಕ್ಷೇತ್ರದ ಜನತೆಯ ಮುಂದೆ ಮಾನ ಹೋಗದಿರಲಿ ಎಂದು ನಿವೃತ್ತಿಯ ಸೋಗು ಹಾಕಿದ್ದರು.

ಅನಂತಕುಮಾರ್ ಹೆಗಡೆ ಅಂಚಿಗೆ ಸರಿಯುವುದನ್ನೇ ಕಾಯುತ್ತಿದ್ದ ಕರ್ನಾಟಕದ ಉಸ್ತುವಾರಿ ಹೊತ್ತ ಸಂಘಿ ಸಂತೋಷ್ ಮತ್ತು ಪ್ರಲ್ಹಾದ್ ಜೋಶಿ, ಮುನ್ನಲೆಗೆ ಬಂದರು. ರಾಜ್ಯ ಬಿಜೆಪಿಯನ್ನು ಹಿಡಿತಕ್ಕೆ ತೆಗೆದುಕೊಂಡರು. ಅನಂತಕುಮಾರ್ ಹೆಗಡೆ ವಿರುದ್ಧ ಕಾಗೇರಿ ಮತ್ತು ಕೋಣೆಮನೆಯ ಮೂಗಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ತುಪ್ಪ ಸವರಿದರು. ಇದು ನಿಚ್ಚಳವಾಗಿ ಬ್ರಾಹ್ಮಣರ ವಿರುದ್ಧ ಬ್ರಾಹ್ಮಣರೇ ಹೂಡಿರುವ ಹೂಟ. ಸಂಘ ಪರಿವಾರದಲ್ಲಿ ಮತ್ತು ಪಕ್ಷದಲ್ಲಿ ಪ್ರಾಬಲ್ಯ ಹೊಂದಲು ನಡೆದಿರುವ ನಾಟಕ. ಇದಕ್ಕೆ ಮಸೀದಿಗಳು, ಮುಸಲ್ಮಾನರು, ಸಿದ್ದರಾಮಯ್ಯನವರು ನೆಪ ಮಾತ್ರ.

2002ರ ಗೋಧ್ರಾ ಘಟನೆ ಮೋಶಾಗಳ ಮೂಗಿನಡಿಯಲ್ಲೇ ನಡೆಯಿತು. ಒಳ್ಳೆಯ ಬೆಳೆಯೂ ಬಂದಿತು. ಆದರೆ ಈಗ, ಅವರಿಗೆ ಉಗ್ರ ಹಿಂದುತ್ವದ ಅಗತ್ಯವಿಲ್ಲ. ಇದನ್ನರಿತ, ರಥಯಾತ್ರೆ ವೀರ ಅಡ್ವಾಣಿಯೇ ವಿಧಿಯ ಮೊರೆ ಹೋಗಿರುವಾಗ, ಮೋಶಾಗಳ ಮರ್ಮ ಅರಿಯದ ಅನಂತಕುಮಾರ್, ಎಂದಿನಂತೆ ಎಗರಾಡಿ, ಒದರಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಬಹುಸಂಖ್ಯಾತ ಶೂದ್ರ ಸಮುದಾಯ ಈ ಮಾಣಿಯನ್ನು ಆರು ಬಾರಿ ಗೆಲ್ಲಿಸಿದೆ. ಕೇಂದ್ರದ ಸಚಿವ ಸ್ಥಾನವೂ ಸಿಕ್ಕಿದೆ. ಆದರೆ ಆ ಜಿಲ್ಲೆಯ ಜನಕ್ಕೆ ಕನಿಷ್ಠ ಮಟ್ಟದ ಆರೋಗ್ಯ, ಶಿಕ್ಷಣ, ರಸ್ತೆಗಳಂತಹ ಮೂಲಭೂತ ಸೌಕರ್ಯಗಳೇ ಸಿಕ್ಕಿಲ್ಲ. ಆದರೂ ಸುಮ್ಮನಿದ್ದಾರೆ. ಸುಮ್ಮನಿರದ ಸಂಘ ಪರಿವಾರ ಮತ್ತು ಬಿಜೆಪಿ, ತಾನೇ ಬಿತ್ತಿದ ಬೆಂಕಿ ತನ್ನನ್ನೇ ಸುಡತೊಡಗಿದಾಗ ಎಚ್ಚರಗೊಂಡಿದೆ. ಈಗ ಈ ಬೆಂಕಿ ಬಾಲಕನ ಅಗತ್ಯವಿಲ್ಲವೆಂದು ದೂರ ಇಟ್ಟಿದೆ. ವಿಚಲಿತರಾದ ಅನಂತಕುಮಾರ್ ಹೆಗಡೆ, ವಿಕ್ಷಿಪ್ತರಾಗಿ ಒದರಾಡುತ್ತಿದ್ದಾರೆ. ಆ ಒದರಾಟವನ್ನು ಬಿಜೆಪಿಗರೇ ಖಂಡಿಸುತ್ತಿದ್ದಾರೆ. ಇದು, ಬಿಜೆಪಿಯವರಿಂದ ಬಿಜೆಪಿಯೊಳಗೇ ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಬಿಜೆಪಿಯ ಭಂಡಾಟ ಮತ್ತು ಜನಿವಾರದಾಟ. ಬಹುಸಂಖ್ಯಾತ ಶೂದ್ರ ಸಮುದಾಯ ಸುಮ್ಮನಿರುವುದು ಲೇಸು.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಹಿಂದೆ ನಡೆದಿದೆಯೆನ್ನಲಾದ ‘ ಭಸ್ಮಾಸುರ ಮೋಹಿನಿ ‘ ಕಥೆ ಇಂದು ನೆನಪಾಗುತ್ತದೆ.

