ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಶಕುನ ಹಾಗೂ ಪಿಕ್ ಪಾಕೇಟರ್ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬುದನ್ನು ವಿವರಿಸಿ ನ.24ರ ಸಂಜೆಯೊಳಗೆ ಉತ್ತರ ನೀಡುವಂತೆ ರಾಹುಲ್ ಗಾಂಧಿಯವರಿಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಈ ವಾರದ ಆರಂಭದಲ್ಲಿ ರಾಜಸ್ಥಾನದಲ್ಲಿ ಚುನಾವಣಾ ರ್‍ಯಾಲಿ ನಡೆಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿರುದ್ಧ ರಾಹುಲ್ ಗಾಂಧಿ ಅವರು ಅಪಶಕುನ ಎಂದು ತಮಾಷೆ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಅಪಶಕುನ (ಪ್ರಧಾನಿ) ಆಗಮಿಸಿದ್ದಕ್ಕಾಗಿ ಭಾರತ ಸೋಲಬೇಕಾಯಿತು ಎಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ 18.7 ಲಕ್ಷ ರೂ. ವಂಚನೆ, ದೂರು ದಾಖಲು
“ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಶಕುನ ಹಾಗೂ ಪಿಕ್‌ಪಾಕೇಟರ್ ಎಂದು ಹೇಳಿರುವುದು ಹಿರಿಯ ನಾಯಕರಾದ ನಿಮಗೆ ಯೋಗ್ಯವಾದುದ್ದಲ್ಲ. ಅಲ್ಲದೆ ಕಳೆದ 9 ವರ್ಷಗಳಲ್ಲಿ ಉದ್ಯಮಿಗಳಿಗೆ ಸಾಲ ಮನ್ನ ಮಾಡಲಾಗಿದೆ ಎಂದು ನೀಡಿರುವ ಹೇಳಿಕೆಯ ಬಗ್ಗೆ ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಈ ಹೇಳಿಕೆಗಳು ಮಾದರಿ ನೀತಿ ಸಂಹಿತೆಯ ಹಲವು ಸೆಕ್ಷನ್‌ಗಳನ್ನು ಉಲ್ಲಂಘಿಸುತ್ತದೆ” ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.
ಅಪಶಕುನ ಎಂಬ ಪದವು ಮಾದರಿ ನೀತಿ ಸಂಹಿತೆಯ ಸೆಕ್ಷೆನ್‌ಗಳ ಅಭಿವ್ಯಕ್ತ ಸಮಾನತೆಯನ್ನು ಉಲ್ಲಂಘಿಸುವ ಪದಗಳಡಿ ಬರುತ್ತದೆ ಎಂದು ವಿವರಿಸಲಾಗಿದೆ. ನೋಟಿಸ್‌ನಲ್ಲಿ ಮಾದರಿ ನೀತಿ ಸಂಹಿತೆಯ ಕಲಂಗಳು ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಕೂಡ ಉಲ್ಲೇಖಿಸಲಾಗಿದೆ.