ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ಸಂತ್ರಸ್ತೆಯನ್ನು ಮದುವೆಯಾಗಬೇಕೆಂಬ ಷರತ್ತಿನ ಮೇಲೆ ಅತ್ಯಾಚಾರ ಆರೋಪಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅಂತರ್ ಧರ್ಮೀಯ ಲಿವ್-ಎನ್ ರಿಲೇಷನ್‌ಶಿಪ್‌ನಲ್ಲಿದ್ದ ಸ್ನೇಹಿತ ಅತುಲ್ ಗೌತಮ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ತನ್ನ ಜೊತೆಗಿನ ಪ್ರೇಮ ಸಂಬಂಧವನ್ನು ತೊರೆದಿದ್ದಾನೆ. ತಾನು ಗರ್ಭಿಣಿಯಾಗಿದ್ದು, ತಮಗೆ ನ್ಯಾಯ ದೊರಕಿಸಬೇಕೆಂದು ಕೋರಿ ಸಂತ್ರಸ್ತ ಮುಸ್ಲಿಂ ಯುವತಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ, “ವಿಶೇಷ ವಿವಾಹ ಕಾಯ್ದೆ (SMA) ಅಡಿಯಲ್ಲಿ ಸಂತ್ರಸ್ತೆಯನ್ನು ಆರೋಪಿ ವಿವಾಹವಾಗಬೇಕು. ಸಂತ್ರಸ್ತೆ ಮತ್ತು ಮಗುವಿಗೆ ಆರ್ಥಿಕ ಭದ್ರತೆ ನೀಡಬೇಕು” ಎಂದು ಷರತ್ತು ವಿಧಿಸಿದ್ದು, ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿಚಾರಣೆಯ ಸಮಯದಲ್ಲಿ, ದೂರುದಾರ ಸಂತ್ರಸ್ತೆ ಮತ್ತು ಆರೋಪಿ ಮತ್ತೆ ಜೊತೆಯಾಗಿ ಬದುಕುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆ ಮತ್ತು ಮಗುವಿನ ಭವಿಷ್ಯದ ದೃಷ್ಟಿಯಿಂದ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಆರೋಪಿ ಮತ್ತು ಸಂತ್ರಸ್ತ ಯುವತಿ ಇಬ್ಬರೂ ಒಂದೆರಡು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿ ಇದ್ದರೆಂದು ಹೇಳಲಾಗಿದ್ದು, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಲು ಅವರು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.