    • ಹೌದು… ಬರೆಯುವಾಗ, ನೆನಪಾಗಿದ್ದು ನಿಜ. ಧನ್ಯವಾದಗಳು ಸರ್

  2. ಸರ್ವ ಜನಾಂಗದ ಶಾಂತಿಯ ತೋಟದಲ್ಲಿ, ಪಾರ್ಟಿನಿಯಮ್ ಗಿಡ ಹುಟ್ಟತ್ತಲೇ ಕಿತ್ತು ಬಿಸಾಡಬೇಕು. ಅದು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಸಾಧ್ಯವಾಗಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರಾಜ್ಯದ ಪರವಾಗಿ ಧ್ವನಿ ಎತ್ತದ ಸಂಸದರನ್ನು ಮತದಾರ ತಿರಸ್ಕರಿಸಬೇಕಿದೆ

ರಾಜ್ಯದ ಬಿಜೆಪಿ ಸಂಸದರು ತಮ್ಮದೇ ಪಕ್ಷ ಅಧಿಕಾರದಲ್ಲಿದ್ದೂ, ನಾಲ್ವರು ಸಚಿವರು ಇದ್ದೂ...

ಈ ದಿನ ಸಂಪಾದಕೀಯ | ಚುನಾವಣಾ ವಿಷಯವಾದ ’ಸಂವಿಧಾನ’ ಮತ್ತು ಮೋದಿ ಮಾತಿನ ಬೂಟಾಟಿಕೆ

ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಅನುಸರಿಸಿದ ದಮನಕಾರಿ ನೀತಿಗಳನ್ನು ನೋಡಿದರೆ...

ಈ ದಿನ ಸಂಪಾದಕೀಯ | ಮೋದಿ ಅಹಮಿಕೆಯೇ ಬಿಜೆಪಿ ಪ್ರಣಾಳಿಕೆ- ಬಡಜನತೆಯ ಕಷ್ಟ ಕಣ್ಣೀರು ಲೆಕ್ಕಕ್ಕಿಲ್ಲ

ಪ್ರಣಾಳಿಕೆಯಲ್ಲೂ ಅಡಿಯೂ ಮೋದಿಯೇ, ಮುಡಿಯೂ ಮೋದಿಯೇ. ಆದಿಯೂ ಮೋದಿಯೇ, ಅಂತ್ಯವೂ ಮೋದಿಯೇ....

ಈ ದಿನ ಸಂಪಾದಕೀಯ | ಕುಮಾರಸ್ವಾಮಿಯವರನ್ನು ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ, ಆತಂಕಕ್ಕೊಳಗಾಗಿದ್ದಾರೆಯೇ?

'ಮೋಶಾ'ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ...