ಡಿಸೆಂಬರ್ 4 ರಂದು ‘ಪುಷ್ಪಾ-2’ ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ತನಿಖೆಯ ಭಾಗವಾಗಿ ಮಂಗಳವಾರ ಪೊಲೀಸರ ಮುಂದೆ ಹಾಜರಾಗುವಂತೆ ತೆಲುಗು ನಟ ಅಲ್ಲು ಅರ್ಜುನ್ ಅವರಿಗೆ ಸಮನ್ಸ್ ನೀಡಲಾಗಿದೆ.
ನಟನಿಗೆ ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಚಿಕ್ಕಡಪಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರಾಜು ನಾಯ್ಕ್ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದೆ ಅಲ್ಲು ಅರ್ಜುನ್ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದರು.
ಇದನ್ನು ಓದಿದ್ದೀರಾ? ಅಲ್ಲು ಅರ್ಜುನ್ ಕೇಸಿನಲ್ಲಿ ಭಾರೀ ಅನಿರೀಕ್ಷಿತ ತಿರುವು!
ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ಹೈದಾರಾಬಾದ್ನ ಸಂಧ್ಯಾ ಥಿಯೇಟರ್ಗೆ ನಟ ಅಲ್ಲು ಅರ್ಜುನ್ ಬರುತ್ತಿದ್ದಂತೆ ಅಭಿಮಾನಿಗಳು ದೌಡಾಯಿಸಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್, ಅವರ ಭದ್ರತಾ ಸಿಬ್ಬಂದಿಗಳು ಮತ್ತು ಥಿಯೇಟರ್ನ ಮಾಲೀಕರ, ನಿರ್ವಾಹಕರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಥಿಯೇಟರ್ ಮಾಲೀಕ, ಮ್ಯಾನೇಜರ್, ಭದ್ರತಾ ಅಧಿಕಾರಿಯನ್ನು ಡಿಸೆಂಬರ್ 8ರಂದು ಬಂಧಿಸಲಾಗಿದೆ.
ನಟ ಅಲ್ಲು ಅರ್ಜುನ್ ಅವರನ್ನು ಕೂಡಾ ಡಿಸೆಂಬರ್ 13ರಂದು7 ಬಂಧಿಸಲಾಗಿದೆ. ಆದರೆ ಅದೇ ದಿನ ನಟನಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದ್ದು ಮರುದಿನವೇ ಜೈಲಿನಿಂದ ಬಿಡುಗಡೆಯಾಗಿದ್ದರು.
ನಟ ಅಲ್ಲು ಅರ್ಜುನ್ ಪೊಲೀಸರು ಅನುಮತಿ ನಿರಾಕರಿಸಿದರೂ ಕೂಡಾ ಸಂಧ್ಯಾ ಥಿಯೇಟರ್ಗೆ ಭೇಟಿ ನೀಡಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಆರೋಪಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಈ ಆರೋಪವನ್ನು ನಿರಾಕರಿಸಿದ್ದಾರೆ.
