ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದ್ವಿಪೌರತ್ವವನ್ನು ಹೊಂದಿದ್ದಾರೆ ಎಂದು ಆರೋಪದ ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 19 ರಂದು ನಡೆಯಲಿದ್ದು, ಅಂದು ಪ್ರತಿಕ್ರಿಯೆ ನೀಡುವಂತೆ ತಿಳಿಸಿದೆ.
ವಕೀಲ ಮತ್ತು ಬಿಜೆಪಿ ನಾಯಕ ವಿಘ್ನೇಶ್ ಶಿಶಿರ್ ಎಂಬವರು ರಾಹುಲ್ ಗಾಂಧಿ ಅವರು ದ್ವಿಪೌರತ್ವ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಹುಲ್ ಗಾಂಧಿಯವರು ಯುಕೆ ಪೌರತ್ವವನ್ನು (ಬ್ರಿಟಿಷ್ ಪೌರತ್ವ) ಹೊಂದಿದ್ದಾರೆ ಎಂದು ಸೂಚಿಸುವ ಪುರಾವೆಗಳಿವೆ ಎಂದಿದ್ದಾರೆ. ಹಾಗೆಯೇ ವಿಎಸ್ಎಸ್ ಶರ್ಮಾ ಅವರು ಈ ಹಿಂದೆ ನಡೆಸಿದ ತನಿಖೆ ವೇಳೆ ಯುಕೆ ಸರ್ಕಾರ ಮಾಡಿದ ಇಮೇಲ್‌ಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿಯ ‘ಏಕ್ ಹೈ ತೊ ಸೇಫ್ ಹೈ’ ಘೋಷಣೆಯನ್ನು ರಾಹುಲ್ ಗಾಂಧಿ ವಿವರಿಸಿದ್ದು ಹೀಗೆ
ಅರ್ಜಿದಾರರ ಪ್ರಕಾರ ರಾಹುಲ್ ಗಾಂಧಿಯವರ ಪೌರತ್ವದ ಮಾಹಿತಿಗಾಗಿ ಶರ್ಮಾ 2022ರಲ್ಲಿ ಯುಕೆ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಯುಕೆ ಸರ್ಕಾರವು ಕೆಲವು ವಿವರಗಳನ್ನು ದೃಢೀಕರಿಸಿದೆ. ಆದರೆ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದೆ.
ಇನ್ನು ಕೇಂದ್ರ ಗೃಹ ಸಚಿವಾಲಯವು ಅರ್ಜಿಯನ್ನು ಸ್ವೀಕರಿಸಿದ್ದು, ಪರಿಶೀಲಿಸುತ್ತಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ನವೆಂಬರ್ 25ರಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಮೂರ್ತಿ ಅತ್ತೌ ರಹಮಾನ್ ಮಸೂದಿ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರನ್ನೊಳಗೊಂಡ ಪೀಠವು ಮುಂದಿನ ವಿಚಾರಣೆಯ ವೇಳೆಗೆ ಮಾಹಿತಿ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಈ ಹಿಂದೆ ಜುಲೈನಲ್ಲಿ ಅರ್ಜಿಯನ್ನು ಹಿಂಪಡೆಯಲಾಗಿತ್ತು. ಅರ್ಜಿದಾರರು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾದ ಎರಡು ಅರ್ಜಿಗಳಿಗೆ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಈಗ ಮತ್ತೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಪೌರತ್ವ ಸ್ಥಿತಿ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಅರ್ಜಿ
ಭಾರತೀಯ ಸಂವಿಧಾನದ 9ನೇ ವಿಧಿಯ ಪ್ರಕಾರ, ಯಾವುದೇ ವ್ಯಕ್ತಿ ಏಕಕಾಲದಲ್ಲಿ ಭಾರತೀಯ ಮತ್ತು ಇನ್ನೊಂದು ದೇಶದ ಪೌರತ್ವವನ್ನು ಹೊಂದುವಂತಿಲ್ಲ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವಾಗ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಕೂಡ ದೆಹಲಿ ಹೈಕೋರ್ಟ್‌ನಲ್ಲಿ ಇದೇ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಮುಗಿದ ಬಳಿಕ ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್ ಹೇಳಿದೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಡಿಸೆಂಬರ್ 19ರಂದು ನಡೆಯಲಿದ್ದು, ಕೇಂದ್ರ ಸರ್ಕಾರವು ಅರ್ಜಿದಾರರು ಸಲ್ಲಿಸಿದ ದಾಖಲೆ ಮತ್ತು ಆರೋಪಗಳ ಬಗ್ಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.
