ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಕಾನೂನು ತೊಡಕು ಎದುರಾಗಿದ್ದು,ಜೈಪುರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಒಡಿಶಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಾತಿ ಬಗ್ಗೆ ಹೇಳಿಕೆ ನೀಡಿದ ಪ್ರಕರಣ ಇದಾಗಿದೆ.
ವಿಜಯ್ ಕಲಂದರ್ ಎಂಬ ಅರ್ಜಿದಾರರು ರಾಹುಲ್ ಗಾಂಧಿ ಜಾತಿವಾದಿ ಎಂದು ದೂರು ನೀಡಿದ್ದು, ಇದು ಕೇವಲ ಧಾರ್ಮಿಕ ಭಾವನೆಗಳಿಗೆ ಮಾತ್ರವಲ್ಲ ಹಲವು ಸಮುದಾಯಗಳಿಗೂ ನೋವುಂಟು ಮಾಡಿದೆ ಎಂದು ದಾವೆ ಹೂಡಿದ್ದಾರೆ.
ರಾಹುಲ್ ಗಾಂಧಿ ಅವರು ಫೆ.9 ರಂದು ಮೋದಿ ಅವುರು ಒಬಿಸಿ ಸಮುದಾಯದವರಲ್ಲ ಎಂದು ಹೇಳಿದ್ದರು.
ವಕೀಲರಾಗಿರುವ ಅರ್ಜಿದಾರರು ಜೈಪುರದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ನ್ಯಾಯಾಲಯವು ಫೆ.23 ರಂದು ಕಚೇರಿ ವರದಿಗಾಗಿ ಕಾನೂನಾತ್ಮಕ ದೂರನ್ನು ದಾಖಲಿಸಿಕೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?
ರಾಹುಲ್ ಅವರ ಹೇಳಿಕೆ ಉದ್ದೇಶಪೂರ್ವಕವಾಗಿ ದೇಶದಲ್ಲಿ ಅಶಾಂತಿ ಸೃಷ್ಟಿಸಲಿದ್ದು, ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಲಿದೆ. ಈ ಹೇಳಿಕೆಯು ಭಾರತದ ಏಕತೆ ಹಾಗೂ ಸಮಗ್ರತೆಯನ್ನು ವಿಭಜಿಸಲಿದೆ ಎಂದು ಕಲಂದರ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಒಡಿಶಾದಲ್ಲಿ ನಡೆದ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಮೋದಿ ಅವರು ಒಬಿಸಿ ಸಮುದಾಯದವರಲ್ಲ ಸಾಮಾನ್ಯ ಸಮುದಾಯದವರು ಎಂದು ನೀಡಿದ ಹೇಳಿಕೆ ವಿವಾದ ಹಬ್ಬಿಸಿತ್ತು.
ಮೋದಿಯವರು ತಮ್ಮನ್ನು ತಾವು ದೊಡ್ಡ ಒಬಿಸಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಹಿಂದುಳಿದ ಸಮುದಾಯಗಳ ನಾಯಕರೊಂದಿಗೆ ಕೆಲಸ ನಿರ್ವಹಿಸುವಾಗ ಬೂಟಾಟಿಕೆ ಹಾಗೂ ಇಬ್ಬಗೆ ನೀತಿ ಅನುಸರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದರು.
