ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ಮತ್ತು ದಾನದ ಕಳವು ಪ್ರಕರಣದಲ್ಲಿ ಅಪರಾಧಿಗಳನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಕರಣ ಸಂಬಂಧ ಬಿಜೆಪಿ ಸರ್ಕಾರಗಳ ವಿರುದ್ಧ ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಪ್ರಕರಣದ ಹೊಣೆಗಾರಿಕೆಯನ್ನು ನಿಗದಿಪಡಿಸುವ ಬದಲು ಸರ್ಕಾರ ಸತ್ಯವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
“ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ ಸಂಪರ್ಕ ಹೊಂದಿರುವ ಟ್ರಸ್ಟಿಗಳ ಉಸ್ತುವಾರಿಯಲ್ಲೇ ಈ ಕಳವು ನಡೆದಿದ್ದರೂ ಪ್ರಧಾನಿ ಏಕೆ ಸಮಗ್ರ ತನಿಖೆಗೆ ಆದೇಶಿಸಿಲ್ಲ. ಆರ್‌ಎಸ್‌ಎಸ್ ಮತ್ತು ರಾಮಮಂದಿರ ಟ್ರಸ್ಟ್ ನೀಡಿರುವ ಅಂಕಿಅಂಶಗಳ ಪ್ರಕಾರ, 2021ರ ‘ನಿಧಿ ಸಮರ್ಪಣ ಅಭಿಯಾನ’ ಮತ್ತು ಇತರ ಮೂಲಗಳಿಂದ ಬರೋಬ್ಬರಿ 3,264 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಜೊತೆಗೆ 2024ರಲ್ಲಿ 13.55 ಕೋಟಿ ಭಕ್ತರು ಹಾಗೂ 2025ರ ಮಹಾಕುಂಭಮೇಳದ ವೇಳೆ ಸುಮಾರು 10 ಕೋಟಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದರೂ, 2025ರ ಏಪ್ರಿಲ್ 1 ರಿಂದ 2026ರ ಫೆಬ್ರವರಿ 28ರ ನಡುವೆ ಕೇವಲ 82.78 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂಬ ಲೆಕ್ಕ ತೋರಿಸಲಾಗಿದೆ. ಇದು ಅನುಮಾನಾಸ್ಪದವಾಗಿದೆ” ಎಂದಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT) ಕಳುವಾದ ಮೊತ್ತವನ್ನು ಕೇವಲ 80 ಲಕ್ಷ ರೂಪಾಯಿ ಎಂದು ಅಂದಾಜಿಸಿರುವುದನ್ನು ಕಾಂಗ್ರೆಸ್ ಕಠಿಣವಾಗಿ ಪ್ರಶ್ನಿಸಿದೆ. “ದೇವಾಲಯಕ್ಕೆ ಆಗಮಿಸಿದ ಸುಮಾರು 30 ಕೋಟಿ ಭಕ್ತರು ನೀಡಿದ ಕಾಣಿಕೆಗೆ ಸರಿಯಾದ ಲೆಕ್ಕಪತ್ರವಿದೆಯೇ? ದೇವಾಲಯ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರೇ ಈ ಘಟನೆಯನ್ನು ಹಗಲು ದರೋಡೆ ಎಂದು ಬಣ್ಣಿಸಿರುವಾಗ ಸರ್ಕಾರ ಪಾರದರ್ಶಕ ತನಿಖೆಗೆ ಏಕೆ ಮುಂದಾಗಿಲ್ಲ” ಎಂದು ಪ್ರಶ್ನಿಸಿದ್ದಾರೆ.
“ಜೂನ್ 4 ರಂದೇ ಕಳವಿಗೆ ಸಂಬಂಧಿಸಿದ ವೀಡಿಯೋ ದಾಖಲೆಗಳು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ತಲುಪಿದ್ದರೂ, ಎಫ್‌ಐಆರ್ ದಾಖಲಿಸಲು 21 ದಿನಗಳ ವಿಳಂಬ ಮಾಡಿದ್ದರ ಹಿಂದೆ ಯಾರನ್ನು ರಕ್ಷಿಸುವ ಹುನ್ನಾರವಿತ್ತು” ಎಂದು ಪ್ರಶ್ನಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ‘ಚಂದಾ ಚೋರಿ, ಆಸ್ಥಾ ಧೋಖಾ’ (ಚಂದಾದಲ್ಲಿ ಕಳ್ಳತನ, ನಂಬಿಕೆಗೆ ವಂಚನೆ) ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಪಕ್ಷವು ಬಿಜೆಪಿ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿದೆ.




