ರಾಜಸ್ಥಾನದ ಹಲವು ಪೊಲೀಸರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ, ಶನಿವಾರ ಹೋಳಿ ಆಚರಣೆಯನ್ನು ಬಹಿಷ್ಕರಿಸಿದ್ದಾರೆ. ಮುಂಬಡ್ತಿ ನೀಡಬೇಕು, ವೇತನ ವ್ಯತ್ಯಾಸ ಇರಬಾರದು, ಸರಿಯಾದ ಸಮಯಕ್ಕೆ ವೇತನ ನೀಡಬೇಕು ಎಂಬುದು ರಾಜಸ್ಥಾನ ಪೊಲೀಸರ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಪೊಲೀಸರ ಬೇಡಿಕೆಯ ಬಗ್ಗೆ ಗಮನ ಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಒತ್ತಾಯಿಸಿದ್ದಾರೆ. ಇನ್ನು ಸಚಿವ ಕಿರೋಡಿ ಲಾಲ್ ಮೀನಾ ಕೂಡಾ ಪೊಲೀಸರ ಬೇಡಿಕೆಯನ್ನು ಬೆಂಬಲಿಸುವುದಾಗಿ, ಈ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಹೋಳಿ ಆಚರಿಸಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ನೀರುಪಾಲು
ಸಾಂಪ್ರಾದಾಯಿಕವಾಗಿ ರಾಜಸ್ಥಾನದಲ್ಲಿ ಪೊಲೀಸರು ಹೋಳಿ ಹಬ್ಬದ ದಿನ ಕರ್ತವ್ಯದಲ್ಲಿರುವ ಕಾರಣ ಮರುದಿನ ಹಬ್ಬವನ್ನು ಆಚರಿಸುತ್ತಾರೆ. ಅದಾದ ಬಳಿಕ ಪೊಲೀಸ್ ಲೇನ್‌ಗಳಲ್ಲಿ ಹೋಳಿ ಆಚರಿಸುತ್ತಾರೆ. ಈ ಸಂಪ್ರದಾಯದಂತೆ ರಾಜ್ಯಾದ್ಯಂತ ಪೊಲೀಸ್ ಲೇನ್‌ಗಳಲ್ಲಿ ಹಿರಿಯ ಅಧಿಕಾರಿಗಳು ಹೋಳಿ ಆಚರಣೆಯ ವ್ಯವಸ್ಥೆಯನ್ನು ಮಾಡಿದ್ದರು. ಆದರೆ ಜೈಪುರ, ಜೋಧಪುರ, ಉದಯಪುರ ಮತ್ತು ಇನ್ನೂ ಹಲವು ಜಿಲ್ಲೆಗಳಲ್ಲಿ ಪೊಲೀಸರು ಈ ಆಚರಣೆಯಲ್ಲಿ ಭಾಗಿಯಾಗಿಲ್ಲ. ಬಹುತೇಕ ಪೊಲೀಸ್ ಲೇನ್ ಬಿಕೋ ಎನ್ನುತ್ತಿತ್ತು ಎಂದು ವರದಿಯಾಗಿದೆ.
ಕೋಟಾ, ಭರತ್‌ಪುರ, ಪಾಳಿ ಮೊದಲಾದೆಡೆ ಪೊಲೀಸರು ಹೋಳಿ ಆಚರಿಸಿದ್ದಾರೆ. ಆದರೆ ಪೊಲೀಸರ ಸಂಖ್ಯೆ ಕಡಿಮೆಯಾಗಿತ್ತು. “ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ನಾವು ಹೋಳಿ ಆಚರಣೆಯನ್ನು ಬಹಿಷ್ಕರಿಸುತ್ತಿದ್ದೇವೆ” ಎಂದು ಜೈಪುರದ ಪೊಲೀಸರು ತಿಳಿಸಿದ್ದಾರೆ.
