ಭಜನೆಯಲ್ಲಿ ಸ್ಥಳೀಯ ದೇವರನ್ನು ಅವಮಾನಿಸಿದ ಆರೋಪದ ಮೇಲೆ ಶಿಕ್ಷೆಯ ರೂಪವಾಗಿ ದಲಿತ ಸಮುದಾಯದ ವೃದ್ಧರೊಬ್ಬರಿಗೆ ಗ್ರಾಮಸ್ಥರು ತಲೆಯ ಮೇಲೆ ಪಾದರಕ್ಷೆಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕ್ಷಮೆ ಕೇಳಿಸಿ ಅವಮಾನಿಸಿದ ಘಟನೆ ರಾಜಸ್ಥಾನದ ಚಿತ್ತೋರ್‌ಗಢ್‌ನ ದುಗರ್ ಗ್ರಾಮದಲ್ಲಿ ನಡೆದಿದೆ.
70 ವರ್ಷದ ವೃದ್ಧರಾದ ಬಗ್ದಾವತ್ ಅವರು ಭಕ್ತಿ ಗೀತೆಗಳ ಗಾಯಕರಾಗಿದ್ದು, ತಾವು ಹಾಡಿದ ಭಜನೆಯಲ್ಲಿ ಸ್ಥಳೀಯ ದೇವರನ್ನು ಅವಮಾನಿಸಿದ ಆರೋಪಕ್ಕಾಗಿ ಶಿಕ್ಷೆಯ ರೂಪವಾಗಿ ತಲೆಯ ಮೇಲೆ ಚಪ್ಪಲಿಯನ್ನು ಹೊತ್ತುಕೊಂಡು ಸುಮಾರು 60 ರಿಂದ 70 ಜನರ ಮುಂದೆ ‘ಕ್ಷಮೆ’ ಕೇಳುವಂತೆ ಸ್ಥಳೀಯ ಗ್ರಾಮಸ್ಥರು ಅವಮಾನಿಸಿದ್ದಾರೆ.
ಅಲ್ಲದೆ ಅದೇ ದಿನ ಗ್ರಾಮಸ್ಥರು ಗುರ್ಜರ್‌ಗಳ ಸಭೆಯಲ್ಲಿ ವೃದ್ಧರ ಸಹಾಯಕನಿಗೆ 1,100 ರೂ. ದಂಡವನ್ನು ವಿಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಂಸದರಿಗೆ ನೀಡಿದ ಸಂವಿಧಾನದ ಪ್ರತಿಗಳಲ್ಲಿ ‘ಜಾತ್ಯತೀತ’, ‘ಸಮಾಜವಾದಿ’ ಪದಗಳು ಕಣ್ಮರೆ: ಅಧೀರ್
ಬಗ್ದಾವತ್ ಅವರು ಹಾಡಿನ ನಿರೂಪಣೆಯ ಸಮಯದಲ್ಲಿ ಗುರ್ಜರ್ ಸಮುದಾಯದಿಂದ ಪೂಜಿಸಲ್ಪಟ್ಟ ದೇವತೆಯಾದ ಸಾದು ಮಾತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಈ ಘಟನೆಯು ಸೆಪ್ಟೆಂಬರ್ 16 ರಂದು ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ತಾವು ಬಾಯಿ ತಪ್ಪಿ ಆಡಿದ ಮಾತಿಗೆ ಕ್ಷಮೆಯಾಚಿಸಿದ್ದೇನೆ ಆದರೂ ನನಗೆ ಇನ್ನೂ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಗ್ದಾವತ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ” ಎಂದು ಸ್ಥಳೀಯ ಡಿಎಸ್ಪಿ ಬದ್ರಿಲಾಲ್ ರಾವ್ ತಿಳಿಸಿದ್ದಾರೆ.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಲ್ಲಿರುವ ವಿವಿಧ ದಲಿತ ಸಂಘಟನೆಗಳು ಅಪರಾಧಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿವೆ.