ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ RSS ಅಂಗಸಂಸ್ಥೆ ‘ಸ್ವದೇಶಿ ಜಾಗರಣ ಮಂಚ್’ ವಿದೇಶಿ ದೈತ್ಯ ಕಂಪನಿಯ ವಿರುದ್ಧ ರಣಕಹಳೆ ಮೊಳಗಿಸಿದೆ. ಈ ‘ಸ್ವದೇಶಿ’ ಜಪದ ಹಿಂದಿರುವುದು ರಾಷ್ಟ್ರೀಯ ಕಾಳಜಿಯೋ ಅಥವಾ ಪರೋಕ್ಷವಾಗಿ ಅಂಬಾನಿ ಜಿಯೋ ಸಾಮ್ರಾಜ್ಯದ ರಕ್ಷಣೆಯೋ ಎಂಬ ಗಂಭೀರ ಚರ್ಚೆಗೆ ದಾರಿಮಾಡಿಕೊಟ್ಟಿದೆ.
ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ‘ಸ್ಟಾರ್‌ಲಿಂಕ್’ (Starlink) ಭಾರತ ಪ್ರವೇಶಕ್ಕೆ ಸಂಘಪರಿವಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಸ್ವದೇಶಿ ಜಾಗರಣ ಮಂಚ್ ಸಂಘಟನೆ ಸ್ಟಾರ್‌ಲಿಂಕ್ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದೆ. ಪ್ರತಿಭಟನೆಯ ಸಂದರ್ಭದಲ್ಲಿ ಎಸ್‌ಜೆಎಂ ದೀರ್ಘಕಾಲದ ಮುಖ್ಯಸ್ಥ ಅಶ್ವಿನಿ ಮಹಾಜನ್ ಸ್ಟಾರ್‌ಲಿಂಕ್ ಪ್ರತಿನಿಧಿಗಳೊಂದಿಗೆ ನಡೆದಿರುವುದಾಗಿ ಹೇಳಲಾದ ಸಂಭಾಷಣೆಯನ್ನು ಉಲ್ಲೇಖಿಸಿ, “ನಾವು ಕೇಳಿದಾಗ ಇಂಟರ್ನೆಟ್ ಸ್ಥಗಿತಗೊಳಿಸುತ್ತೀರಾ ಎಂದು ಪ್ರಶ್ನಿಸಿದೆವು. ಅದಕ್ಕೆ ಅವರು ‘ಇಲ್ಲ’ ಎಂದು ಉತ್ತರಿಸಿದರು” ಎಂದು ಹೇಳಿದ್ದಾರೆ. ಈ ಹೇಳಿಕೆಯ ಹಿನ್ನೆಲೆ, ಬಿಜೆಪಿ ವಿರುದ್ಧ ಪ್ರತಿಭಟನೆಗಳು ನಡೆಯುವ ಸಂದರ್ಭದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲು ಸರ್ಕಾರ ಕೇಳಿದರೆ ಸ್ಟಾರ್‌ಲಿಂಕ್ ಅದಕ್ಕೆ ಒಪ್ಪುತ್ತದೆಯೇ ಎಂಬ ಉದ್ದೇಶದಿಂದಲೇ ಈ ಪ್ರಶ್ನೆ ಕೇಳಲಾಗಿತ್ತೇ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ.
ಅಲ್ಲದೆ, ಸ್ಟಾರ್‌ಲಿಂಕ್ ‘ಲೇಸರ್ ಆಧಾರಿತ ಉಪಗ್ರಹಗಳನ್ನು’ ಬಳಸಿಕೊಂಡು ದೇಶಿ ಇಂಟರ್ನೆಟ್ ಗೇಟ್‌ವೇಗಳನ್ನು ಬೈಪಾಸ್ (bypass) ಮಾಡಲಿದ್ದು, ಇದು ಭಾರತದ ರಾಷ್ಟ್ರೀಯ ಭದ್ರತೆಗೆ ದೊಡ್ಡ ಗಂಡಾಂತರ ತರಲಿದೆ ಎಂದು ಎಸ್.ಜೆ.ಎಂ ಪ್ರಧಾನ ಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದೆ. ಭಾರತೀಯರ ದತ್ತಾಂಶವನ್ನು ವಿದೇಶಿ ಕಂಪನಿಗಳು ಕದಿಯುವ ಸಾಧ್ಯತೆಯಿದೆ ಎಂದೂ ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಉಪಗ್ರಹಗಳ ನಡುವೆ ಲೇಸರ್ ಕಿರಣಗಳ ಮೂಲಕ ದತ್ತಾಂಶ ವರ್ಗಾವಣೆ ನಡೆಸುವ ತಂತ್ರಜ್ಞಾನವು ಆಧುನಿಕ ಉಪಗ್ರಹ ಜಾಲಗಳ ಒಂದು ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಕ ಭಾಗವಾಗಿದೆ. ಈ ತಂತ್ರಜ್ಞಾನದ ಮೂಲಕ ಬಾಹ್ಯಾಕಾಶದಲ್ಲೇ ಉಪಗ್ರಹಗಳು ಪರಸ್ಪರ ನೇರವಾಗಿ ಸಂಪರ್ಕ ಸಾಧಿಸಿ ವೇಗವಾಗಿ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳುತ್ತವೆ, ಇದರಿಂದ ಅತಿವೇಗದ ದತ್ತಾಂಶ ಸಂಪರ್ಕ ದೊರೆಯುವುದಲ್ಲದೆ, ಯಾವುದೇ ಸಾಂಪ್ರದಾಯಿಕ ಕೇಬಲ್ ಅಥವಾ ಟವರ್‌ಗಳಿಲ್ಲದ ಅತ್ಯಂತ ದುರ್ಗಮ ಹಾಗೂ ದೂರದ ಪ್ರದೇಶಗಳಿಗೂ ಇಂಟರ್ನೆಟ್ ಒದಗಿಸುವ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗುತ್ತದೆ. ಈ ವ್ಯವಸ್ಥೆಯಲ್ಲಿ ದತ್ತಾಂಶ ಯಾವ ಮಾರ್ಗದಲ್ಲಿ ಸಾಗುತ್ತದೆ, ಯಾವ ದೇಶದ ಕಾನೂನು ಅದಕ್ಕೆ ಅನ್ವಯಿಸುತ್ತದೆ, ತುರ್ತು ಅಥವಾ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಸರ್ಕಾರದ ಕಾನೂನುಬದ್ಧ ಆದೇಶಗಳನ್ನು ಹೇಗೆ ಹಾಗೂ ಎಷ್ಟು ವೇಗವಾಗಿ ಪಾಲಿಸಲಾಗುತ್ತದೆ ಮತ್ತು ದೇಶದ ಭದ್ರತಾ ಸಂಸ್ಥೆಗಳಿಗೆ ಅಗತ್ಯವಿರುವ ತಾಂತ್ರಿಕ ಸಹಕಾರ ಹಾಗೂ ಮೇಲ್ವಿಚಾರಣಾ ಅವಕಾಶಗಳು ದೊರೆಯುತ್ತವೆಯೇ ಎಂಬುದನ್ನೂ ಪರಿಶೀಲಿಸಬೇಕಾಗುತ್ತದೆ.
ಎಸ್‌ಜೆಎಂ ಆಕ್ಷೇಪವೂ ಇದೇ. ಭಾರತದ ಮಾರುಕಟ್ಟೆಯಲ್ಲಿ ವಾಣಿಜ್ಯ ಉದ್ದೇಶದಿಂದ ಕಾರ್ಯನಿರ್ವಹಿಸುವ ಯಾವುದೇ ವಿದೇಶಿ ದೂರಸಂಪರ್ಕ ಸಂಸ್ಥೆಯು ಕೇವಲ ಅತ್ಯಾಧುನಿಕ ತಂತ್ರಜ್ಞಾನ ಅಥವಾ ಬಂಡವಾಳದ ಬಲದಿಂದ ಸರ್ಕಾರದ ನಿಯಮಗಳನ್ನು ಮೀರುವಂತಿಲ್ಲ. ದೇಶದ ಸಾರ್ವಭೌಮತೆ, ಸ್ಥಳೀಯ ಕಾನೂನುಗಳು ಮತ್ತು ಕಟ್ಟುನಿಟ್ಟಾದ ಭದ್ರತಾ ಷರತ್ತುಗಳಿಗೆ ಸಂಪೂರ್ಣವಾಗಿ ಬದ್ಧವಾಗಿರಬೇಕು ಎಂಬುದು ಸಂಘಟನೆಯ ನಿಲುವು.
ಜಿಯೋ ಸಾಮ್ರಾಜ್ಯದ ರಕ್ಷಣೆಗೆ RSS ನಿಂತಿದೆಯೇ ಎಂಬ ಅನುಮಾನಕ್ಕೆ ಕಾರಣಗಳೇನು?
ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಇಂಟರ್ನೆಟ್ ಮಾರುಕಟ್ಟೆಯಾಗಿದ್ದು, ಬರೋಬ್ಬರಿ 111.4 ಕೋಟಿ ಚಂದಾದಾರರನ್ನು ಹೊಂದಿದೆ. ಈ ವಿಶಾಲ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳು ಶೇ. 83.88 ರಷ್ಟು ಬ್ರಾಂಡ್‌ಬ್ಯಾಂಡ್ ಮಾರುಕಟ್ಟೆಯನ್ನು ತಮ್ಮ ಹಿಡಿತದಲ್ಲಿರಿಸಿಕೊಂಡಿವೆ. ಇದರಲ್ಲಿ ಕೇವಲ ಜಿಯೋ ಒಂದೇ ಶೇ. 48.94 ರಷ್ಟು ಸಿಂಹಪಾಲು ಹೊಂದಿದೆ. ಇಂತಹ ಬೃಹತ್ ಡಿಜಿಟಲ್ ಸಾಮ್ರಾಜ್ಯಕ್ಕೆ ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ (Starlink) ಸೌರ-ಉಪಗ್ರಹ ಇಂಟರ್ನೆಟ್ ಮೂಲಕ ನೇರ ಸವಾಲಾಗಿ ಪರಿಣಮಿಸಿದೆ. ಸ್ಟಾರ್‌ಲಿಂಕ್ ಭಾರತ ಪ್ರವೇಶಿಸಿದರೆ ಅದು ಜಿಯೋದ ಟೆಲಿಕಾಂ ಮತ್ತು ಬ್ರಾಂಡ್‌ಬ್ಯಾಂಡ್ ಸಾಮ್ರಾಜ್ಯಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎಂದು ರಿಲಯನ್ಸ್ ತನ್ನ ಐಪಿಒ ಪ್ರಾಸ್ಪೆಕ್ಟಸ್‌ನಲ್ಲಿಯೂ ಬಹಿರಂಗವಾಗಿ ಒಪ್ಪಿಕೊಂಡಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಎನ್ನುವುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಭಾರತದಲ್ಲಿ ಸಮಗ್ರ ಡಿಜಿಟಲ್ ಮತ್ತು ದೂರಸಂಪರ್ಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಮೊಬೈಲ್ ಮತ್ತು ಫಿಕ್ಸ್ಡ್ ಬ್ರಾಂಡ್‌ಬ್ಯಾಂಡ್ (533 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ 4G/5G, ಜಿಯೋಫೈಬರ್, ಜಿಯೋಏರ್‌ಫೈಬರ್), ಸ್ವದೇಶಿ 5G ರೇಡಿಯೋ ಆಕ್ಸೆಸ್ ನೆಟ್‌ವರ್ಕ್, AI ಮತ್ತು ಕ್ಲೌಡ್‌ಗಾಗಿ ‘JioBrain’ ವೇದಿಕೆ, ಜಿಯೋಸಿನಿಮಾ, ಜಿಯೋಸಾವನ್, ಡಿಜಿಟಲ್ ಪೇಮೆಂಟ್ಸ್, ಎಂಟರ್‌ಪ್ರೈಸ್ B2B ಕ್ಲೌಡ್ ಸೊಲ್ಯೂಷನ್ಸ್ ಹಾಗೂ SES ಸಂಸ್ಥೆಯ ಸಹಭಾಗಿತ್ವದಲ್ಲಿ ‘ಜಿಯೋ ಸ್ಪೇಸ್ ಟೆಕ್ನಾಲಜಿ ಲಿಮಿಟೆಡ್’ ಮೂಲಕ ಉಪಗ್ರಹ ಬ್ರಾಂಡ್‌ಬ್ಯಾಂಡ್ ಸೇವೆ ನೀಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಇತ್ತೀಚೆಗಷ್ಟೇ ಇಶ್ಯೂ ಮಾಡಿದ ಬೃಹತ್ IPO ಮೂಲಕ 7.40 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ.
ಆದರೆ, 2026ರ ಅಕ್ಟೋಬರ್ ವೇಳೆಗೆ ಸ್ಪೆಕ್ಟ್ರಂ ಹಂಚಿಕೆ (ಜಿಯೋ ಹರಾಜು ಬಯಸಿದರೆ, ಮಸ್ಕ್ ಆಡಳಿತಾತ್ಮಕ ಹಂಚಿಕೆಯನ್ನು ಬಲವಾಗಿ ಸಮರ್ಥಿಸುತ್ತಿದ್ದಾರೆ), ಸೇವೆಯ ದರ ಮತ್ತು ಪರವಾನಗಿ ವಿಚಾರದಲ್ಲಿ ಜಿಯೋ ಮತ್ತು ಸ್ಟಾರ್‌ಲಿಂಕ್ ನಡುವಿನ ಕಾಳಗ ತೀವ್ರಗೊಂಡಿದೆ. ಜಿಯೋ ತನ್ನ RHP ಯಲ್ಲಿ ಸ್ಯಾಟಲೈಟ್ ಪೂರೈಕೆದಾರರಿಂದ ಬರುವ ಸ್ಪರ್ಧೆಯನ್ನು ಎಚ್ಚರಿಸುವುದರ ಜೊತೆಗೆ, ತಾವೇ ಸ್ವತಃ 1,600-1,650 ಸಾರ್ವಭೌಮ LEO (Low Earth Orbit) ಉಪಗ್ರಹಗಳ ನೆಟ್‌ವರ್ಕ್ ಅಭಿವೃದ್ಧಿಪಡಿಸುವ ಯೋಚನೆಯಲ್ಲಿದ್ದಾರೆ. ಕುತೂಹಲದ ಸಂಗತಿಯೆಂದರೆ, 2025ರ ಮಾರ್ಚ್‌ನಲ್ಲಿ ಸ್ಟಾರ್‌ಲಿಂಕ್ ಸೇವೆಯನ್ನು ಭಾರತದಲ್ಲಿ ವಿತರಿಸಲು ಜಿಯೋ ಒಪ್ಪಂದ ಮಾಡಿಕೊಂಡಿದ್ದರೂ, ಮಾರುಕಟ್ಟೆ ಏಕಸ್ವಾಮ್ಯದ ವಿಚಾರದಲ್ಲಿ ಮುಸುಕಿನ ಗುದ್ದಾಟ ಮುಂದುವರಿದಿದೆ.
ಭಾರತದಲ್ಲಿ ಪರವಾನಗಿ ವಿಳಂಬವಾಗುತ್ತಿರುವುದಕ್ಕೆ ಸಿಟ್ಟಿಗೆದ್ದ ಮಸ್ಕ್, ಎಕ್ಸ್ (X) ಜಾಲತಾಣದಲ್ಲಿ ಅಂಬಾನಿ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಕ್ಟೋಬರ್ 9 ರಂದು “ಪ್ರಧಾನಿ ಅಂಬಾನಿ,” ಎಂದು ವ್ಯಂಗ್ಯವಾಡಿದ ಮಸ್ಕ್, “ನೀವು ಭಾರತದ ಜನರ ಮೇಲಿನ ನಿಮ್ಮ ಏಕಸ್ವಾಮ್ಯದ ಶೋಷಣೆಯನ್ನು ಮುಂದುವರಿಸಲು ಬಯಸುತ್ತೀರಿ, ಆದರೂ ಸ್ಟಾರ್‌ಲಿಂಕ್‌ಗೆ ಸ್ಪರ್ಧಿಸಲು ಅವಕಾಶ ನೀಡಲು ಯೋಚಿಸುತ್ತೀರಾ?” ಎಂದು ಪ್ರಶ್ನಿಸಿದರು. ಅಲ್ಲದೆ, “ಸ್ಟಾರ್‌ಲಿಂಕ್ ಅನ್ನು ಸ್ಥಾಪಿಸಲು 165 ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ನೀಡಲಾಗಿದೆ, 5 ವರ್ಷಗಳಿಂದ ಭಾರತದ ಪ್ರತಿಯೊಂದು ಕಾನೂನನ್ನು ಪಾಲಿಸುತ್ತಿದ್ದರೂ ಯಾಕೆ ಇನ್ನೂ ಲೈಸೆನ್ಸ್ ಸಿಕ್ಕಿಲ್ಲ? ಅಂಬಾನಿ ಭಾರತದ ರಿಯಲ್ ಬಾಸ್ ಆಗಿದ್ದಾರೆಯೇ?” ಎಂದು ನೇರವಾಗಿ ತಿವಿದಿದ್ದರು.
ಈ ವಿವಾದಕ್ಕೆ ಧುಮುಕಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಭಾರತಕ್ಕೆ ಸ್ವಾಗತ ಎಲಾನ್, ಇನ್ನೊಬ್ಬ ವ್ಯಕ್ತಿಯನ್ನು ಭೇಟಿಯಾಗುವವರೆಗೆ ಕಾಯಿರಿ” ಎಂದು ಕಾಮೆಂಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, “ಧನ್ಯವಾದಗಳು ರಾಹುಲ್, ಇದು ನಿಜಕ್ಕೂ ಆತಂಕಕಾರಿ” ಎಂದರು. ಅಮೆರಿಕದ ಮಾಜಿ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟ್‌ಹೈಜರ್ ತಮ್ಮ ‘ನೋ ಟ್ರೇಡ್ ಈಸ್ ಫ್ರೀ’ ಪುಸ್ತಕದಲ್ಲಿ ಬರೆದಿರುವಂತೆ, ಭಾರತದ ಅಧಿಕೃತ ಸ್ಥಾನಕ್ಕಿಂತ ಅಲ್ಲಿನ ಪ್ರಮುಖ ಶತಕೋಟ್ಯಾಧಿಪತಿಗಳ ಹಿತಾಸಕ್ತಿಗಳೇ ನೀತಿ ನಿರೂಪಣೆಗೆ ಕನ್ನಡಿಯಾಗುತ್ತವೆ ಎಂಬ ವಾದಕ್ಕೆ ಇದು ಪುಷ್ಟಿ ನೀಡಿತು.
2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ SJM ವಿದೇಶಿ ಬ್ರ್ಯಾಂಡ್‌ಗಳ ವಿರುದ್ಧ ಪ್ರತಿಭಟನೆ ನಡೆಸಿ, ಪೀಟರ್ ಇಂಗ್ಲೆಂಡ್ ಮತ್ತು ಕಲರ್ ಪ್ಲಸ್‌ನಂತಹ ಅಪ್ಪಟ ಭಾರತೀಯ ಬ್ರ್ಯಾಂಡ್‌ಗಳನ್ನೇ ವಿದೇಶಿ ಎಂದು ತಪ್ಪಾಗಿ ತಿಳಿದು ಮಳಿಗೆಗಳಿಗೆ ಮುತ್ತಿಗೆ ಹಾಕಿದ ಪ್ರಮಾದ ನಡೆದಿತ್ತು. ಚೀನಾದ ಹೂಡಿಕೆಗಳು ವ್ಯಾಪಕವಾಗಿರುವಾಗ ಅಮೆರಿಕದ ದೈತ್ಯ ಕಂಪನಿಯನ್ನು ಮಾತ್ರ ವಿರೋಧಿಸುವುದರ ಹಿಂದೆ ರಾಜಕೀಯ ಮತ್ತು ಸ್ವದೇಶಿ ಸಮೀಕರಣಗಳು ಅಡಕವಾಗಿವೆ ಎಂಬುದನ್ನು ಇದು ಎತ್ತಿ ತೋರಿಸಿತ್ತು.
ಸಂಘಪರಿವಾರ ಮತ್ತು ಅಂಬಾನಿ ನಂಟು
ಇಲ್ಲಿ ಸಂಘಪರಿವಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಕೇಶ್ ಅಂಬಾನಿ ಅವರ ನಡುವಿನ ಸುದೀರ್ಘ ಬಾಂಧವ್ಯವನ್ನು ಗಮನಿಸಬೇಕು.
- ಜೂನ್ 28, 2024: ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಮುಂಬೈನ ಆಂಟಿಲಿಯಾ ನಿವಾಸಕ್ಕೆ ತೆರಳಿ ಮುಕೇಶ್ ಅಂಬಾನಿಯನ್ನು ಭೇಟಿಯಾಗಿ ಭೋಜನದಲ್ಲೂ ಭಾಗವಹಿಸಿದ್ದರು.
- ಜುಲೈ 13, 2024: ಅನಂತ್ ಅಂಬಾನಿ–ರಾಧಿಕಾ ಮರ್ಚೆಂಟ್ ವಿವಾಹದ ಆಶೀರ್ವಾದ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು.
- ಸೆಪ್ಟೆಂಬರ್ 2016: ಜಿಯೋ 4G ಸೇವೆ ಆರಂಭವಾದಾಗ ಮುಖಪುಟ ಜಾಹೀರಾತಿನಲ್ಲಿ ಮೋದಿಯವರ ಚಿತ್ರ ಬಳಸಿದ್ದು ವಿವಾದವಾಗಿ, ನಂತರ ಕಂಪನಿ ಕ್ಷಮೆಯಾಚಿಸಿತ್ತು.
- ಸೆಪ್ಟೆಂಬರ್ 2026: ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ ಅನಂತ್ ಅಂಬಾನಿ, ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ತಮ್ಮ ವಂತಾರಾ ಯೋಜನೆ ಕುರಿತು ಮಾಹಿತಿ ನೀಡಿದ್ದರು.
ಜೇಮ್ಸ್ ಕ್ರ್ಯಾಬ್ಟ್ರೀ, ಜೆಫ್ರಿ ವಿಂಟರ್ಸ್ ಮತ್ತು ಚಾರ್ಲ್ಸ್ ಲಿಂಡ್‌ಬ್ಲಮ್ ಅವರ ಆರ್ಥಿಕ-ರಾಜಕೀಯ ಸಿದ್ಧಾಂತಗಳ ಪ್ರಕಾರ, ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಉದ್ಯಮಿಗಳು ನೇರವಾಗಿ ಆಳಬೇಕಿಲ್ಲ, ಅವರ ‘ವಿಶೇಷ ಸ್ಥಾನಮಾನ’ ಹಾಗೂ ಲಾಬಿಯ ಮೂಲಕವೇ ನೀತಿಗಳನ್ನು ಬದಲಿಸಿಕೊಳ್ಳುತ್ತಾರೆ. ರಿಲಯನ್ಸ್ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಮೇಲೆಯೂ ಪ್ರಭಾವ ಬೀರಿದ್ದು, ಮಾರ್ಕ್ ರೂಬಿಯೊ ಅವರ ಮುಂಬೈ ಮತ್ತು ಜಾಮ್‌ನಗರ ಭೇಟಿ ಇದಕ್ಕೆ ಸಾಕ್ಷಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮೇಘಾಲಯ ಮತ್ತು ಗೋವಾ ರಾಜ್ಯಗಳು ಸ್ಟಾರ್‌ಲಿಂಕ್ ಜೊತೆ ಒಪ್ಪಂದಕ್ಕೆ ಮುಂದಾಗಿದ್ದರೂ, ಕೇಂದ್ರ ಸರ್ಕಾರ ಎಲ್ಲ ಮಾತುಕತೆಗಳನ್ನು ತಡೆಹಿಡಿಯುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದು ದೇಶೀಯ ಕಾರ್ಪೊರೇಟ್ ಪ್ರಭಾವವನ್ನು ಎತ್ತಿತೋರಿಸುತ್ತದೆ.
ಕೇಂದ್ರ ದೂರಸಂಪರ್ಕ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಸಾನಿ ಹೇಳಿರುವಂತೆ, ಈ ವಿಳಂಬವು ಸ್ಟಾರ್‌ಲಿಂಕ್‌ಗೆ ಮಾತ್ರ ಮಾಡುತ್ತಿರುವ ತಾರತಮ್ಯವಲ್ಲ, ಗೃಹ ಸಚಿವಾಲಯದಿಂದ ಭದ್ರತಾ ಅನುಮೋದನೆ ಬಾಕಿ ಇರುವುದರಿಂದ ಮೂರೂ ಕಂಪನಿಗಳು (ಜಿಯೋ, ಏರ್‌ಟೆಲ್, ಸ್ಟಾರ್‌ಲಿಂಕ್) ಒಂದೇ ಹಂತದಲ್ಲಿವೆ. ಭಾರ್ತಿ ಏರ್‌ಟೆಲ್ ಮುಖ್ಯಸ್ಥ ಸುನಿಲ್ ಭಾರತಿ ಮಿತ್ತಲ್ ಕೂಡ ತಾವು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಸ್ಟಾರ್‌ಲಿಂಕ್ ಹಿರಿಯ ಅಧಿಕಾರಿ ಲಾರೆನ್ ಡ್ರೆಯರ್, ಭಾರತದಲ್ಲೇ 20 ಗೇಟ್‌ವೇ ಸೈಟ್‌ಗಳನ್ನು ನಿರ್ಮಿಸಿ, ಡೇಟಾವನ್ನು ದೇಶದೊಳಗೆ ಸುರಕ್ಷಿತವಾಗಿಡಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಸ್ಕ್ ಸ್ಟಾರ್‌ಲಿಂಕ್ ವಿವಾದ | ಭಾರತದಲ್ಲಿ ಅನುಮತಿ ನೀಡದಂತೆ ಕೇಂದ್ರಕ್ಕೆ RSS ನಂಟಿನ SJM ಒತ್ತಾಯ
ಆದರೆ, 2024ರಲ್ಲಿ ಅಂಡಮಾನ್‌ನಲ್ಲಿ ಡ್ರಗ್ಸ್ ಕಳ್ಳಸಾಗಣೆ ಪ್ರಕರಣ ಹಾಗೂ ಮಣಿಪಾಲದಲ್ಲಿ ಉಗ್ರರ ಅಡಗುತಾಣದಲ್ಲಿ ಸ್ಟಾರ್‌ಲಿಂಕ್ ಟರ್ಮಿನಲ್‌ಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. GMPCS ಲೈಸೆನ್ಸ್‌ನ 43 ಷರತ್ತುಗಳಲ್ಲಿ 6 ಕಟ್ಟುನಿಟ್ಟಾದ ಭದ್ರತಾ ನಿಯಮಗಳಿದ್ದು, ಸ್ಟಾರ್‌ಲಿಂಕ್ ಎಲ್ಲವನ್ನೂ ಒಪ್ಪಿಕೊಂಡಿದೆ. ಬ್ರೆಜಿಲ್‌ನಲ್ಲಿ ಡಿಜಿಟಲ್ ಸಾರ್ವಭೌಮತ್ವದ ವಿವಾದ ಎದುರಿಸಿರುವ ಸ್ಟಾರ್‌ಲಿಂಕ್, ಬಾಂಗ್ಲಾದೇಶದಲ್ಲಿ ಸ್ಥಳೀಯ ಗೇಟ್‌ವೇ ರೂಟಿಂಗ್ ಕಡ್ಡಾಯಗೊಳಿಸಿಕೊಂಡಿದೆ. ಆದರೆ ಭಾರತದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 2025ರಲ್ಲಿ 65 ಇಂಟರ್ನೆಟ್ ಬಂದ್‌ಗಳನ್ನು ಮಾಡಲಾಗಿದ್ದು, ಸ್ಟಾರ್‌ಲಿಂಕ್ ಬಂದರೆ ಸರ್ಕಾರದ ಈ ‘ಇಂಟರ್ನೆಟ್ ಕಂಟ್ರೋಲ್ ಸ್ವಿಚ್’ ಕೈತಪ್ಪಬಹುದು ಎಂಬ ಆತಂಕವೂ ಇದರಲ್ಲಿದೆ.
2011ರಲ್ಲಿ ಆರಂಭವಾದ ಸರ್ಕಾರದ ‘ಭಾರತ್‌ನೆಟ್’ ಗ್ರಾಮೀಣ ಬ್ರಾಡ್‌ಬ್ಯಾಂಡ್ ಯೋಜನೆಯು ನವೆಂಬರ್ 2025ರ ವೇಳೆಗೆ ಕೇವಲ ಶೇ. 33.20 ರಷ್ಟು ಗ್ರಾಮ ಪಂಚಾಯತ್‌ಗಳಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂದಿದ್ದು, 12,347 ಗ್ರಾಮಗಳು ಇನ್ನೂ ಸಂಪರ್ಕವಿಲ್ಲದೆ ಉಳಿದಿವೆ. 2026ರ ಟ್ರಾಯ್ ವರದಿಯ ಪ್ರಕಾರ, ಗ್ರಾಮೀಣ ಭಾರತದಲ್ಲಿ ಪ್ರತಿ 100 ಜನರಿಗೆ ಕೇವಲ 49.07 ಇಂಟರ್ನೆಟ್ ಚಂದಾದಾರರಿದ್ದರೆ, ನಗರಗಳಲ್ಲಿ ಇದು 129.03 ಇದೆ. ಮಹಿಳೆಯರ ಮೊಬೈಲ್ ಇಂಟರ್ನೆಟ್ ಬಳಕೆ ಕೇವಲ 39% ರಷ್ಟಿದೆ. ಸ್ಟಾರ್‌ಲಿಂಕ್‌ನ ಬೆಲೆಯು ಭಾರತದ ಸರಾಸರಿ ಆದಾಯಕ್ಕಿಂತ ಹೆಚ್ಚಿರುವ ಕಾರಣ, ಇದರ ಮುಖ್ಯ ಗ್ರಾಹಕರು ಸದ್ಯಕ್ಕೆ ಸರ್ಕಾರ, ವ್ಯವಹಾರಗಳು ಮತ್ತು ನಗರ ಶ್ರೀಮಂತರಾಗುವ ಸಾಧ್ಯತೆಯಿದೆ.
ಎಲಾನ್ ಮಸ್ಕ್ ಕೂಡ ಶುದ್ಧ ಗ್ರಾಹಕ ಪರ ಹೋರಾಟಗಾರನೇನೂ ಅಲ್ಲ. ಆತನೂ ಒಬ್ಬ ಜಾಗತಿಕ ಕಾರ್ಪೊರೇಟ್ ಕುಳಾಧಿಪತಿಯೇ. ಆದರೆ ಭಾರತದ ಮೂಲೆಮೂಲೆಗೆ ಇಂಟರ್ನೆಟ್ ತಲುಪಬೇಕೆಂಬ ಸತ್ಯವನ್ನು ಸ್ಥಳೀಯ ದೈತ್ಯರ ಮಾರುಕಟ್ಟೆ ಏಕಸ್ವಾಮ್ಯ ಹಾಗೂ ಸರ್ಕಾರದ ಭದ್ರತೆಯ ರಾಜಕೀಯ ಕಾವಲು ಕಟ್ಟಿಹಾಕಿವೆ. ಅಂತಿಮವಾಗಿ ಈ ಹಗ್ಗಜಗ್ಗಾಟದಲ್ಲಿ ಬಲಿಪಶುವಾಗುತ್ತಿರುವುದು ಮಾತ್ರ ಅಂಚಿನಲ್ಲಿರುವ ಸಾಮಾನ್ಯ ಭಾರತೀಯ ನಾಗರಿಕನಷ್ಟೇ!





